ಮತದಾನದ ವೇಳೆ ಫೋಟೋ ಕ್ಲಿಕ್: ಬಿಜೆಪಿ ಕಾರ್ಯಕರ್ತನ ಬಂಧನ

Update: 2019-12-05 12:40 GMT

ಬೆಂಗಳೂರು, ಡಿ.5: ಮತದಾನ ಚಲಾಯಿಸುವ ವೇಳೆ ಫೋಟೋವನ್ನು ಕ್ಲಿಕ್ಕಿಸಿಕೊಂಡ ಓರ್ವ ಬಿಜೆಪಿ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿ, ಆತ ಚಲಾಯಿಸಿದ್ದ ಮತವನ್ನು ಅಸಿಂಧುಗೊಳಿಸಿದ್ದಾರೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲಸೂರಿನ ಬೂತ್ ಸಂಖ್ಯೆ 171ರಲ್ಲಿ ಬಿಜೆಪಿ ಕಾರ್ಯಕರ್ತ ಚಂದ್ರಶೇಖರ್ ಎಂಬಾತ ಮತದಾನ ಚಲಾಯಿಸುವ ವೇಳೆ ಫೋಟೋವನ್ನು ಕ್ಲಿಕ್ಕಿಸಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ.

ಮತಗಟ್ಟೆ ಪ್ರವೇಶಿಸುವ ಮುನ್ನವೇ ಮೊಬೈಲ್ ತೆಗೆದುಕೊಂಡು ಹೋಗದಂತೆ ಮತಗಟ್ಟೆ ಸಿಬ್ಬಂದಿ ಆತನಿಗೆ ತಿಳಿಸಿದ್ದರು. ಆತ ತನ್ನ ಬಳಿ ಮೊಬೈಲ್ ಇಲ್ಲವೆಂದು ಹೇಳಿ ಒಳಗೆ ಹೋಗಿ ತನ್ನ ಹಕ್ಕನ್ನು ಚಲಾಯಿಸುವಾಗ ತನ್ನ ಮೊಬೈಲ್ ತೆಗೆದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ಈ ಕುರಿತು ಮತಗಟ್ಟೆ ಸಿಬ್ಬಂದಿ ಬಂದು ಪ್ರಶ್ನಿಸಿದಾಗ ಯಾವ ಅಭ್ಯರ್ಥಿಗೆ ಮತ ಹಾಕಿದೆ ಎಂದು ತೋರಿಸಲು ಫೋಟೋ ತೆಗೆದಿರುವುದಾಗಿ ತಿಳಿಸಿದ್ದಾನೆ. ಮತದಾನವನ್ನು ಗೌಪ್ಯವಾಗಿಡಬೇಕೆಂಬ ನಿಯಮ ಉಲ್ಲಂಘಿಸಿದ ಚಂದ್ರಶೇಖರನನ್ನು ಪೊಲೀಸರು ವಶಕ್ಕೆ ಪಡೆದು ಆತ ಚಲಾಯಿಸಿದ್ದ ಮತವನ್ನು ಅಸಿಂಧುಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News