×
Ad

ಎನ್‌ಆರ್‌ಸಿ ಮೂಲಕ ಜನತೆಯ ಪೌರತ್ವ ನಿರ್ಧರಿಸುವ ಹಕ್ಕು ಕೇಂದ್ರ ಸರಕಾರಕ್ಕಿಲ್ಲ: ಕಣ್ಣನ್ ಗೋಪಿನಾಥನ್

Update: 2019-12-01 20:02 IST

ಬೆಂಗಳೂರು, ಡಿ.1: ಕೇವಲ ದಾಖಲಾತಿಗಳ ಆಧಾರದ ಮೇರೆಗೆ ದೇಶದ ಪ್ರಜೆಯ ಪೌರತ್ವವನ್ನು ನಿರ್ಧರಿಸುವ ಹಕ್ಕು ಕೇಂದ್ರ ಸರಕಾರಕ್ಕಿಲ್ಲವೆಂದು ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಅಭಿಪ್ರಾಯಿಸಿದ್ದಾರೆ.

ರವಿವಾರ ಪಿಯುಸಿಎಲ್, ಕೆವಿಎಸ್, ಸ್ವರಾಜ್ ಇಂಡಿಯಾ ಸೇರಿದಂತೆ ಜನಪರ ಸಂಘಟನೆಗಳ ಒಕ್ಕೂಟ ನಗರದಲ್ಲಿ ಆಯೋಜಿಸಿದ್ದ ‘ಇಂದಿನ ಪ್ರಜಾಪ್ರಭುತ್ವಕ್ಕಿರುವ ಸವಾಲುಗಳು’ ವಿಷಯದ ಕುರಿತು ಮಾತನಾಡಿದ ಅವರು, ದೇಶದ ಸಾಮಾನ್ಯ ಜನತೆಯ ಮೇಲೆ ಕೇಂದ್ರ ಸರಕಾರ ಎನ್‌ಆರ್‌ಸಿ ಮತ್ತು ನಾಗರೀಕತೆ ತಿದ್ದುಪಡಿ ಮಸೂದೆಯನ್ನು ಒತ್ತಾಯದಿಂದ ಹೇರುವ ಮೂಲಕ ವಿನಾಕಾರಣ ಕಿರುಕುಳ ಕೊಡಲು ಪ್ರಾರಂಭಿಸಿದೆ. ಇದನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ವಿರೋಧಿಸಬೇಕಾಗಿದೆ ಎಂದರು.

ಇಂದಿಗೂ ದೇಶದಲ್ಲಿರುವ ದಲಿತರು, ಬುಡಕಟ್ಟು, ಆದಿವಾಸಿಗಳು, ಅಲ್ಪಸಂಖ್ಯಾತ ಸಮುದಾಯ ಹಾಗೂ ಮಹಿಳೆಯರ ಬಳಿ ತಮ್ಮ ಪೌರತ್ವ ಸಾಬೀತು ಪಡಿಸುವಷ್ಟು ದಾಖಲಾತಿಯಿಲ್ಲ. ಅಂದ ಮಾತ್ರಕ್ಕೆ ಇವರೆಲ್ಲರೂ ವಲಸಿಗರಾಗುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ಸರಕಾರ ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೆ, ದೇಶದ ಎಲ್ಲ ಸಮಸ್ಯೆಯನ್ನು ಜನತೆಯ ಮೇಲೆ ಹಾಕುವುದು ಎಷ್ಟು ಸರಿಯೆಂದು ಪ್ರಶ್ನಿಸಿದರು.

ಕೇಂದ್ರ ಸರಕಾರ ಅಸ್ಸಾಂ ರಾಜ್ಯದಲ್ಲಿ ಎನ್‌ಆರ್‌ಸಿ ಜಾರಿ ಮಾಡಿ, ಸುಮಾರು 50 ಸಾವಿರ ಮಂದಿ ಸುಮಾರು 6 ವರ್ಷ ಕೆಲಸ ಮಾಡಿದ್ದರೂ ರಾಜ್ಯದ ಎಲ್ಲ ಜನತೆಗೂ ಸರಿಯಾದಂತಹ ದಾಖಲಾತಿಯನ್ನು ಕೊಡಲು ಸಾಧ್ಯವಾಗಿಲ್ಲ. ಆದರೆ, ಇದಕ್ಕಾಗಿ 16 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಜನತೆಯ ತಮ್ಮ ದಾಖಲಾತಿಗಳನ್ನು ಮಾಡಿಸಿಕೊಳ್ಳುವುದಕ್ಕಾಗಿ ಸುಮಾರು 8 ಸಾವಿರ ಕೋಟಿ ರೂ. ಖರ್ಚು ಮಾಡಿದ್ದಾರೆ. ಆದರೂ ಅಲ್ಲಿ 12 ಲಕ್ಷ ಹಿಂದೂಗಳು, 7ಲಕ್ಷ ಮುಸ್ಲಿಮ್ ಮಂದಿಗೆ ದಾಖಲಾತಿ ಸಿಗಲಿಲ್ಲ. ಇದನ್ನು ದೇಶಾದ್ಯಂತ ಹೇರುವ ಮೂಲಕ ದೇಶದ ಸಾಮಾನ್ಯ ಜನತೆಯನ್ನು ಭಯಭೀತರನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರಕ್ಕೆ ನೋಟು ನಿಷೇಧ ಮಾಡಿದ ನಂತರ ಏನು ಮಾಡಬೇಕೆಂದು ಸ್ಪಷ್ಟತೆ ಇರಲಿಲ್ಲ. ಹಾಗೆಯೇ ಜಿಎಸ್‌ಟಿ ಜಾರಿಯಾದ ನಂತರ ಸ್ಪಷ್ಟತೆ ಇರಲಿಲ್ಲ. ಈಗ ಅಸ್ಸಾಂನಲ್ಲಿ ಎನ್‌ಆರ್‌ಸಿ ಜಾರಿ ಮಾಡಿ, ಅಲ್ಲಿ ಸರಿಯಾದ ದಾಖಲಾತಿ ಹೊಂದಿಲ್ಲದಿರುವ ಜನತೆಯ ಬಗ್ಗೆ ಯಾವ ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸುತ್ತಿಲ್ಲ. ಹೀಗೆ ಜನತೆಯನ್ನು ಸದಾ ಗೊಂದಲದಲ್ಲಿ ಇಡುವ ಮೂಲಕ ತಮ್ಮ ಸ್ವಾರ್ಥ ಹಿತಾಸಕ್ತಿಯಗಳನ್ನು ಬೆಳೆಸಿಕೊಳ್ಳಲು ಮುಂದಾಗಿದೆ ಎಂದು ಅವರು ಆರೋಪಿಸಿದರು.

‘ಕೇಂದ್ರ ಸರಕಾರ ತಾವು ಮಾಡುವ ಅನಾಚಾರಗಳಿಗೆ, ಜನವಿರೋಧಿ ನೀತಿಗಳಿಗೆ ರಾಷ್ಟ್ರೀಯತೆಯ ಮುಖವಾಡ ಧರಿಸಿ, ಎಲ್ಲರನ್ನು ಮೌನವಾಗಿಸುವ ಕಾರ್ಯತಂತ್ರವನ್ನು ಎಣಿಯುತ್ತಿದೆ. ಇದನ್ನು ಪ್ರಜ್ಞಾವಂತ ನಾಗರಿಕರು ಖಂಡಿಸಬೇಕಾಗಿದೆ’
-ಸಸಿಕಾಂತ್ ಸೆಂಥಿಲ್, ಮಾಜಿ ಐಎಎಸ್ ಅಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News