ರಕ್ತದಲ್ಲಿ ಸೋಂಕು: ಕುಮಾರಸ್ವಾಮಿಗೆ ವಿಶ್ರಾಂತಿ ಪಡೆಯಲು ಸೂಚಿಸಿದ ವೈದ್ಯರು

Update: 2019-12-05 12:03 GMT

ಬೆಂಗಳೂರು, ಡಿ. 5: ಉಪಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಬಳಲಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವೈದ್ಯರ ಸಲಹೆ ಮೇರೆಗೆ ಹತ್ತು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ.

ಈ ಅವಧಿಯಲ್ಲಿ ಯಾವುದೇ ಪ್ರವಾಸ, ರಾಜಕೀಯ ನಾಯಕರು ಹಾಗೂ ಸಾರ್ವಜನಿಕರನ್ನು ಭೇಟಿ ಮಾಡದೇ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸೂಚಿಸಿರುವ ಹಿನ್ನೆಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಸಾರ್ವಜನಿಕರನ್ನು ಭೇಟಿ ಮಾಡುವುದಿಲ್ಲ ಎಂದು ತಿಳಿಸಲಾಗಿದೆ.

ಬಳಲಿಕೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಬುಧವಾರ ವೈದ್ಯರ ಸೂಚನೆ ಮೇರೆಗೆ ಹಲವು ತಪಾಸಣೆಗೆ ಒಳಪಟ್ಟರು. ರಕ್ತದಲ್ಲಿ ಸೋಂಕು ಉಂಟಾಗಿರುವುದು ಪರೀಕ್ಷಾ ವರದಿಗಳಿಂದ ಗೊತ್ತಾಗಿದೆ. ಆ ಹಿನ್ನೆಲೆಯಲ್ಲಿ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆಂದು ಗೊತ್ತಾಗಿದೆ.

2009ರಲ್ಲಿ ಉತ್ತರ ಕರ್ನಾಟಕ ಪ್ರವಾಹ ಪೀಡಿತರ ಪರಿವೀಕ್ಷಣೆಗೆ ಹೋಗಿದ್ದಾಗ ಇದೇ ರೀತಿ ಕುಮಾರಸ್ವಾಮಿ ಅವರಿಗೆ ಸೋಂಕು ಉಂಟಾಗಿತ್ತು. ವಿಶ್ರಾಂತಿ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕರಿಸಬೇಕಾಗಿ ಕುಮಾರಸ್ವಾಮಿ ಕುಟುಂಬದ ಸದಸ್ಯರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News