ಪಕ್ಷಾಂತರಿಗಳ ಸೋಲು ನಿಶ್ಚಿತ: ಮಲ್ಲಿಕಾರ್ಜುನ ಖರ್ಗೆ

Update: 2019-12-01 18:06 GMT

ಬೆಂಗಳೂರು, ಡಿ. 1: ಮಹಾರಾಷ್ಟ್ರ ಮಾದರಿಯಲ್ಲೆ ರಾಜ್ಯದ ಉಪಚುನಾವಣೆಯಲ್ಲಿ ಪಕ್ಷಾಂತರಿಗಳು ಸೋಲು ನಿಶ್ಚಿತ. ಬಿಜೆಪಿ ಆಮಿಷಕ್ಕೆ ಬಲಿಯಾಗಿದ್ದ ಶೇ.70ರಷ್ಟು ಮಂದಿ ಸೋಲು ಕಂಡಿದ್ದಾರೆಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ರವಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ಧಾಂತ ಹಾಗೂ ಒಂದು ಪಕ್ಷದ ಕಾರ್ಯಕ್ರಮಗಳ ಮೇಲೆ ಮತ ಪಡೆದು ಆಯ್ಕೆಯಾದವರು ಪಕ್ಷ ಬಿಟ್ಟು ಹೋಗಿ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಜನ ಅವರನ್ನು ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.

ಪ್ರಜಾಪ್ರಭುತ್ವ ಹಾಗೂ ಜನರ ಮೂಲಭೂತ ಹಕ್ಕು ರಕ್ಷಣೆಯಾಗಬೇಕಾದರೆ ಹಣದ ಪ್ರಭಾವಕ್ಕೆ ಒಳಗಾಗದೆ ಜನ ಪಕ್ಷಾಂತರಿಗಳನ್ನು ಸೋಲಿಸಬೇಕು ಎಂದು ಕರೆ ನೀಡಿದ ಅವರು, ಕಾಂಗ್ರೆಸ್-ಜೆಡಿಎಸ್ ಶಾಸಕರು ಸಿದ್ಧಾಂತದ ಆಧಾರದ ಮೇಲೆ ಪಕ್ಷಾಂತರ ಮಾಡಿದ್ದರೆ ಅದನ್ನು ಒಪ್ಪಬಹುದಿತ್ತು ಎಂದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರು 'ಸಿಎಂ ನಮ್ಮನ್ನು ಕೇಳುತ್ತಿಲ್ಲ, ನಮ್ಮ ಕೆಲಸಗಳಾಗುತ್ತಿಲ್ಲ' ಎಂಬ ಕ್ಷುಲ್ಲಕ ಕಾರಣ ನೀಡಿದ್ದು, ಸಿದ್ದರಾಮಯ್ಯ ಸರಕಾರದಲ್ಲಿ ಹೆಚ್ಚು ಲಾಭ ಪಡೆದವರೇ ಈ ರೀತಿಯ ಆರೋಪ ಮಾಡುತ್ತಿರುವುದು ವಿಪರ್ಯಾಸ ಎಂದು ಟೀಕಿಸಿದರು.

ಚುನಾವಣೆಗಳಲ್ಲಿ ಬಿಜೆಪಿ ಹಣದ ಪ್ರಭಾವ ಬಳಸುತ್ತಿದ್ದು, ಅದು ಯಶಸ್ವಿಯಾಗದೆ ಇದ್ದರೆ ಧರ್ಮ-ಜಾತಿ ಎಂಬ ಭಾವನಾತ್ಮಕ ವಿಷಯ ಬಳಸಿ ಸಮಾಜ ಒಡೆಯುವ ಪ್ರಯತ್ನ ಮಾಡುತ್ತಾರೆಂದು ಆರೋಪಿಸಿದ ಅವರು, ಇದರಲ್ಲಿ ಬಿಜೆಪಿ ಯಶಸ್ವಿ ಆಗುವುದಿಲ್ಲ ಎಂದು ಎಚ್ಚರಿಸಿದರು.

ಸೇಡು ತೀರಿಸಿಕೊಳ್ಳವುದು: ರಾಜ್ಯದಲ್ಲಿ ಭೀಕರ ಸ್ವರೂಪದ ಪ್ರವಾಹ ಉಂಟಾದರೂ ಪ್ರಧಾನಿ ಮೋದಿ ಕರ್ನಾಟಕಕ್ಕೆ ಭೇಟಿ ನೀಡಲಿಲ್ಲ. ನೆರೆ ಪರಿಹಾರಕ್ಕೆ ಹಣವನ್ನೂ ನೀಡಲಿಲ್ಲ. ಬಿಎಸ್‌ವೈ ಅವರ ಮೇಲಿನ ಸಿಟ್ಟನ್ನು ಮೋದಿ ರಾಜ್ಯದ ಜನರ ಮೇಲೆ ತೀರಿಸಿಕೊಳ್ಳಲು ಮುಂದಾಗಿದ್ದಾರೆಂದು ಟೀಕಿಸಿದರು.

ದೇಶದ ಜಿಡಿಪಿ ಶೇ.4.5ಕ್ಕೆ ಕುಸಿದಿದೆ. ಇತಿಹಾಸದಲ್ಲೇ ಅತಿಹೆಚ್ಚು ನಿರುದ್ಯೋಗ ದಾಖಲಾಗಿದೆ. ಈರುಳ್ಳಿ ಬೆಲೆ 120ರೂ.ಗೆ ಏರಿಕೆ ಯಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದ್ಯಾವುದನ್ನೂ ನಿಯಂತ್ರಿಸುವ ಗೋಜಿಗೆ ಸರಕಾರಗಳು ಹೋಗುತ್ತಿಲ್ಲ. ಆದರೆ ಅಧಿಕಾರ ಹಿಡಿಯುವ ವಿಷಯದಲ್ಲಿ ಹೆಚ್ಚು ಆಸಕ್ತಿ ತೋರುತ್ತಿವೆ ಎಂದು ವಾಗ್ದಾಳಿ ನಡೆಸಿದರು.

‘ಕಲಬುರಗಿಯ ವಿಮಾನ ನಿಲ್ದಾಣ ರಾಜ್ಯದಲ್ಲೇ ಅತಿ ಉದ್ದದ ರನ್‌ವೇ ಹೊಂದಿದೆ. ರಾಜ್ಯದ ಹಣದಿಂದಲೇ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಅದರ ಉದ್ಘಾಟನೆಗೆ ಮೋದಿ ಬರಬೇಕಿತ್ತು. ಆದರೆ, ಬಿಎಸ್‌ವೈ ಮುಖ ನೋಡಲು ಇಷ್ಟವಿಲ್ಲದ ಮೋದಿ ಕಾರ್ಯಕ್ರಮಕ್ಕೆ ಬರಲಿಲ್ಲ’

-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಹಿರಿಯ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News