ದೇಶಕ್ಕೆ ‘ಸಂವಿಧಾನ ಸಾಕ್ಷರತಾ ಆಂದೋಲನ’ದ ಅಗತ್ಯವಿದೆ!

Update: 2019-11-30 18:33 GMT

ಅಂಬೇಡ್ಕರ್‌ರವರು ತಮ್ಮ ಜೀವಿತಾವಧಿಯನ್ನು ಶೋಷಿತರು, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಏಳಿಗೆಗೆ ದುಡಿದಿದ್ದಾರೆ. ತಮ್ಮ ಅವಿರತ ಹೋರಾಟದಿಂದ ಸಾಮಾಜಿಕ ನ್ಯಾಯದ ಪ್ರತಿರೂಪವಾದ ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಪ್ರತಿಯೊಬ್ಬ ಪ್ರಜೆಯೂ ಸ್ವತಂತ್ರನಾಗಿ, ಸ್ವಾಭಿಮಾನಿಯಾಗಿ ಜೀವಿಸಬೇಕೆಂದು ಹಲವು ಹಕ್ಕುಗಳನ್ನು ಸಂವಿಧಾನದ ಮೂಲಭೂತ ಹಕ್ಕುಗಳ ಮೂಲಕ ನೀಡಿದ್ದಾರೆ.


ಪ್ರಧಾನಿ ಮೋದಿಯವರು ‘ಸಂವಿಧಾನ ದಿನಾಚರಣೆ’ಯ ಭಾಷಣದಲ್ಲಿ ಬಾಬಾಸಾಹೇಬರು ಇಂದು ಬದುಕಿದ್ದಿದ್ದರೆ ತುಂಬಾ ಖುಷಿಪಡುತ್ತಿದ್ದರು ಎಂದಿದ್ದಾರೆ. ಇದು ಎಷ್ಟು ತಮಾಷೆಯಾಗಿದೆಯೆಂದರೆ, ಇವರು ನಡೆಸುತ್ತಿರುವ ದುರಾಡಳಿತವನ್ನು ಕಂಡು ಬಾಬಾಸಾಹೇಬರು ಎಷ್ಟು ಮರುಕ ಪಡುತ್ತಿದ್ದರು ಎಂಬುದು ಬಾಬಾ ಸಾಹೇಬರನ್ನು ಅರಿತವರಿಗೆ ಮಾತ್ರ ಅರ್ಥವಾಗುತ್ತದೆ. ತಮ್ಮದೇ ಪಕ್ಷದ ಹಾಗೂ ಅಂಗ ಸಂಸ್ಥೆಗಳ ಜನರು ಬಾಬಾಸಾಹೇಬರು, ಸಂವಿಧಾನ, ಮೀಸಲಾತಿ ಮೊದಲಾದ ವಿಚಾರಗಳನ್ನೆತ್ತಿಕ್ಕೊಂಡು ವರ್ಷವಿಡಿ ಬೊಗಳುವುದನ್ನು ದೇಶದ ಜನತೆ ಕಂಡಿದ್ದಾರೆ. ಇಷ್ಟೆಲ್ಲಾ ತಿಳಿದರೂ ಪ್ರಧಾನಿಯವರು ಈ ಮಾತನ್ನು ಹೇಗೆ ಹೇಳಿದರು! ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆ ತನ್ನ ಸುತ್ತೋಲೆಯಲ್ಲಿ ಅಂಬೇಡ್ಕರ್‌ರನ್ನು ಅವಮಾನಿಸಿತ್ತು. ಮತ್ತೊಂದೆಡೆ, ‘ನವ ಬೆಂಗಳೂರು ಪ್ರತಿಷ್ಠಾನ’ ಎಂಬ ಸಂಘಟನೆಯು ಬಾಬಾಸಾಹೇಬರ ಚಿತ್ರದ ಬದಲು ಶ್ಯಾಮ್‌ಪ್ರಸಾದ್ ಮುಖರ್ಜಿಯವರ ಚಿತ್ರವನ್ನು ಪ್ರಕಟಿಸಿ ಅಂಬೇಡ್ಕರ್‌ರವರಿಗೆ ಅವಮಾನಿಸಿತ್ತು. ಹೀಗೆ ದೇಶದ ಉದ್ದಗಲಕ್ಕೂ ಅನೇಕ ಸಂವಿಧಾನ ವಿರೋಧಿ, ಬಾಬಾಸಾಹೇಬರ ವಿರೋಧಿ ಕೃತ್ಯಗಳು ಜರುಗುತ್ತಿದ್ದರೂ ಚಕಾರವೆತ್ತದ ಪ್ರಧಾನಿ ಮೋದಿಯವರು ತಮ್ಮ ಬಾಯಿ ಚಪಲಕ್ಕೆ ಇಂದು ಬಾಬಾಸಾಹೇಬರನ್ನು ಗುಣಗಾನ ಮಾಡಿದ್ದಾರೆ. ಇದು ಶುದ್ಧ ನಾಟಕವೆಂಬುದು ಎಲ್ಲರಿಗೂ ತಿಳಿದಿದೆ. ನಿಜವಾಗಿಯೂ ಇವರಿಗೆ ಸಂವಿಧಾನ ಮತ್ತು ಬಾಬಾಸಾಹೇಬರ ಮೇಲೆ ಗೌರವ, ಬದ್ಧತೆಗಳಿದಿದ್ದರೆ ಸಂವಿಧಾನಕ್ಕೆ ಮತ್ತು ಅಂಬೇಡ್ಕರ್‌ರಿಗೆ ಅಪಮಾನವೆಸಗುವವರನ್ನು ಪಕ್ಷದಿಂದ ಹೊರಹಾಕುವ ಇಲ್ಲವೆ ಅವರ ಮೇಲೆ ಕಾನೂನು ಕ್ರಮಗಳನ್ನು ಜಾರಿಗೊಳಿಸುವ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದ್ದರು. ಅದನ್ನು ಬಿಟ್ಟು ಜಾಣಕುರುಡುತನವನ್ನು ತೋರುತ್ತಿರಲಿಲ್ಲ. ಅಂಬೇಡ್ಕರ್‌ರವರು ತಮ್ಮ ಜೀವಿತಾವಧಿಯನ್ನು ಶೋಷಿತರು, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಏಳಿಗೆಗೆ ದುಡಿದಿದ್ದಾರೆ. ತಮ್ಮ ಅವಿರತ ಹೋರಾಟದಿಂದ ಸಾಮಾಜಿಕ ನ್ಯಾಯದ ಪ್ರತಿರೂಪವಾದ ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಪ್ರತಿಯೊಬ್ಬ ಪ್ರಜೆಯೂ ಸ್ವತಂತ್ರನಾಗಿ, ಸ್ವಾಭಿಮಾನಿಯಾಗಿ ಜೀವಿಸಬೇಕೆಂದು ಹಲವು ಹಕ್ಕುಗಳನ್ನು ಸಂವಿಧಾನದ ಮೂಲಭೂತ ಹಕ್ಕುಗಳ ಮೂಲಕ ನೀಡಿದ್ದಾರೆ. ಸಂವಿಧಾನ ಜಾರಿಯಾಗುವ ಮೊದಲು ದೇಶದಲ್ಲಿ ‘ಮನು ಸಂವಿಧಾನ’ ಜಾರಿಯಲ್ಲಿತ್ತು. ಅದರ ಆಧಾರದ ಮೇಲೆ ದೇಶದ ಜನರನ್ನು ಕೆಲವೇ ವರ್ಗದ ಜನ ಶೋಷಣೆ ಮಾಡುತ್ತಿದ್ದರು. ಆ ಶೋಷಣೆಯನ್ನು ಬಾಬಾಸಾಹೇಬರು ಎದುರಿಸಿದ್ದು ಎಲ್ಲರಿಗೂ ತಿಳಿದ ವಿಚಾರ. ಆದ್ದರಿಂದಲೇ, ಬಾಬಾಸಾಹೇಬರು 1935ರಲ್ಲಿ ‘ನಾನು ಹಿಂದೂವಾಗಿ ಹುಟ್ಟಿರಬಹುದು. ಆದರೆ, ಹಿಂದೂವಾಗಿ ಸಾಯಲಾರೆ.’ ಎಂದು ಘೋಷಿಸುವ ಮೂಲಕ 1956ರಲ್ಲಿ ಬೌದ್ಧ ಧರ್ಮವನ್ನು ಸೇರಿಕೊಂಡರು. ತಮ್ಮ ಅಧ್ಯಯನಗಳ ಮೂಲಕ ಹಿಂದೂ ಧರ್ಮದಲ್ಲಿರುವ ಹುಳುಕುಗಳನ್ನು ಜಗತ್ತಿಗೆ ಸಾರಿದರು. ಈ ದೇಶದ ಅಭಿವೃದ್ಧಿಗೆ ‘ಜಾತಿಪದ್ಧತಿ’ ಮಾರಕ ಅದು ನಿರ್ನಾಮವಾಗಬೇಕು ಎಂದು ತಿಳಿಸಿದರು. ಮುಂದುವರೆದು, ‘ಸಾಮಾಜಿಕ ಸ್ವಾತಂತ್ರ ಗಳಿಸದ ಹೊರತು, ಕಾನೂನಿನ ಮೂಲಕ ಒದಗಿಸುವ ಸ್ವಾತಂತ್ರ ಸಫಲವಾಗದು’ಎಂದಿದ್ದಾರೆ.(ಸಂಪುಟ17(3), ಪುಟ.127). ಬಾಬಾಸಾಹೇಬರು 1927 ಡಿಸೆಂಬರ್ 25ರಲ್ಲಿ ಸಮಾಜಕ್ಕೆ ಮಾರಕವಾಗಿದ್ದ ‘ಮನುಸ್ಮತಿ’ಯನ್ನು ಸುಟ್ಟು ಹಾಕಿದರು.

ದೇಶದಲ್ಲಿ ಸನಾತನವಾದಿಗಳು ಜಾರಿಮಾಡಲು ಹೊರಟಿರುವ ‘ಹಿಂದೂ ರಾಜ್’ ಪರಿಕಲ್ಪನೆಯನ್ನು ಬಾಬಾಸಾಹೇಬರು ವಿರೋಧಿಸಿದ್ದರು. ‘ಹಿಂದೂ ರಾಜ್ ಎಂಬುದು ಸತ್ಯವಾಗಿದ್ದರೆ ಅದು ಖಂಡಿತವಾಗಿ ಈ ದೇಶಕ್ಕೆ ವಿಪತ್ತಾಗುವುದರಲ್ಲಿ ಸಂಶಯವಿಲ್ಲ. ಹಿಂದೂಗಳು ಏನೇ ಹೇಳಿದರು ಈ ಕಲ್ಪನೆ ಸ್ವಾತಂತ್ರ, ಸಮಾನತೆ, ಭಾತೃತ್ವಗಳಿಗೆ ಅಪಾಯವಾಗಿದೆ. ಆದ್ದರಿಂದ, ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಹಿಂದೂ ರಾಜ್‌ನ್ನು ತಡೆಯಬೇಕು’ ಎಂದಿದ್ದರು(ಸಂಪುಟ8, ಪುಟ358). ಇದರಿಂದಲೇ ಸನಾತನವಾದಿಗಳು ಬಾಬಾಸಾಹೇಬರಿಗೆ ಅವಮಾನಿಸುವ, ಸಂವಿಧಾನವನ್ನು ಅವಮಾನಿಸುವ ಕೆಲಸವನ್ನು ಕಾಲಕಾಲಕ್ಕೆ ಮಾಡುತ್ತಾ ಬರುತ್ತಿದ್ದಾರೆ. ಬಾಬಾಸಾಹೇಬರೆ ಹೇಳಿದಂತೆ ‘ಹಿಂದೂಗಳಿಗೆ ವೇದಗಳು ಬೇಕಾದಾಗ ಅವರು ವ್ಯಾಸನನ್ನು ಅವಲಂಬಿಸಿದರು, ವ್ಯಾಸರು ಹಿಂದೂ ಜಾತಿಯಲ್ಲ. ರಾಮಾಯಣ ಬೇಕಾದಾಗ ವಾಲ್ಮೀಕಿಯನ್ನು ಅವಲಂಬಿಸಿದರು, ವಾಲ್ಮೀಕಿ ಅಸ್ಪಶ್ಯ; ಸಂವಿಧಾನ ಬೇಕಾದಾಗ ನನ್ನನ್ನು ಅವಲಂಬಿಸಿದರು (ಮಾಥಾಯ್ 1978, ಪುಟ25). ಹೀಗೆ ಪ್ರಪಂಚದ ಅನೇಕ ದೇಶಗಳ ಸಂವಿಧಾನಗಳನ್ನು, ಕಾನೂನುಗಳನ್ನು ಅಭ್ಯಸಿಸಿ ಬಾಬಾಸಾಹೇಬರು ಜಗತ್ತಿನಲ್ಲೇ ಶ್ರೇಷ್ಠ ಸಂವಿಧಾನವನ್ನು ಭಾರತಕ್ಕೆ ನೀಡಿದ್ದಾರೆ. ಇಷ್ಟೆಲ್ಲಾ ಸಂವಿಧಾನ ವಿರೋಧಿ ಕೃತ್ಯಗಳು ದೇಶದಲ್ಲಿ ಜರುಗಲು ಪ್ರಮುಖ ಕಾರಣ ಜನರಲ್ಲಿ ಸಂವಿಧಾನ ಮತ್ತು ಬಾಬಾಸಾಹೇಬರ ಬಗ್ಗೆ ಇರುವ ವೌಢ್ಯವಾಗಿದೆ. ಅಲ್ಲದೇ ಇಂತಹ ಹೀನಕೃತ್ಯಗಳನ್ನು ಅನಕ್ಷರಸ್ಥರಿಗಿಂತ ಅಕ್ಷರಸ್ಥರೆ ಎಸಗುತ್ತಿರುವುದು ಶೋಚನೀಯ. ಇದು ಸಂವಿಧಾನದ ಬಗ್ಗೆ ಅಕ್ಷರಸ್ಥ ಸಮೂಹಕ್ಕಿರುವ ಅಸ್ಪಷ್ಟ ಮಾಹಿತಿಯನ್ನು ತೋರುತ್ತದೆ. ಆದ್ದರಿಂದಲೇ, ದೇಶದೆಲ್ಲಡೆ ಸಂವಿಧಾನ ಸಾಕ್ಷರತಾ ಆಂದೋಲನದ ಕೂಗು ಕೇಳಿಬರುತ್ತಿದೆ. ಸರಕಾರಗಳು ಸಂವಿಧಾನವನ್ನು ಶೈಕ್ಷಣಿಕ ಪಠ್ಯಗಳಲ್ಲಿ ಸೇರಿಸಿವೆ. ಆದರೆ, ಅದು ಎಷ್ಟರ ಮಟ್ಟಿಗೆ ಮಕ್ಕಳಿಗೆ ತಲುಪುತ್ತಿದೆ ಎಂಬುದರ ಅರಿವಿಲ್ಲ.

ಇಂದು ಶಿಕ್ಷಕರೇ ಸಂವಿಧಾನ ವಿರೋಧಿ, ಅಂಬೇಡ್ಕರ್ ವಿರೋಧಿ ಕೃತ್ಯಗಳನ್ನು ಎಸಗುತ್ತಿರುವುದು ವಿಪರ್ಯಾಸ. ಪ್ರತಿ ಮಗುವನ್ನು ದೇಶದ ಆದರ್ಶ ಪ್ರಜೆಯಾಗಿ ಪರಿವರ್ತಿಸಬೇಕಿದ್ದ ಶಿಕ್ಷಕರು, ಮಕ್ಕಳಿಗೆ ಜಾತೀಯತೆ, ಕೋಮುವಾದ ಮೊದಲಾದ ನಂಜನ್ನು ಶಿಕ್ಷಣದ ಮೂಲಕ ಮಕ್ಕಳ ತಲೆಗೆ ಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ. ಸ್ವತಂತ್ರಪೂರ್ವ ಭಾರತದಲ್ಲಿ ಕೆಲವೇ ಸಮುದಾಯಗಳು ದೇಶದ ಬಹುಸಂಖ್ಯಾತ ಸಮುದಾಯದ ಜನರನ್ನು ತಮ್ಮ ಚಾತುರ್ವರ್ಣ ಪದ್ಧತಿಯ ಮೂಲಕ ಆಳುತ್ತಿದ್ದರು. ದೇಶದ ಎಲ್ಲ ಸಂಪತ್ತನ್ನು ಅನೇಕ ವರ್ಷಗಳ ಕಾಲ ಅನುಭವಿಸಿದರು. ಈ ಸಾಮಾಜಿಕ ಅನ್ಯಾಯವನ್ನು ಸರಿಪಡಿಸಲೆಂದೆ ಮೀಸಲಾತಿ ಎಂಬ ಪ್ರಾತಿನಿಧ್ಯವನ್ನು ಬಾಬಾಸಾಹೇಬರು ತಮ್ಮ ಸಂವಿಧಾನದಲ್ಲಿ ಅಳವಡಿಸಿದ್ದಾರೆ. ದೇಶದ ಹಿಂದುಳಿದ, ಅಲ್ಪಸಂಖ್ಯಾತ, ಶೋಷಿತ ಸಮುದಾಯಗಳು ಎಲ್ಲರಂತೆ ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳಲು ಇದು ಅನುವುಮಾಡಿಕೊಡುತ್ತದೆ. ಆದರೆ, ಈ ಸವಲತ್ತನ್ನು ಪಡೆಯುತ್ತಿರುವ ಕೆಲವು ಸಮುದಾಯಗಳು ಇಂದು ಸಂವಿಧಾನ ವಿರೋಧಿ, ಅಂಬೇಡ್ಕರ್ ವಿರೋಧಿ ಕೆಲಸವನ್ನು ಮಾಡುತ್ತಿರುವುದು ದುರ್ದೈವ. ಜನವರಿ 26, 1950ರಂದು ಬಾಬಾಸಾಹೇಬರು ಸಂವಿಧಾನವನ್ನು ರಚನಾ ಸಭೆಯಲ್ಲಿ ‘ನಾವು ಇಂದಿನಿಂದ ವೈರುಧ್ಯದ ಜೀವನಕ್ಕೆ ಕಾಲಿಡುತ್ತಿದ್ದೇವೆ, ರಾಜಕೀಯವಾಗಿ ನಾವೆಲ್ಲರೂ ಸಮಾನರಾಗಿರುತ್ತೇವೆ. ಆದರೆ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಸಮಾನರಾಗಿರುತ್ತೇವೆ. ರಾಜಕೀಯವಾಗಿ ನಾವು ಒಬ್ಬ ವ್ಯಕ್ತಿಗೆ ಒಂದು ವೋಟು, ಒಂದು ವೋಟಿಗೆ ಒಂದೇ ವೌಲ್ಯ ಎಂಬ ತತ್ವದಿಂದ ಗುರುತಿಸಲ್ಪಡುತ್ತೇವೆ. ಆದರೆ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯ ಕಾರಣ ಸಾಮಾಜಿಕ ಮತ್ತು ಆರ್ಥಿಕ ರಂಗದಲ್ಲಿ ಒಬ್ಬ ವ್ಯಕ್ತಿ ಒಂದು ವೌಲ್ಯ ಎಂಬುದರಿಂದ ವಂಚಿರಾಗತ್ತೇವೆ. ನಾವು ಎಲ್ಲಿಯವರೆಗೆ ಈ ವೈರುಧ್ಯದಲ್ಲಿ ಬದುಕುವುದು? ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಎಲ್ಲಿಯವರೆಗೆ ಸಹಿಸುವುದು? ಇದನ್ನು ಮುಂದುವರಿಸುವುದೆಂದರೆ ರಾಜಕೀಯ ಸ್ವಾತಂತ್ರಕ್ಕೆ ನಾಂದಿ ಹಾಡಿದಂತೆ. ಈ ವೈರುಧ್ಯವನ್ನು ಆದಷ್ಟು ಬೇಗ ಅಳಿಸಿಹಾಕಬೇಕು ಇಲ್ಲವಾದರೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗೆ ಒಳಗಾದ ಜನ ಪರಿಶ್ರಮದಿಂದ ರಚಿಸಿದ ರಾಜಕೀಯ ಪ್ರಜಾಪ್ರಭುತ್ವ ನಾಶಮಾಡುತ್ತಾರೆ ಎಂದು ಆತಂಕವನ್ನು ವ್ಯಕ್ತಪಡಿಸುತ್ತಾರೆ.

ಮುಂದುವರೆದು ಸಂಪುಟ 13 ಪುಟ 70ರಲ್ಲಿ ನಮೂದಿಸಿರುವಂತೆ ‘ಸಂವಿಧಾನ ಉತ್ತಮವಾಗಿದೆ, ಶಾಂತಿಯುತವಾದ ಮತ್ತು ಯುದ್ಧ ಸಮಯದಲ್ಲೂ ದೇಶವನ್ನು ಮುನ್ನಡೆಸಿಕೊಂಡು ಹೋಗುವಷ್ಟು ಪ್ರಬಲವಾಗಿದೆ. ಹಾಗೇನಾದರೂ, ಹೊಸ ಸಂವಿಧಾನದಡಿಯಲ್ಲಿ ಕೆಟ್ಟದ್ದೇನಾದರೂ ಸಂಭವಿಸಿದರೆ ಅದರರ್ಥ ನಾವು ಕೆಟ್ಟ ಸಂವಿಧಾನವನ್ನು ಹೊಂದಿದ್ದೇವೆ ಎಂದರ್ಥವಲ್ಲ. ಬದಲಿಗೆ ಅದನ್ನು ಜಾರಿಗೊಳಿಸುವವರು ಕೆಟ್ಟವರಿದ್ದಾರೆ ಎಂದರ್ಥ’ ಎಂದಿದ್ದರು. ಹೀಗೆ ಆಡಳಿತರೂಢ ಮನುವಾದಿಗಳು ದೇಶದ ಜನರಲ್ಲಿ ಸಂವಿಧಾನ ವಿರೋಧಿ, ಅಂಬೇಡ್ಕರ್ ವಿರೋಧಿ ತತ್ವಗಳನ್ನು ತುಂಬುವ ಮೂಲಕ ದೇಶವನ್ನು ಅಧೋಗತಿಗೆ ತಳ್ಳುತ್ತಿದ್ದಾರೆ. ಬಾಬಾಸಾಹೇಬರು ಕಂಡ ಬಹುತ್ವ ತತ್ವವನ್ನು ಸಂವಿಧಾನವನ್ನು ತಿರುಚುವ ಮೂಲಕ ನಾಶಮಾಡುತ್ತಿದ್ದಾರೆ. ಪ್ರಪಂಚದ ನಾನಾ ದೇಶಗಳಲ್ಲಿ ಬಾಬಾಸಾಹೇಬರ ಪ್ರತಿಭೆಯು ಅನಾವರಣವಾಗುವುದನ್ನು ಈ ದೇಶದ ಮೂಲಭೂತವಾದಿಗಳು ಸಹಿಸಿಕೊಳ್ಳುತ್ತಿಲ್ಲ. ಹಾಗೆಯೇ, ದೇಶದ ಮನುವಾದಿಗಳು ಜನಗಳ ನಡುವೆ ದ್ವೇಷವನ್ನು, ಕೋಮು ಸಂಘರ್ಷವನ್ನು ತಂದೊಡ್ಡಿ ತಮ್ಮ ರಹಸ್ಯ ಕಾರ್ಯಾಚರಣೆಗಳನ್ನು ಸಾಧಿಸಿಕೊಳ್ಳುತ್ತಾರೆ. ಆದ್ದರಿಂದ, ಜನರು ಜಾಗರೂಕರಾಗಿ ಈ ದೇಶದ ಶ್ರೇಷ್ಠ ಗ್ರಂಥವಾದ ಸಂವಿಧಾನವನ್ನು ಅದರ ಕರ್ತೃವನ್ನು ಅವಮಾನಿಸುವವರ ವಿರುದ್ಧ ಕಾನೂನಾತ್ಮಕ ಹೋರಾಟಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಅಲ್ಲದೇ ಸಂವಿಧಾನ ಮತ್ತು ಅಂಬೇಡ್ಕರ್‌ರ ಬಗ್ಗೆ ಇತರೆ ಜನರಿಗೆ ಅರಿವು ಮೂಡಿಸುವ ‘ಸಂವಿಧಾನ ಸಾಕ್ಷರತಾ ಆಂದೋಲನ’ವನ್ನು ನಡೆಸುವ ಮೂಲಕ ಬಹುತ್ವ ಭಾರತವನ್ನು ಕಾಪಾಡಿಕೊಳ್ಳಬೇಕಿದೆ.

Writer - ಶ್ರೀನಿವಾಸ್ ಕೆ.

contributor

Editor - ಶ್ರೀನಿವಾಸ್ ಕೆ.

contributor

Similar News