ಅಯೋಧ್ಯೆ ಪ್ರಕರಣದಿಂದ ರಾಜೀವ್ ಧವನ್ ರನ್ನು ಕೈಬಿಟ್ಟ ಜಮೀಯತ್ ಉಲಮಾ-ಇ-ಹಿಂದ್

Update: 2019-12-03 07:27 GMT

ಹೊಸದಿಲ್ಲಿ: ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಲ್ಲಿ ಮುಸ್ಲಿಂ ಕಕ್ಷಿಗಾರರನ್ನು ಪ್ರತಿನಿಧಿಸಿದ್ದ ವಕೀಲ ರಾಜೀವ್ ಧವನ್ ಅವರನ್ನು ಕೈಬಿಡಲಾಗಿದೆ ಎಂಬ ಮಾಹಿತಿಯನ್ನು ಸ್ವತಃ ಧವನ್ ಅವರೇ ತಿಳಿಸಿದ್ದಾರೆ.

"ಬಾಬರಿ ಪ್ರಕರಣದಲ್ಲಿ ಜಮೀಯತ್ ಪರ ವಕೀಲರಾಗಿರುವ ಇಜಾಝ್ ಮಕ್ಬೂಲ್ ಅವರು ನನ್ನನ್ನು ಕೈಬಿಟ್ಟಿದ್ದಾರೆ.  ಈ ನಿರ್ಧಾರವನ್ನು ಒಪ್ಪಿ ಔಪಚಾರಿಕ ಪತ್ರ ಕಳುಹಿಸಿದ್ದೇನೆ. ನಾನು ಅಸೌಖ್ಯದಿಂದಿದ್ದೇನೆಂಬ ಕಾರಣಕ್ಕೆ ನನ್ನನ್ನು ಕೈಬಿಡಲಾಗಿದೆ ಎಂದು ಮದನಿ ಅವರಿಗೆ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ. ಇದು ಅಸಂಬದ್ಧ'' ಎಂದು ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಧವನ್ ಬರೆದಿದ್ದಾರೆ.

ಮುಸ್ಲಿಂ ಸಂಘಟನೆಗಳು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಗೂ ತಮಗೂ ಯಾವುದೇ ನಂಟಿಲ್ಲ ಎಂದೂ ಅವರು ತಿಳಿಸಿದ್ದಾರೆ.

"ಮದನಿ ಅವರಿಗೆ ತಮ್ಮ ವಕೀಲ ಮಕ್ಬೂಲ್ ಅವರಿಗೆ ತಿಳಿಸಿ ನನ್ನನ್ನು ಕೈಬಿಡಲು ಹಕ್ಕಿದೆ ಆದರೆ ಅದಕ್ಕೆ ನೀಡಲಾದ ಕಾರಣಗಳು ನಿಜವಲ್ಲ'' ಎಂದೂ ಧವನ್ ತಮ್ಮ ಫೇಸ್ ಬುಕ್ ಪೋಸ್ಟ್‍ನಲ್ಲಿ ಹೇಳಿಕೊಂಡಿದ್ದಾರೆ.

ಅಯ್ಯೋಧ್ಯೆ ಪ್ರಕರಣದ ದಿನಂಪ್ರತಿ ವಿಚಾರಣೆ 40 ದಿನಗಳ ಕಾಲ ನಡೆದಾಗ ಎರಡು ವಾರಗಳಿಗೂ ಹೆಚ್ಚು ಸಮಯ ಮುಸ್ಲಿಂ ಕಕ್ಷಿಗಾರರ ಪರ ಧವನ್ ನಿರಂತರವಾಗಿ ವಾದಿಸಿದ್ದರು.

ಧವನ್ ಅವರನ್ನು ಅನಾರೋಗ್ಯ ಕಾರಣಗಳಿಗಾಗಿ ಪ್ರಕರಣದಿಂದ ಕೈಬಿಡಲಾಗಿದೆ ಎಂಬುದು ಸರಿಯಲ್ಲಿ ಎಂದು ಪ್ರಕರಣದ ದಾಖಲೆಗಳಲ್ಲಿ ವಕೀಲರಾಗಿರುವ ಇಜಾಝ್ ಮಕ್ಬೂಲ್ ಹೇಳಿದ್ದಾರೆ. ``ನನ್ನ ಕಕ್ಷಿಗಾರರು (ಜಮೀಯತ್ ಉಲಮಾ-ಇ-ಹಿಂದ್) ನಿನ್ನೆ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕೆಂದಿದ್ದರು. ಇದನ್ನು ರಾಜೀವ್ ಧವನ್ ಮಾಡಬೇಕಿತ್ತು, ಆದರೆ ಅವರು ಲಭ್ಯರಿಲ್ಲದೇ ಇದ್ದುದರಿಂದ ಅರ್ಜಿಯಲ್ಲಿ ಅವರ ಹೆಸರು ನೀಡಲಾಗಿಲ್ಲ, ಇದು ದೊಡ್ಡ ವಿಚಾರವಲ್ಲ'' ಎಂದು ಮಕ್ಬೂಲ್ ಹೇಳಿದ್ದಾರೆ.

ಸಂಘಟನೆ ಸೋಮವಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News