ಒಂಬತ್ತು ದಿನಗಳ ಹೆಣ್ಣು ಮಗುವಿನ ಕೊಲೆ ಪ್ರಕರಣ: ಮಗುವಿನ ಅಜ್ಜಿ ಬಂಧನ
ಬೆಂಗಳೂರು, ಡಿ.1: ಹೆಣ್ಣು ಮಗು ಜನಿಸಿತು ಎಂಬ ಕಾರಣಕ್ಕೆ ಒಂಭತ್ತೇ ದಿನಕ್ಕೆ ಮಗುವಿನ ಕುತ್ತಿಗೆ ಹಿಸುಕಿ ಕೊಲೆಗೈದ ಆರೋಪ ಪ್ರಕರಣ ಸಂಬಂಧ ಮಹಿಳೆಯನ್ನು ಇಲ್ಲಿನ ಸೋಲದೇವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ಪರಮೇಶ್ವರಿ(60) ಬಂಧಿತ ಮಹಿಳೆಯಾಗಿದ್ದು, ಈಕೆ ಮೃತ ಮಗುವಿನ ಅಜ್ಜಿ ಎಂದು ಪೊಲೀಸರು ತಿಳಿಸಿದ್ದಾರೆ.
ನ.29ರ ರಾತ್ರಿ ತಮಿಳು ಸೆಲ್ವಿ ಎಂಬವರು ಮಗುವಿಗೆ ಹಾಲುಣಿಸಿ ಆಟವಾಡಿ ಸುತ್ತಿದ್ದರು. ಬಳಿಕ, ಅತ್ತೆ ಪರಮೇಶ್ವರಿ ಅವರ ಕೈಗೆ ನೀಡಿ, ಅಡುಗೆ ಮನೆಗೆ ಹೋಗಿದ್ದಾರೆ. ಅಷ್ಟರಲ್ಲಿಯೇ, ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಮನೆಯ ಹಿಂಬದಿಯ ಜಾಗದಲ್ಲಿ ಎಸೆಯಲಾಗಿದೆ ಎಂದು ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ದೂರಿನ್ವಯ ಪರಮೇಶ್ವರಿ ಅನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹೆಣ್ಣು ಮಗು ಹುಟ್ಟಿದ ಕಾರಣಕ್ಕಾಗಿ ಈ ಕೃತ್ಯವೆಸಗಿದ್ದಾರೆ ಎನ್ನುವ ಮಾಹಿತಿ ಪ್ರಾಥಮಿಕ ವಿಚಾರಣೆಯಲ್ಲಿ ಗೊತ್ತಾಗಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.