ಜವಳಿ ಕಾರ್ಮಿಕರ ಪುನರ್ವಸತಿ ನಿಧಿ ಯೋಜನೆ: ಹೈಕೋರ್ಟ್ ಮೆಟ್ಟಿಲೇರಿದ ಕೆ.ಆರ್.ಮಿಲ್ಸ್ ಕಾರ್ಮಿಕರು
ಬೆಂಗಳೂರು, ನ.29: ರಾಷ್ಟ್ರೀಯ ಜವಳಿ ನೀತಿ-1985ರಡಿ ರೂಪಿಸಲಾಗಿರುವ ಜವಳಿ ಕಾರ್ಮಿಕರ ಪುನರ್ವಸತಿ ನಿಧಿ ಯೋಜನೆ ಅನ್ವಯ ಶೀಘ್ರವಾಗಿ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವಂತೆ ಕೋರಿ ಮೈಸೂರಿನ ಪ್ರಸಿದ್ಧ ಕೃಷ್ಣರಾಜೇಂದ್ರ ಮಿಲ್ಸ್ ಲಿಮಿಟೆಡ್ (ಕೆ.ಆರ್. ಮಿಲ್ಸ್) ಇದರ 500ಕ್ಕೂ ಹೆಚ್ಚು ಕಾರ್ಮಿಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಕುರಿತು ಕೆ.ಆರ್. ಮಿಲ್ಸ್‌ನ ಕಾರ್ಮಿಕರಾಗಿದ್ದ ಕೃಷ್ಣಮೂರ್ತಿ ಹಾಗೂ ಇತರರು ಸಲ್ಲಿಸಿರುವ ಅರ್ಜಿಯು ನ್ಯಾ. ಬಿ. ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.
ಈ ವೇಳೆ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ಬೇಕು ಎಂದು ಕೇಂದ್ರ ಸರಕಾರದ ಪರ ವಕೀಲರು ಮನವಿ ಮಾಡಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು. ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ಡಿ. ರೊಜಾರಿಯೋ ವಕಾಲತ್ತು ವಹಿಸಿದ್ದಾರೆ.
ಕೃಷ್ಣರಾಜೇಂದ್ರ ಮಿಲ್ಸ್ ಲಿಮಿಟೆಡ್ ಅನ್ನು 1934ರಲ್ಲಿ ಮಹಾತ್ಮಾ ಗಾಂಧೀಜಿಯವರು ಉದ್ಘಾಟಿಸಿದ್ದರು. ಈ ಮಧ್ಯೆ 1984ರ ಡಿ.22ರಂದು ಮಿಲ್ಸ್ ಅನ್ನು ಅನಧಿಕೃತವಾಗಿ ಮುಚ್ಚಲಾಯಿತು. ರಾಷ್ಟ್ರೀಯ ಜವಳಿ ನೀತಿ-1985ರಡಿ ಜವಳಿ ಕಾರ್ಮಿಕರ ಪುನರ್ವಸತಿ ನಿಧಿ ಯೋಜನೆಯನ್ನು ಕೇಂದ್ರ ಸರಕಾರ 1986ರಲ್ಲಿ ಜಾರಿಗೆ ತಂದಿತ್ತು. ಈ ಯೋಜನೆಯನ್ನು 2017ರಲ್ಲಿ ರಾಜೀವಗಾಂಧಿ ಶ್ರಮಿಕ ಕಲ್ಯಾಣ ಯೋಜನೆಯೊಂದಿಗೆ ಸಂಯೋಜನೆಗೊಳಿಸಲಾಯಿತು.
ಕೆ.ಆರ್. ಮಿಲ್ಸ್‌ನಲ್ಲಿ 3,250 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಈ ಪೈಕಿ 1,552 ಕಾರ್ಮಿಕರನ್ನು ಪರಿಹಾರ ಪಡೆದುಕೊಳ್ಳಲು ಅರ್ಹರು ಎಂದು ಗುರುತಿಸಲಾಗಿತ್ತು. ಅದರಂತೆ, 488 ಮಂದಿಗೆ ಭಾಗಶ: ಪರಿಹಾರ ಸಿಕ್ಕಿದೆ. 500ಕ್ಕೂ ಹೆಚ್ಚು ಕಾರ್ಮಿಕರಿಗೆ ಪರಿಹಾರ ಇನ್ನೂ ಸಿಗಬೇಕಾಗಿದೆ. ಏತನ್ಮಧ್ಯೆ 2019ರ ಎಪ್ರಿಲ್ 14 ಮತ್ತು 18ರಂದು ಅಧಿಸೂಚನೆ ಹೊರಡಿಸಿದ ಕೇಂದ್ರ ಜವಳಿ ಸಚಿವಾಲಯ 1985ರ ಜೂ.5ರ ನಂತರ ಸಂಪೂರ್ಣವಾಗಿ ಮುಚ್ಚಲ್ಪಟ್ಟ ಮಿಲ್‌ಗಳ ಕಾರ್ಮಿಕರು ‘ಜವಳಿ ಕಾರ್ಮಿಕರ ಪುನರ್ವಸತಿ ಯೋಜನೆ’ ವ್ಯಾಪ್ತಿಗೆ ಬರುತ್ತಾರೆ. ಆದರೆ, ಕೆ.ಆರ್. ಮಿಲ್ಸ್ 1984ರ ಜೂ.5ರಂದು ಮುಚ್ಚಲ್ಪಟ್ಟಿದೆ ಎಂದು ಹೇಳಿತ್ತು.
ಆದರೆ, 1984ರಲ್ಲಿ ಮಿಲ್ಸ್ ಅನಧಿಕೃತವಾಗಿ ಮುಚ್ಚಲ್ಪಟ್ಟಿತ್ತು. 1988ರ ಅ.27ರಂದು ಹೈಕೋರ್ಟ್ ಆದೇಶದಂತೆ ಮಿಲ್ಸ್ ಅನ್ನು ಶಾಶ್ವತವಾಗಿ ಮುಚ್ಚಲಾಯಿತು. ಹಾಗಾಗಿ, 1988ನ್ನು ಮಿಲ್ಸ್ ಮುಚ್ಚಿದ ಅವಧಿ ಎಂದು ಪರಿಗಣಿಸಬೇಕಾಗುತ್ತದೆ. ಹೀಗಾಗಿ, ನಾವು ಪುನರ್ವಸತಿ ಯೋಜನೆ ವ್ಯಾಪ್ತಿಗೆ ಬರುತ್ತೇವೆ ಎಂಬುದು 537 ಕಾರ್ಮಿಕರ ವಾದವಾಗಿದೆ.
ಹೀಗಾಗಿ, ಜವಳಿ ಕಾರ್ಮಿಕರ ಪುನರ್ವಸತಿ ನಿಧಿ ಯೋಜನೆ 1985ರ ಜೂ.5ರ ನಂತರ ಸಂಪೂರ್ಣವಾಗಿ ಮುಚ್ಚಲ್ಪಟ್ಟ ಮಿಲ್ಸ್‌ಗಳ ಕಾರ್ಮಿಕರಿಗೆ ಅನ್ವಯವಾಗುತ್ತದೆ ಎಂದು ಕೇಂದ್ರ ಜವಳಿ ಸಚಿವಾಲಯ 2019ರ ಎ. 14 ಮತ್ತು 18ರಂದು ಹೊರಡಿಸಿರುವ ಅಧಿಸೂಚನೆ ರದ್ದುಗೊಳಿಸಬೇಕು. ಅರ್ಹ ಕಾರ್ಮಿಕರಿಗೆ ಜವಳಿ ಕಾರ್ಮಿಕರ ಪುನರ್ವಸತಿ ನಿಧಿ ಯೋಜನೆಯಡಿ ಶೀಘ್ರವಾಗಿ ಪರಿಹಾರ ವಿತರಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.