ಮಾಧುಸ್ವಾಮಿ ವಿರುದ್ಧ ನ್ಯಾಯಾಲಯದ ಮೊರೆ ಹೋಗುತ್ತೇವೆ: ದಿನೇಶ್ ಗುಂಡೂರಾವ್

Update: 2019-12-03 12:54 GMT

ಬೆಂಗಳೂರು, ಡಿ.3: ವೀರಶೈವ ಲಿಂಗಾಯತರು ಬಿಜೆಪಿಗೆ ಮತ ಹಾಕದಿದ್ದರೆ ಯಡಿಯೂರಪ್ಪ ಕೆನ್ನೆಗೆ ಬಾರಿಸಿದಂತೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ. ಈ ಸಂಬಂಧ ನಾವು ಮಾಧುಸ್ವಾಮಿ ವಿರುದ್ಧ ದೂರು ದಾಖಲಿಸುತ್ತೇವೆ. ಅಲ್ಲದೇ, ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು.

ಮಂಗಳವಾರ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲಿಂಗಾಯತ ಸಮುದಾಯಕ್ಕೆ ಘನತೆ ಇಲ್ಲವೇ? ಯಾರಿಗೆ ಮತ ನೀಡಬೇಕು ಎಂದು ಆಲೋಚಿಸುವ ಶಕ್ತಿ ಆ ಸಮುದಾಯಕ್ಕಿದೆ. ಒಂದು ಸಮುದಾಯದ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಬಿಜೆಪಿ ನಾಯಕರ ನಡೆ ಖಂಡನೀಯ ಎಂದು ಅವರು ಹೇಳಿದರು. 

ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಅಪಾರ ಹಾನಿಯಾಯಿತು. ಆದರೆ, ಸರಕಾರ ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನೇ ಒದಗಿಸಿಲ್ಲ. ಲಕ್ಷಾಂತರ ಜನ ಸಮಸ್ಯೆಗೆ ಗುರಿಯಾಗಿದ್ದಾರೆ. ಅವರ ಕಷ್ಟಕ್ಕೆ ಸರಕಾರ ಸ್ಪಂದಿಸುತ್ತಿಲ್ಲ. ಜನರ ಸಮಸ್ಯೆ ಆಲಿಸೋಕೆ ಇವರಿಗೆ ಸಮಯ ಸಿಕ್ಕಿರಲಿಲ್ಲ. ಆದರೆ, ಆದ್ರೆ ಈಗ ಚುನಾವಣೆಗಾಗಿ ಹಗಲುರಾತ್ರಿ ಓಡಾಡುತ್ತಿದ್ದಾರೆ ಎಂದು ಅವರು ಹೇಳಿದರು. ಅನರ್ಹರ ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರಿಗೆ ಜನರೇ ಛೀಮಾರಿ ಹಾಕುತ್ತಿದ್ದಾರೆ. ಹೀಗಾಗಿ ಬಿಜೆಪಿ ನಾಯಕರಿಗೆ ಆತಂಕ ಶುರುವಾಗಿದೆ. ಇಂದು ಬಹಿರಂಗ ಪ್ರಚಾರ ಮುಕ್ತಾಯವಾಗಲಿದೆ. ಡಿ.5ರಂದು ಮತದಾನ ನಡೆಯಲಿದೆ. ಮೈತ್ರಿ ಸರಕಾರ ತೆಗೆಯಲೇಬೇಕೆಂದು ಬಿಜೆಪಿ ಗುರಿಯಿತ್ತು. ಅದಕ್ಕಾಗಿ, ಶಾಸಕರನ್ನು ಖರೀದಿಸಿ ಸರಕಾರ ಬೀಳಿಸಿದರು ಎಂದು ಅವರು ಆರೋಪಿಸಿದರು.

ನಾವು ಸರಕಾರ ರಚಿಸಿದಾಗಿನಿಂದ ಬಿಜೆಪಿ ಈ ಪ್ರಯತ್ನ ನಡೆಸುತ್ತಿತ್ತು. ಸರಕಾರ ಬಿದ್ದ ಮೇಲೆ ಎಲ್ಲವೂ ಬಹಿರಂಗವಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲೇ ಆಪರೇಷನ್ ನಡೆದಿತ್ತು. ನಿಮ್ಮನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ಹೇಳಿ ನಮ್ಮ ಶಾಸಕರಿಂದ ರಾಜಿನಾಮೆ ಕೊಡಿಸಿದರು. ಸ್ಪೀಕರ್, ಸುಪ್ರೀಂಕೋರ್ಟ್ ಎಲ್ಲವನ್ನೂ ನೋಡಿಕೊಳ್ಳುತ್ತೇವೆ ಎಂದಿದ್ದರು ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಅಮಿತ್ ಶಾ ಸೂಚನೆಯಂತೆ ಆಪರೇಷನ್ ಕಮಲಕ್ಕೆ ಬಂಡವಾಳ ಹೂಡಲಾಗಿದೆ. ಶಾಸಕರನ್ನು ವಿಶೇಷ ವಿಮಾನದ ಮೂಲಕ ಕರೆದೊಯ್ಯಲು ನೂರಾರು ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಬಂಡವಾಳವನ್ನು ವರ್ಗಾವಣೆ ದಂಧೆ ಮೂಲಕ ತುಂಬಿಸಿಕೊಳ್ಳಲಾಗಿದೆ ಎಂದು ಅವರು ಕಿಡಿಗಾರಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಜಾತಿಯನ್ನು ಮುಂದಿಟ್ಟುಕೊಂಡು ಮತ ಯಾಚನೆ ಮಾಡುತ್ತಿದ್ದಾರೆ. ಈ ಸಂಬಂಧ ನಾವು ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇವೆ. ಆದರೆ, ಚುನಾವಣಾ ಆಯೋಗ ಇದನ್ನು ಪರಿಗಣಿಸುತ್ತಿಲ್ಲ. ಜಾತಿ ಆಧಾರದಲ್ಲಿ ಮತ ಕೇಳುವುದು ನೀತಿ ಸಂಹಿತೆಗೆ ವಿರುದ್ಧವಾದದ್ದು ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಮುಖ್ಯಮಂತ್ರಿ ಹೆಣಗಾಟ ನಡೆಸುತ್ತಿದ್ದಾರೆ. ಎಂಟಿಬಿ ನಾಗರಾಜ್, ಗೋವಿಂದ ಕಾರಜೋಳ ಜನರಿಗೆ ಹಣ ಹಂಚುವಾಗ ಬಹಿರಂಗವಾಗಿಯೇ ಸಿಕ್ಕಿಬಿದ್ದಿದ್ದಾರೆ. ಗೃಹ ಸಚಿವರು ಚೆಕ್‌ಪೋಸ್ಟ್ ಬಳಿ ತಪಾಸಣೆಗೆ ಒಳಗಾಗದೇ ಉದ್ಧಟತನ ತೋರಿದ್ದಾರೆ. ಹಣ ಬಲದ ಮೇಲೆ ಚುನಾವಣೆ ನಡೆಸೋಕೆ ಬಿಜೆಪಿಯವರು ಮುಂದಾಗಿದ್ದಾರೆ ಎಂದು ದಿನೇಶ್ ಗುಂಡೂರಾವ್ ಕಿಡಿಗಾರಿದರು.

ಈ ಚುನಾವಣೆಯಲ್ಲಿ ಬಹುಮತ ಬರದಿದ್ದರೆ ಬಿಜೆಪಿ ಮತ್ತೊಮ್ಮೆ ಆಪರೇಷನ್ ಕಮಲಕ್ಕೆ ಮುಂದಾಗಬಹುದು. ಆದರೆ, ರಾಜ್ಯದಲ್ಲಿ ಮತ್ತೊಮ್ಮೆ ಆಪರೇಷನ್ ಕಮಲ ಯಶಸ್ವಿಯಾಗುವುದಿಲ್ಲ. ಜನರೇ ಬಿಜೆಪಿಯವರಿಗೆ ಓಡಿಸಿಕೊಂಡು ಹೋಗಿ ಹೊಡೆಯುತ್ತಾರೆ. ಪ್ರಬುದ್ಧ ಮತದಾರರು ಈ ಬಗ್ಗೆ ಗಮನ ಹರಿಸಿ, ಅನರ್ಹ ಗೊಂಡಿರುವ ಅಷ್ಟು ಮಂದಿಯನ್ನು ಸೋಲಿಸಿ, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋದ ಎಸ್.ಟಿ.ಸೋಮಶೇಖರ್, ಮುನಿರತ್ನ ಹಾಗೂ ಭೈರತಿ ಬಸವರಾಜ ಮತ್ತೆ ಪಕ್ಷಕ್ಕೆ ಬರಲು ಮುಂದಾಗಿದ್ದರು. ಆದರೆ, ನಾವು ಅವರನ್ನು ಸೇರಿಸಿಕೊಳ್ಳಲಿಲ್ಲ. ಕೆಲವು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲು ಸಿದ್ಧವಾಗಿದ್ದರು. ಈ ಸಂಬಂಧ ನಮ್ಮ ಪಕ್ಷದ ನಾಯಕರ ಜೊತೆ ಸಂಪರ್ಕದಲ್ಲಿದ್ದರು ಎಂದು ದಿನೇಶ್ ಗುಂಡೂರಾವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News