ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ

Update: 2019-12-04 15:43 GMT

ಬೆಂಗಳೂರು, ಡಿ.4: ಬಿಬಿಎಂಪಿಯ ಹನ್ನೆರೆಡು ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ಡಿ.4ರಂದು ನಿಗದಿಪಡಿಸಿದ್ದ ಸಮಯದಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗಿದೆ ಎಂದು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ತಿಳಿಸಿದ್ದಾರೆ.

ನಿಯಮದಂತೆ ಚುನಾವಣಾ ಪ್ರಕ್ರಿಯೆ ಮುಗಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗದಿತ ಸಮಯದಂತೆ (ಡಿ.4)ರಂದು ಸ್ಥಾಯಿ ಸಮಿತಿ ಚುನಾವಣೆ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಕೋರಂ ಇಲ್ಲದ ಪರಿಣಾಮ ಮತ್ತು ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗದಿರುವುದರಿಂದ ಸಭೆಯನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಕಟಿಸಲಾಗುವುದು ಎಂದು ಹೇಳಿದರು.

ಡಿ.5ಕ್ಕೆ ಸ್ಥಾಯಿ ಸಮಿತಿ ಅಧಿಕಾರವಧಿ ಪೂರ್ಣಗೊಳ್ಳಲಿದೆ ಎಂಬ ಕಾರಣಕ್ಕೆ ಡಿ.4ರಂದು ಸ್ಥಾಯಿ ಸಮಿತಿ ಚುನಾವಣೆಗೆ ಕಳೆದ ನ.21ರಂದೇ ನೋಟಿಸ್ ಜಾರಿಗೊಳಿಸಲಾಗಿತ್ತು. ನೋಟಿಸ್ ಜಾರಿಗೊಳಿಸುವುದಕ್ಕೂ ಮುಂಚೆ ನ.17ರಂದು ಚುನಾವಣಾ ಆಯೋಗದಿಂದ ಅನುಮತಿ ಪಡೆಯಲಾಗಿತ್ತು. ಸ್ಥಾಯಿ ಸಮಿತಿ ಚುನಾವಣೆ ಮುಂದೂಡುವಂತೆ ಮನವಿ ಪತ್ರ ಕೂಡಾ ಬಂದಿತ್ತು. ಆ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿತ್ತು ಎಂದು ಹೇಳಿದರು.

ಈ ವಿಷಯದ ಸಂಬಂಧ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಮತದಾನದ ದಿನವಾದ 48 ಗಂಟೆಗಳ ಕಾಲ 144 ಸೆಕ್ಷನ್ ಪ್ರಕಾರ 5ಕ್ಕಿಂತ ಹೆಚ್ಚು ಮಂದಿ ಸೇರುವ ಹಾಗಿಲ್ಲ ಮತ್ತು ಮತದಾನ ನಡೆಯುವ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಚುನಾವಣೆ ನಡೆಯಬಾರದು ಎಂದು ಚುನಾವಣಾ ಆಯೋಗವು ಸ್ಪಷ್ಟೀಕರಣ ನೀಡಿತ್ತು. ಅದಕ್ಕೆ ವಿನಾಯಿತಿ ನೀಡುವಂತೆ ನಾವು ಕೋರಿದ್ದೆವು. ವಿನಾಯಿತಿ ಕೊಡಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗವು ತಿಳಿಸಿದ ಪರಿಣಾಮ ಟೌನ್‌ಹಾಲ್ನಲ್ಲಿ ಚುನಾವಣೆ ನಡೆಸಲು ಕ್ರಮವಹಿಸಲಾಯಿತು ಎಂದರು.

ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಆಯ್ಕೆಯಾಗಿ ಹೊಸ ಶಾಸಕರು ಬರಲಿದ್ದಾರೆ. ಹಾಗಾಗಿ, ಸ್ಥಾಯಿ ಸಮಿತಿ ಚುನಾವಣೆಗೆ ಮತ್ತೆ ಮತದಾರ ಪಟ್ಟಿ ಪರಿಷ್ಕರಣೆ ಮಾಡಬೇಕಾಗಲಿದೆ. ಜೊತೆಗೆ ಮತ್ತೆ ಚುನಾವಣೆ ನಡೆಸುವ ಕನಿಷ್ಠ ಒಂದು ವಾರ ಮುನ್ನ ನೋಟಿಸ್ ಜಾರಿ ಮಾಡಬೇಕಾಗಲಿದೆ. ಈ ಎಲ್ಲ ಪ್ರಕ್ರಿಯೆ ನೋಡಿಕೊಂಡು ಮತ್ತೆ ಚುನಾವಣೆ ನಡೆಸುವ ದಿನಾಂಕ ಪ್ರಕಟಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News