ಲಿಯೊನ್ ಸ್ಪಿನ್ ಮೋಡಿಗೆ ಪಾಕ್ ತತ್ತರ

Update: 2019-12-03 05:32 GMT

ದ್ವಿತೀಯ ಟೆಸ್ಟ್

ಅಡಿಲೇಡ್, ಡಿ.2: ನಥಾನ್ ಲಿಯೊನ್(5-69) ಸ್ಪಿನ್ ಮೋಡಿಗೆ ಸಿಲುಕಿದ ಪಾಕಿಸ್ತಾನ ತಂಡ ಆಸ್ಟ್ರೇಲಿಯ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 48 ರನ್‌ಗಳ ಅಂತರದಿಂದ ಶರಣಾಗಿದೆ. ಈ ಗೆಲುವಿನ ಮೂಲಕ ಆತಿಥೇಯರು 2-0 ಅಂತರದಿಂದ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದ್ದಾರೆ.

ಅಡಿಲೇಡ್ ಓವಲ್‌ನಲ್ಲಿ ನಡೆದ ಅಹರ್ನಿಶಿ ಪಂದ್ಯದಲ್ಲಿ ಫಾಲೋ-ಆನ್‌ಗೆ ಸಿಲುಕಿದ ಪಾಕಿಸ್ತಾನ ತಂಡ ಎರಡನೇ ಇನಿಂಗ್ಸ್ ನಲ್ಲ್ಲಿ 239 ರನ್ ಗಳಿಸಿ ಆಲೌಟಾಯಿತು. ನಾಲ್ಕು ವರ್ಷಗಳ ಹಿಂದೆ ಮಿಸ್ಬಾವುಲ್ ಹಕ್ ಬಳಗದ ವಿರುದ್ಧ 3-0 ಅಂತರದಿಂದ ಟೆಸ್ಟ್ ಸರಣಿಯನ್ನು ಜಯಿಸಿದ್ದ ಆಸ್ಟ್ರೇಲಿಯ ತವರು ನೆಲದಲ್ಲಿ ಪಾಕ್ ವಿರುದ್ಧ ಗೆಲುವಿನ ದಾಖಲೆ ಕಾಯ್ದುಕೊಂಡಿದೆ.

ಪಾಕಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ 302 ರನ್ ಗಳಿಸಿ ಆಲೌಟಾಗಿತ್ತು. ನಾಲ್ಕನೇ ದಿನವಾದ ಸೋಮವಾರ 3 ವಿಕೆಟ್‌ಗಳ ನಷ್ಟಕ್ಕೆ 39 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಪಾಕ್‌ಗೆ ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿದ ಲಿಯೊನ್ ಹಾಗೂ ವೇಗದ ಬೌಲರ್ ಹೇಝಲ್‌ವುಡ್(3-63) ಸಿಂಹಸ್ವಪ್ನರಾದರು. ಲಿಯೊನ್ ಅವರು ಟೀ ವಿರಾಮಕ್ಕೆ ಮೊದಲೇ ಶಾನ್ ಮಸೂದ್(68, 127 ಎಸೆತ, 8 ಬೌಂಡರಿ,1 ಸಿಕ್ಸರ್) ಹಾಗೂ ಅಸದ್ ಶಫೀಕ್(57, 112 ಎಸೆತ, 5 ಬೌಂಡರಿ) ವಿಕೆಟ್ ಪಡೆದರು. ಪಾಕ್ 20 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಒಂದಾದ ಮಸೂದ್ ಹಾಗೂ ಶಫೀಕ್ 4ನೇ ವಿಕೆಟ್ ಜೊತೆಯಾಟದಲ್ಲಿ 103 ರನ್ ಸೇರಿಸಿ ತಂಡವನ್ನು ಆಧರಿಸಿದರು. ಇಫ್ತಿಖಾರ್ ಅಹ್ಮದ್(27)ಹಾಗೂ ವಿಕೆಟ್‌ಕೀಪರ್ ಮುಹಮ್ಮದ್ ರಿಝ್ವಿನ್(45) 6ನೇ ವಿಕೆಟ್‌ಗೆ 47 ರನ್ ಜೊತೆಯಾಟ ನಡೆಸಿದ್ದು, ಈ ಜೋಡಿಯನ್ನು ಲಿಯೊನ್ ಬೇರ್ಪಡಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಯಾಸಿರ್ ಶಾ ಎರಡನೇ ಇನಿಂಗ್ಸ್‌ನಲ್ಲಿ 13 ರನ್ ಗಳಿಸಿ ಲಿೊನ್ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು. ಎರಡನೇ ಹೊಸ ಚೆಂಡಿನೊಂದಿಗೆ ದಾಳಿಗಿಳಿದ ಜೋಶ್ ಹೇಝಲ್‌ವುಡ್, ರಿಝ್ವಿನ್ ವಿಕೆಟನ್ನು ಉರುಳಿಸಿದರು. ಪ್ಯಾಟ್ ಕಮಿನ್ಸ್ ಅವರು ಮುಹಮ್ಮದ್ ಅಬ್ಬಾಸ್‌ರನ್ನು ರನೌಟ್ ಮಾಡುವುದರೊಂದಿಗೆ ಪಾಕಿಸ್ತಾನದ 2ನೇ ಇನಿಂಗ್ಸ್‌ಗೆ ತೆರೆ ಎಳೆದರು.

ನಾಲ್ಕನೇ ದಿನದಾಟದಲ್ಲಿ ಐದು ವಿಕೆಟ್ ಗೊಂಚಲು ಪಡೆದ ಲಿಯೊನ್ ಮಿಂಚಿದರು. ಔಟಾಗದೆ 335 ರನ್ ಗಳಿಸಿ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 589 ರನ್ ಗಳಿಸಲು ನೆರವಾಗಿದ್ದ ಡೇವಿಡ್ ವಾರ್ನರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಪಾಕಿಸ್ತಾನದ ಲೆಗ್ ಸ್ಪಿನ್ನರ್ ಯಾಸಿರ್ ಶಾ ವೀರೋಚಿತ ಚೊಚ್ಚಲ ಶತಕವನ್ನು ಸಿಡಿಸಿದ ಹೊರತಾಗಿಯೂ ಅಝರ್ ಅಲಿ ನೇತೃತ್ವದ ಪಾಕ್ ತಂಡ ಆಸ್ಟ್ರೇಲಿಯದ ವೇಗದ ಬೌಲರ್‌ಗಳ ದಾಳಿ ಎದುರಿಸಲಾಗದೆ ವಿಕೆಟ್ ಕೈಚೆಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News