×
Ad

ಬೆಂಗಳೂರಿನ ಎಫ್‌ಎಸ್‌ಎಲ್ ನಲ್ಲಿ ಸ್ಫೋಟ: ವಿಜ್ಞಾನಿಗಳು ಸೇರಿ ಹಲವರಿಗೆ ಗಾಯ

Update: 2019-11-29 19:23 IST

ಬೆಂಗಳೂರು, ನ.29: ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್)ದಲ್ಲಿ ಸ್ಫೋಟ ಸಂಭವಿಸಿ ವಿಜ್ಞಾನಿಗಳು ಸೇರಿದಂತೆ ಹಲವರಿಗೆ ಗಾಯವಾಗಿರುವ ಘಟನೆ ಇಲ್ಲಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಯೋಗಾಲಯ ಕೊಠಡಿಯಲ್ಲಿದ್ದ ವಿಜ್ಞಾನಿಗಳಾದ ನವ್ಯಾ, ವಿಶ್ವನಾಥ್, ಶ್ರೀನಾಥ್, ವಿಷ್ಣು ವಲ್ಲಭ, ಬಸವರಾಜ್ ಪ್ರಭು, ನೇತ್ರಾವತಿ ದಲಾಯತ್ ಸೇರಿ ಆರು ಮಂದಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ಸುಮಾರಿಗೆ ಕೆಮಿಕಲ್ ಲ್ಯಾಬ್ ನಲ್ಲಿದ್ದ 9 ಡಿಟೋನೇಟರ್‌ಗಳ ಪೈಕಿ ಒಂದು ಡಿಟೋನೇಟರ್ ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಸ್ಫೋಟದ ರಭಸಕ್ಕೆ ಪ್ರಯೋಗಾಲಯದಲ್ಲಿದ್ದ ಜನರಿಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.

ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಸುದ್ದಿ ತಿಳಿದ ಕೂಡಲೇ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಆಗ್ನೇಯ ಡಿಸಿಪಿ ಇಶಾಪಂತ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

‘25 ಗ್ರಾಂ ಸ್ಫೋಟಕ’
ರಾಸಾಯನಿಕ ವಿಭಾಗದಲ್ಲಿ ಸ್ಪೋಟಕ ಸಿಡಿದ ಪರಿಣಾಮ ಸ್ಥಳದಲ್ಲಿದ್ದ ವಸ್ತುಗಳು ಸೇರಿದಂತೆ ಹಲವರಿಗೆ ಗಾಯವಾಗಿದೆ. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 25 ಗ್ರಾಂ. ನಷ್ಟು ಸ್ಫೋಟಕ ಸಿಡಿದಿದೆ ಎನ್ನುವ ಮಾಹಿತಿ ಇದೆ.
-ಪರಶಿವಮೂರ್ತಿ, ಎಡಿಜಿಪಿ

ಯಾವುದು ಸ್ಫೋಟ?
ಕೆಲ ದಿನಗಳ ಹಿಂದೆ ರಾಯಚೂರಿನಲ್ಲಿ ಸ್ಫೋಟಕ ಪತ್ತೆಯಾಗಿತ್ತು. ಚಿಂದಿ ಆಯುವ ವ್ಯಕ್ತಿಗಳ ಕೈಗೆ ಸಿಕ್ಕಿದ್ದ ಸ್ಫೋಟಕ ಸ್ಫೋಟಗೊಂಡಿತ್ತು. ಅದನ್ನು ಪೊಲೀಸರು ಪರಿಶೀಲನೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಈ ಸಂದರ್ಭದಲ್ಲಿ ಸ್ಫೋಟಗೊಂಡಿದೆ. ಇದಕ್ಕೆ ಕಾರಣವೇನು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News