ಉಪಮುಖ್ಯಮಂತ್ರಿ, ಸಚಿವ ಶ್ರೀರಾಮುಲು ನಿವಾಸಕ್ಕೆ ದಸಂಸ ಕಾರ್ಯಕರ್ತರ ಮುತ್ತಿಗೆ

Update: 2019-12-04 15:36 GMT

ಬೆಂಗಳೂರು, ಡಿ. 4: ರಾಜ್ಯ ಸರಕಾರ ದಲಿತರ ಮೇಲಿನ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ ಪ್ರಕರಣಗಳನ್ನು ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ದಸಂಸ ಕಾರ್ಯಕರ್ತರು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಆರೋಗ್ಯ ಸಚಿವ ಶ್ರೀರಾಮುಲು ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಶಿವಾನಂದ ವೃತ್ತದ ಬಳಿಕ ಗೋವಿಂದ ಕಾರಜೋಳ ನಿವಾಸಕ್ಕೆ ದಸಂಸ ರಾಜ್ಯಾಧ್ಯಕ್ಷ ಟಿ.ಡಿ.ರಾಜಗಿರಿ ನೇತೃತ್ವದಲ್ಲಿ ಮುತ್ತಿಗೆ ಹಾಕಿದ ದಸಂಸ ಕಾರ್ಯಕರ್ತರು, ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಸರಕಾರದ ನಿರ್ಲಕ್ಷ್ಯ ಖಂಡಿಸಿ ಘೋಷಣೆ ಕೂಗಿದರು.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದೊಡ್ಡಘಟ್ಟ ಮತ್ತು ಜಂತಿಕೊಳಲು ಗ್ರಾಮದ ದಲಿತರ ಮೇಲಿನ ದೌರ್ಜನ್ಯ ಹಾಗೂ ಸಾಮಾಜಿಕ ಬಹಿಷ್ಕಾರ ಹೀನ ಕೃತ್ಯದಿಂದ ನೊಂದ ಸಂತ್ರಸ್ತರಿಗೆ ದೌರ್ಜನ್ಯ ನಿಷೇಧ ಕಾಯ್ದೆಯಡಿ ಕೂಡಲೇ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ದೊಡ್ಡಘಟ್ಟ ಮತ್ತು ಜಂತಿಕೊಳಲು ಗ್ರಾಮದ ದಲಿತರಿಗೆ ಭೂಮಿ ನೀಡಬೇಕು. ಅಲ್ಲದೆ, ಸಾಗುವಳಿ ಭೂಮಿಗೆ ಕೂಡಲೇ ಸಾಗುವಳಿ ಚೀಟಿ ನೀಡಬೇಕು. ಸರಕಾರಿ ಭೂಮಿಯಲ್ಲಿ ಹೊಸ ಕಾಲನಿ ನಿರ್ಮಿಸಬೇಕು. ಸಮುದಾಯದ ಯುವಕರಿಗೆಸ ಸ್ವ ಉದ್ಯೋಗಕ್ಕೆ ನಿಗಮಗಳಿಂದ ಅಗತ್ಯ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ದಲಿತರ ಪರ ಹೋರಾಟಗಾರರ ಮೇಲೆ ಗೂಂಡಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿದ್ದು, ಸದರಿ ಕೇಸುಗಳನ್ನು ಕೂಡಲೆ ವಜಾ ಮಾಡಬೇಕು. ದೌರ್ಜನ್ಯ ಕಾಯ್ದೆ ಅಡಿ ಕೇಸು ದಾಖಲಾಗುತ್ತಿದ್ದಂತೆ ಪ್ರತಿಯಾಗಿ ಕೇಸು ಹಾಕುವುದನ್ನು ನಿಲ್ಲಿಸಲು ಕಾನೂನು ತಿದ್ದುಪಡಿ ತರಬೇಕೆಂದು ಒತ್ತಾಯಿಸಿದರು.

ಭರವಸೆ: ಹೊಸದುರ್ಗ ತಾಲೂಕಿನ ದೊಡ್ಡಘಟ್ಟ ಮತ್ತು ಜಂತಿಕೊಳಲು ಗ್ರಾಮದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಕೂಡಲೇ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಿಂಪಡೆಯಲಾಗಿದೆ ಎಂದು ದಸಂಸ ರಾಜ್ಯಾಧ್ಯಕ್ಷ ರಾಜಗಿರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News