ಕೆಎಎಸ್ ಅಕ್ರಮ ನೇಮಕ: 107 ಅಧಿಕಾರಿಗಳ ಸ್ಥಾನಪಲ್ಲಟಕ್ಕೆ ಆದೇಶ ಹೊರಡಿಸಿದ ಸರಕಾರ

Update: 2019-12-01 16:04 GMT

ಬೆಂಗಳೂರು, ಡಿ.1: ಕೆಎಎಸ್ ಅಕ್ರಮ ನೇಮಕ(1998ನೆ ಸಾಲಿನ) ಸಂಬಂಧ ಹೈಕೋರ್ಟ್ 2016ರ ಜೂ.21ರಂದು ನೀಡಿರುವ ತೀರ್ಪಿನ ಅನ್ವಯ ಹಾಲಿ ಸರಕಾರಿ ಸೇವೆಯಲ್ಲಿರುವ 107 ಅಧಿಕಾರಿಗಳ ಸ್ಥಾನಪಲ್ಲಟ್ಟಕ್ಕೆ ಸರಕಾರ ಆದೇಶ ಹೊರಡಿಸಿದೆ. 107 ಅಧಿಕಾರಿಗಳ ಪೈಕಿ 77 ಅಧಿಕಾರಿಗಳ ಇಲಾಖೆ, ಪದನಾಮ ಬದಲಾದರೂ ಸಹ ಅವರು ಯಾವ ಶ್ರೇಣಿಯಲ್ಲಿದ್ದರೂ ಅದೇ ಶ್ರೇಣಿಯಲ್ಲಿ ಮುಂದುವರಿಯುತ್ತಾರೆ. 16 ಮಂದಿಗೆ ಮುಂಬಡ್ತಿ ಸಿಗಲಿದೆ ಮತ್ತು 14 ಅಧಿಕಾರಿಗಳಿಗೆ ಹಿಂಬಡ್ತಿಯಾಗಲಿದೆ.

ಹೈಕೋರ್ಟ್ ತೀರ್ಪಿನ 3ನೆ ನಿರ್ದೇಶನದಂತೆ ಕೆಪಿಎಸ್‌ಸಿ 2019ರ ಆ.27ರಂದು 1998ನೆ ಸಾಲಿನ ನೇಮಕ ಸಂಬಂಧ ಪ್ರಕಟಿಸಿದ್ದ ಪರಿಷ್ಕೃತ ಆಯ್ಕೆ ಪಟ್ಟಿ ಅಂತಿಮ. ಅದರಂತೆ ಸ್ಥಾನ ಪಲ್ಲಟವಾಗಿರುವ 107 ಅಧಿಕಾರಿಗಳನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆ, ಹುದ್ದೆಗೆ ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆಗೊಳಿಸಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ಉಮೇಶ್ ಶಾಸ್ತ್ರಿ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೆ, ಅಧಿಕಾರಿಗಳು ಖಾಲಿ ಹುದ್ದೆ/ ಇಲಾಖೆಯ ಸೇವೆಯಿಂದ ಬಿಡುಗಡೆ ಹೊಂದಿದ ಬಳಿಕ ಅಂತಿಮ ಪರಿಷ್ಕೃತ ಆಯ್ಕೆ ಪಟ್ಟಿಯಂತೆ ಬದಲಾದ ಇಲಾಖೆ/ಹುದ್ದೆಯಲ್ಲಿ ನೇಮಕ ಆಗುವ ಸಲುವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ಈ ಅಧಿಕಾರಿಗಳ ಪೈಕಿ ಯಾರಾದರೂ ನ್ಯಾಯಾಲಯಗಳಿಂದ ತಡೆಯಾಜ್ಞೆ ತಂದಿದ್ದರೆ ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುು ಎಂದು ಆದೇಶದಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News