ಬಾಕ್ಸರ್ ನೀರಜ್ ಅಮಾನತು

Update: 2019-12-03 05:59 GMT

ಹೊಸದಿಲ್ಲಿ, ಡಿ.2: ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪದಕ ವಿಜೇತೆ, 2020ರ ಟೋಕಿಯೊ ಒಲಿಂಪಿಕ್ಸ್‌ನ ಸಂಭಾವ್ಯಪಟ್ಟಿಯಲ್ಲಿರುವ ಭಾರತೀಯ ಮಹಿಳಾ ಬಾಕ್ಸರ್ ನೀರಜ್ ಫೋಗಟ್(57ಕೆಜಿ)ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.

ಹರ್ಯಾಣದ ಬಾಕ್ಸರ್ ನಿಷೇಧಿತ ಉದ್ದೀಪನಾ ದ್ರವ್ಯ ಸೇವಿಸಿರುವುದು ಪರೀಕ್ಷೆಯಿಂದ ಪತ್ತೆಯಾಗಿದೆ.

ಮಾಜಿ ರಾಷ್ಟ್ರೀಯ ಪದಕ ವಿಜೇತೆ ನೀರಜ್ ಬಲ್ಗೇರಿಯದಲ್ಲಿ ನಡೆದಿದ್ದ ಪ್ರತಿಷ್ಠಿತ ಸ್ಟ್ರಾಂಡ್ಜಾ ಸ್ಮಾರಕ ಟೂರ್ನಮೆಂಟ್‌ನಲ್ಲಿ ಕಂಚಿನ ಪದಕ ಹಾಗೂ ರಶ್ಯದಲ್ಲಿ ಈ ವರ್ಷ ನಡೆದಿದ್ದ ಟೂರ್ನಮೆಂಟ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

ಗುವಾಹಟಿಯಲ್ಲಿ ಈ ವರ್ಷ ನಡೆದಿದ್ದ ಇಂಡಿಯಾ ಓಪನ್ ಟೂರ್ನಿಯಲ್ಲೂ ಚಿನ್ನ ಜಯಿಸಿದ್ದರು. ಸೆಪ್ಟಂಬರ್ 24ರಂದು ನೀರಜ್ ಅವರ ರಕ್ತ ಮಾದರಿಯನ್ನು ರಾಷ್ಟ್ರೀಯ ಉದ್ದೀಪನಾ ಮದ್ದು ನಿಗ್ರಹ ಘಟಕ(ನಾಡಾ)ಸಂಗ್ರಹಿಸಿತ್ತು. ಕಳೆದ ತಿಂಗಳು ಖತರ್‌ನ ಡೋಪಿಂಗ್ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗಿತ್ತು.

ನೀರಜ್ ಇತ್ತೀಚೆಗೆ ರಶ್ಯದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆದರೆ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು. 24ರ ಹರೆಯದ ನೀರಜ್ ಕ್ರೀಡಾ ಸಚಿವಾಲಯದ ಟಾರ್ಗೆಟ್ ಪೋಡಿಯಂ ಸ್ಕೀಮ್(ಟಾಪ್)ಗೆ ಆಯ್ಕೆಯಾಗಿರುವ ಭಾರತದ 8 ಬಾಕ್ಸರ್‌ಗಳ ಪೈಕಿ ಒಬ್ಬರಾಗಿದ್ದಾರೆ. ಸೆಪ್ಟಂಬರ್‌ನಲ್ಲಿ ನೀರಜ್ ಹೆಸರನ್ನು ಟಾಪ್ ಸ್ಕೀಂಗೆ ಸೇರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News