ನೋವುಂಟು ಮಾಡುವ, ಅಶ್ಲೀಲತೆಯ ಹಾಸ್ಯ ಬೇಡ: ಮುಖ್ಯಮಂತ್ರಿ ಚಂದ್ರು

Update: 2019-12-01 16:23 GMT

ಬೆಂಗಳೂರು, ಡಿ.1: ಹಾಸ್ಯ ಅಪಹಾಸ್ಯ ಆಗಬಾರದು. ಇನ್ನೊಬ್ಬರಿಗೆ ನೋವುಂಟು ಮಾಡುವ ಹಾಸ್ಯ ಹಾಗೂ ಅಶ್ಲೀಲತೆಯ ಹಾಸ್ಯ ಬೇಡ ಎಂದು ಚಿತ್ರನಟ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.

ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಚಾರುಮತಿ ಪ್ರಕಾಶನ ಹಾಗೂ ಬೆಂಗಳೂರು ಕಲಾಗಂಗೋತ್ರಿ ಸಹಯೋಗದಲ್ಲಿ ಏರ್ಪಡಿಸಿದ್ದ ಕಲಾವಿದೆ ಡಾ. ಎಂ.ಎಸ್ ವಿದ್ಯಾ ಅವರ ‘ಕನ್ನಡ ರಂಗಭೂಮಿಯಲ್ಲಿ ಹಾಸ್ಯ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಟಕಗಳು ಹುಟ್ಟಿಕೊಂಡಿದ್ದೆ ಮನೋರಂಜನೆಗಾಗಿ. ಈ ಮನೋರಂಜನೆ ಉಲ್ಲಾಸ ತರುವ ರೀತಿ ಇರಬೇಕು. ಹಾಸ್ಯ ಮನೋಭಾವ ಪ್ರತಿಯೊಬ್ಬರ ಜೀವನದಲ್ಲಿ ಜೀವಂತವಾಗಿರಬೇಕು. ಈ ಹಾಸ್ಯ ನಾಟಕಗಳಲ್ಲಿ ಬರೆದಾಗ ಒಂದು ರೀತಿ, ಅದನ್ನು ಪ್ರಸ್ತುತಪಡಿಸುತ್ತಿರುವಾಗ ಇನ್ನೊಂದು ರೀತಿ ಕಾಣುತ್ತದೆ ಎಂದು ಹೇಳಿದರು.

ಹಾಸ್ಯದ ವಿಷಯವನ್ನು ಇಟ್ಟುಕೊಂಡು ನಾಟಕಗಳನ್ನು ಬರೆಯುವವರು ತೀರಾ ಕಡಿಮೆ. ಆದರೆ, ವಿದ್ಯಾ ಅವರು ರಂಗಭೂಮಿಯಲ್ಲಿ ನಡೆಯುವ ಹಾಸ್ಯಗಳನ್ನು ಇಟ್ಟುಕೊಂಡು ಕೃತಿ ರಚಿಸಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.

ಕಲಾವಿದ ಕೆ.ವಿ ನಾಗರಾಜಮೂರ್ತಿ ಮಾತನಾಡಿ, ಕೆಲವರು ಡಾಕ್ಟರೇಟ್ ಪಡೆದುಕೊಳ್ಳುತ್ತಾರೆ. ಆದರೆ, ಅವರ ಪ್ರಬಂಧಗಳು ಹೊರಹೊಮ್ಮುವುದಿಲ್ಲ. ಇಂದಿನ ದಿನಗಳಲ್ಲಿ ಡಾಕ್ಟರೇಟನ್ನು ದುಡ್ಡಿಗೆ ಪಡೆದುಕೊಳ್ಳುವವರು ಇದ್ದಾರೆ. ರೌಡಿಗಳೆಲ್ಲಾ ಡಾಕ್ಟರೇಟ್ ಪಡೆದ ಉದಾಹರಣೆ ನಮ್ಮ ಮುಂದಿದೆ ಎಂದು ವಿಷಾಧಿಸಿದರು.

ಹಿರಿಯ ರಂಗ ಕಲಾವಿದೆ ಭಾರ್ಗವಿ ನಾರಾಯಣ ಮಾತನಾಡಿ, ಹಾಸ್ಯ ನಾಟಕಗಳು ಎಂದರೆ ಮೂಗು ಮುರಿಯುವವರೇ ಹೆಚ್ಚು. ಅದರೆ, ನಿಜವಾದ ಮನೋರಂಜನೆ ಸಿಗುವುದೇ ಹಾಸ್ಯದಿಂದ. ಹಾಸ್ಯ ಮನಸ್ಸಿಗೆ ಸಂತೋಷವನ್ನು ಉಂಟು ಮಾಡುತ್ತದೆ. ಹಾಸ್ಯ ಪ್ರಧಾನವಾಗಿರುವ ನಾಟಕಗಳಿಗೆ ಜನರ ಪ್ರೋತ್ಸಾಹ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಂಗ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಬಿ.ವಿ ರಾಜಾರಾಂ, ಕಲಾವಿದರಾದ ಕೆ.ವಿ ನಾಗರಾಜಮೂರ್ತಿ, ಸುಂದರ್ ವೀಣಾ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News