ಮತ್ತೆ ಆಪರೇಷನ್ ಕಮಲ ಮಾಡಿದರೆ ಜನ ಸುಮ್ಮನಿರಲ್ಲ: ದಿನೇಶ್ ಗುಂಡುರಾವ್

Update: 2019-12-05 12:28 GMT

ಬೆಂಗಳೂರು, ಡಿ.5: ಬಿಜೆಪಿಯವರು ಮತ್ತೆ ಆಪರೇಷನ್ ಕಮಲ ಮಾಡಿದರೆ ಜನ ಓಡಿಸುತ್ತಾರೆ. ಕಾಂಗ್ರೆಸ್ ಶಾಸಕರಿಗೆ ಫೋನ್ ಮಾಡಿದರೆ ಜನ ಸುಮ್ಮನಿರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರಕಾರ ಕೆಡವಲು ಬಿಜೆಪಿಯವರು ಆಪರೇಷನ್ ಮಾಡಿದರು. ಆ ಸಂದರ್ಭದಲ್ಲಿ ಸಿಎಂ ಬಿಎಸ್‌ವೈ ಮಾತನಾಡಿರುವ ಹಲವು ಆಡಿಯೋ, ವಿಡಿಯೋಗಳು ಸಾಬೀತಾಗಿದೆ. ಆಮಿಷ ತೋರಿಸಿ ಶಾಸಕರನ್ನು ಆಪರೇಷನ್ ಮಾಡಿದರು. ಶಾಸಕರ ಖರೀದಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗಿದೆ. ಬಿಜೆಪಿಯವರು ಮತ್ತೆ ಹಳೆ ಚಾಳಿ ಮುಂದುವರೆಸಿದರೆ ಜನ ಸುಮ್ಮನಿರಲ್ಲ ಎಂದು ತಿಳಿಸಿದರು.

ಅನರ್ಹ ಶಾಸಕರಾದ ಎಸ್.ಟಿ. ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್ ಅವರು ಮತ್ತೆ ಕಾಂಗ್ರೆಸ್‌ಗೆ ಸೇರಲು ಬಂದಿದ್ದರು. ಆದರೆ, ಅನರ್ಹರು ಮಾಡಿದ ದ್ರೋಹಕ್ಕೆ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲಿಲ್ಲ. ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವರು ಸೋಲಿನ ಭಯದಿಂದ ಕಾಂಗ್ರೆಸ್ ಮುಖಂಡರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಿದ್ದರು. ಇಂತಹ ಕೀಳು ಮಟ್ಟದ ರಾಜಕೀಯ ಖಂಡನೀಯ. ವಾಮ ಮಾರ್ಗದ ಮೂಲಕ ಗೆಲುವು ಪಡೆಯುವ ದಾರಿ ಒಳ್ಳೆಯದಲ್ಲ ಎಂದು ಹೇಳಿದರು.

ರಾಜ್ಯದ ಹಲವಾರು ಸಮಸ್ಯೆಗಳಿಗೆ ಯಡಿಯೂರಪ್ಪ ನೇತೃತ್ವದ ಸರಕಾರ ಸ್ಪಂದಿಸಲಿಲ್ಲ. ಚುನಾವಣೆ ಬಗ್ಗೆ ಗೊತ್ತಾದ ಬಳಿಕ ನೆರೆ ಸಂತ್ರಸ್ತರಿಗೆ ಕೇಂದ್ರ ಸರಕಾರ ಸ್ಪಂದಿಸಿತು. ಉಪ ಚುನಾವಣೆ ಬರದಿದ್ದರೆ ಹಣ ಬಿಡುಗಡೆ ಆಗುತ್ತಿರಲಿಲ್ಲ. ಪ್ರವಾಹ ಬಂದಾಗ ಜನರ ಸಮಸ್ಯೆಗೆ ಸ್ಪಂದಿಸಲು ಆಗಲಿಲ್ಲ. ಈಗ ಒಂದೊಂದು ಕ್ಷೇತ್ರದಲ್ಲಿ ಸಚಿವರು ಠಿಕಾಣಿ ಹೂಡಿದ್ದಾರೆ. ವೋಟು ಖರೀದಿ ಮಾಡಲು ನೋಟು ಉಪಯೋಗಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪಾಲಿಕೆ ಕಾಂಗ್ರೆಸ್ ಸದಸ್ಯ ವಸಂತಕುಮಾರ್ ಮಾತನಾಡಿ, ಕಾಫಿ ಕುಡಿಯೋಣ ಬನ್ನಿ ಎಂದು ಬಿಜೆಪಿ ಮುಖಂಡರು ಕರೆದುಕೊಂಡು ಹೋಗಿ ಏಕಾಏಕಿ ಸಿಎಂ ಯಡಿಯೂರಪ್ಪ ಅವರ ಮುಂದೆ ನಿಲ್ಲಸಿ ಬಲವಂತವಾಗಿ ಬಿಜೆಪಿಗೆ ಸೇರಿಸಿಕೊಂಡಿದ್ದರು. ನಾನು ಹಣ ಪಡೆದು ಬಿಜೆಪಿಗೆ ಹೋಗಿದ್ದೇನೆ ಎನ್ನುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನನ್ನಿಂದ ತಪ್ಪಾಗಿದೆ. ಹೀಗಾಗಿ, ಮರಳಿ ಕಾಂಗ್ರೆಸ್‌ಗೆ ಬಂದಿದ್ದೇನೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News