ಬಿಜೆಪಿ ನೋಟು, ಕಾಂಗ್ರೆಸ್‌ಗೆ ವೋಟು: ಡಿ.ಕೆ.ಶಿವಕುಮಾರ್

Update: 2019-12-03 13:41 GMT

ಬೆಂಗಳೂರು, ಡಿ.3: ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್, ಮುನಿರತ್ನ ಸೇರಿದಂತೆ ಅನರ್ಹ ಶಾಸಕರಿಗೂ ಬಿಜೆಪಿಗೂ ಏನು ಸಂಬಂಧ? ಇವರು ರಾಜಕೀಯದಲ್ಲಿ ಹೆಸರು ಮಾಡಿದ್ದು ಕಾಂಗ್ರೆಸ್ ಪಕ್ಷದಲ್ಲಿ. ಈ ದ್ರೋಹಿಗಳಿಗೆ ಜನ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

ಮಂಗಳವಾರ ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ್ ಪರ ಪ್ರಚಾರ ಮಾಡಿದ ಅವರು, ಬಿಜೆಪಿ ಅವರು ಏನು ಮಾಡಿದ್ದಾರೆ ಇವರಿಗೆ? ರಾಜರಾಜೇಶ್ವರಿ ನಗರದಲ್ಲಿ ಚುನಾವಣೆ ನಡೆಯುತ್ತಿಲ್ಲ, ಶಿವಾಜಿನಗರದಲ್ಲಿ ರೋಷನ್ ಬೇಗ್ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಇನ್ನು ಯಾವ ಕಾರಣಕ್ಕೆ ಪಕ್ಷ ಬಿಟ್ಟು ಹೋದ್ರು? ಕಾಂಗ್ರೆಸ್ ನಿಮಗೆ ಏನು ಕಡಿಮೆ ಮಾಡಿತ್ತು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷ ನಿಮ್ಮ ತಾಯಿ ಇದ್ದ ಹಾಗೆ. ಜನ್ಮ ಕೊಟ್ಟ ತಾಯಿಗೆ ದ್ರೋಹ ಮಾಡಿರೋದಕ್ಕೆ ಯಶವಂತಪುರ ಮಹಾಜನತೆ ತೀರ್ಮಾನ ಮಾಡಬೇಕು. ಇವತ್ತು ನಾವೆಲ್ಲ ಒಗ್ಗಟ್ಟಾಗಿ ನಿಂತು ಹಸ್ತಕ್ಕೆ ಮತ ನೀಡಿ ನಾಗರಾಜ್ ಅವರನ್ನು ಗೆಲ್ಲಿಸಬೇಕು. ಇಲ್ಲಿ ಸೇರಿರುವ ಕಾರ್ಯಕರ್ತರಿಗಿಂತ ನಮಗೆ ಬೇರೆ ಯಾವ ಶಕ್ತಿ ಬೇಕು? ಎಂದು ಶಿವಕುಮಾರ್ ಹೇಳಿದರು.

ನಾನು ಎಂಟು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಇಷ್ಟು ವರ್ಷ ನಾವು ಯಾರಾದರೂ ಶಾಸಕರಾಗಿ ಸತ್ತರೆ ಮಾತ್ರ ಉಪಚುನಾವಣೆ ನೋಡುತ್ತಿದೆವು. ಶಾಸಕರು ಸಾಯದೇ ಯಾವುದಾದರೂ ಉಪಚುನಾವಣೆ ನಡೆಯುತ್ತಿತ್ತಾ? ನಾನು ವಿಧಾನಸಭೆಯಲ್ಲೇ ಹೇಳಿದ್ದೀನಿ 'ಸೋಮಶೇಖರ, ಬೇಡ...ನಿನ್ನ ಸಮಾಧಿ ಮಾಡ್ತಾರೆ ಕಣೋ' ಅಂತಾ ಎಂದು ಅವರು ತಿಳಿಸಿದರು.

ಈ ಚುನಾವಣೆಯಲ್ಲಿ ಗೆದ್ದು ಸಚಿವರಾಗುವ ಆಸೆಗೆ ದುಡ್ಡಿನ ಹೊಳೆ ಹರಿಸುತ್ತಿದ್ದಾರೆ. ಅವರು ಕೊಡುವ ದುಡ್ಡು ತೆಗೆದುಕೊಳ್ಳಿ, ಮತ ಮಾತ್ರ ನಮಗೆ ಹಾಕಿ. ‘ಸೋಮಶೇಖರ್ ನೋಟು ನಾಗರಾಜ್‌ಗೆ ವೋಟು, ಬಿಜೆಪಿ ನೋಟು, ಕಾಂಗ್ರೆಸ್‌ಗೆ ವೋಟು’ ಅನ್ನೋದನ್ನು ಮರೆಯಬೇಡಿ ಎಂದು ಅವರು ಹೇಳಿದರು.

ಕುಮಾರಸ್ವಾಮಿ ಅವರು ಏನು ಹೇಳಿದ್ರು, ಯಾವ ಪಕ್ಷ ಗೆದ್ದರು ಚಿಂತೆ ಇಲ್ಲ ಈ ದ್ರೋಹಿಗಳು ಮಾತ್ರ ಗೆಲ್ಲಬಾರದು. ನೀವೆಲ್ಲಾ ಹಸ್ತದ ಗುರುತಿಗೆ ಮತ ಹಾಕಿ ನಾಗರಾಜ್ ಅವರನ್ನು ವಿಧಾನಸೌಧಕ್ಕೆ ಕಳುಹಿಸಬೇಕೆಂದು ಶಿವಕುಮಾರ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News