ಜಾಹೀರಾತು ಫಲಕಗಳ ಅಳವಡಿಕೆಗೆ ಅನುಮತಿ ನೀಡಿ: ದಲಿತ ಕೈಗಾರಿಕೋದ್ಯಮಿಗಳ ಒಕ್ಕೂಟದಿಂದ ಧರಣಿ

Update: 2019-11-29 16:36 GMT

ಬೆಂಗಳೂರು, ನ.29: ದಲಿತ ಸಮುದಾಯದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ನಗರ ವ್ಯಾಪ್ತಿಯಲ್ಲಿ ವಾಣಿಜ್ಯ ಜಾಹೀರಾತು ಫಲಕಗಳನ್ನು ಅಳವಡಿಸಲು ಪುನಃ ಅವಕಾಶ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಕೈಗಾರಿಕೋದ್ಯಮಿಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು.

ಶುಕ್ರವಾರ ಪುರಭವನ ಮುಂಭಾಗ ಜಮಾಯಿಸಿದ ಸದಸ್ಯರು, ನಗರದ ರಸ್ತೆ ಬದಿಗಳಲ್ಲಿ, ಗೋಡೆಗಳಲ್ಲಿ, ಕಟ್ಟಡಗಳ ಮೇಲ್ಭಾಗದಲ್ಲಿ, ಬಸ್ ನಿಲ್ದಾಣಗಳಲ್ಲಿ ಜಾಹೀರಾತು ಅಳವಡಿಸುವ ಕಾರ್ಯದಿಂದ ನೂರಾರು ಮಂದಿಗೆ ಉದ್ಯೋಗ ಸಿಗುತ್ತಿತ್ತು. ಆದರೆ, ಬಿಬಿಎಂಪಿ ಏಕಾಏಕಿ ಜಾಹೀರಾತನ್ನು ನಿಷೇಧಿಸಿರುವುದರಿಂದ ಹಲವು ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ ಪುನಃ ಜಾಹೀರಾತು ಅಳವಡಿಕೆಗೆ ಅನುಮತಿ ನೀಡಬೇಕೆಂದರು.

ನಗರದ ಪ್ರಮುಖ ಭಾಗಗಳಲ್ಲಿ ಜಾಹೀರಾತು ಅಳವಡಿಸುವ ಸಂಬಂಧ ಪಾಲಿಕೆ ಅನುಮತಿ ನೀಡಬೇಕು. ಯಾವುದೇ ತರಹದ ವಾಣಿಜ್ಯ ಹೋರ್ಡಿಂಗ್‌ಗಳು, ಚಾವಣಿಗಳ ಮೇಲೆ ಅಳವಡಿಸುವ ಸೈನೇಜ್ (ರೂಫ್ ಸೈನೇಜ್), ಸಾರ್ವಜನಿಕ ರಸ್ತೆಗಳ ಪಕ್ಕದಲ್ಲಿ ಅಳವಡಿಸುವ ಎಲೆಕ್ಟ್ರಾನಿಕ್ ಡಿಸ್‌ಪ್ಲೇ, ಸರಣಿ ಸಂದೇಶಗಳನ್ನು ನೀಡುವ ಜಾಹೀರಾತು, ಪ್ರಯಾಣಿಕರ ತಂಗುದಾಣ ಸ್ಕೈವಾಕ್‌ಗಳಲ್ಲಿ ಪ್ರಾಯೋಜಿತ ಜಾಹೀರಾತು ಅಳವಡಿಸಲು ಅವಕಾಶ ಕಲ್ಪಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News