ಬಿಜೆಪಿ ಅಭ್ಯರ್ಥಿಯ ನೋಟು ಪಡೆದು, ಕಾಂಗ್ರೆಸ್ ಗೆ ಓಟು ಹಾಕಿ: ಸಿದ್ದರಾಮಯ್ಯ

Update: 2019-12-01 14:33 GMT

ಬೆಂಗಳೂರು, ಡಿ.1: ಜನರ ತೀರ್ಪು ವಿರೋಧಿಸಿ ಹೋಗಿರುವ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜು ಬಳಿ ನೋಟು ಪಡೆದು, ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಅವರಿಗೆ ಓಟು ಹಾಕಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರವಿವಾರ ಇಲ್ಲಿನ ಕೆಆರ್ ಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಪರ ಪ್ರಚಾರ ನಡೆಸಿದ ಅವರು, 17 ಜನ ಶಾಸಕರು ಬಿಜೆಪಿ ಹೋದ ಪರಿಣಾಮ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಇವರು ಅಭಿವೃದ್ಧಿ ವಿಚಾರ ಇಟ್ಟುಕೊಂಡು ಹೋಗಿಲ್ಲ. ಬದಲಾಗಿ, ದುಡ್ಡು, ಅಧಿಕಾರಕ್ಕಾಗಿ ಮಾತ್ರ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕೆಆರ್‌ಪುರ ವಿಧಾನಸಭಾ ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ನೀಡಿದ್ದು, ನಾನು. ಅದರಲ್ಲೂ ಬಸವರಾಜು ಲೂಟಿ ಹೊಡೆದಿದ್ದು, ಇಂದು ಕೋಟ್ಯಂತರ ರೂಪಾಯಿ ಚುನಾವಣೆಗಾಗಿ ಖರ್ಚು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪಕ್ಷಾಂತರ, ಅಪರೇಷನ್ ಜನಕ ಎಂದರೆ ಅದು ಯಡಿಯೂರಪ್ಪ ಮಾತ್ರ. ಹಿಂಬಾಗಿಲ ಮೂಲಕವೇ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ ಎಂದ ಅವರು, ಈ ಚುನಾವಣೆ ನಾವು ಬಯಸಿರಲಿಲ್ಲ. ಅನಗತ್ಯವಾಗಿ ಈ ಚುನಾವಣೆ ಬಂದಿದೆ. ಭೈರತಿ ಬಸವರಾಜು ಕಾಂಗ್ರೆಸ್‌ನಿಂದ ಎರಡು ಬಾರಿ ಆಯ್ಕೆಯಾಗಿದ್ದರು. ಆದರೆ, ಇದೀಗ ಪಕ್ಷಕ್ಕೆ ಮೋಸ ಮಾಡಿದ್ದಾರೆ ಎಂದು ದೂರಿದರು.

15 ಕ್ಷೇತ್ರಗಳಲ್ಲೂ ಪಕ್ಷಾಂತರಿಗಳನ್ನು ಸೋಲಿಸಬೇಕು. ಜನ ಇಂತಹವರಿಗೆ ಪಾಠ ಕಲಿಸಬೇಕು. ಜನರು ಇವರನ್ನು ಸೋಲಿಸಲು ಕಾಯುತ್ತಿದ್ದು, ಬಸವರಾಜು ವಿರುದ್ಧ ಬಹುದೊಡ್ಡ ಅಲೆ ಇದೆ ಎಂದು ಸಿದ್ದರಾಮಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News