BIG BREAKING NEWS ಹೈದರಾಬಾದ್ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳು ಎನ್ ಕೌಂಟರ್ ಗೆ ಬಲಿ

Update: 2019-12-06 15:36 GMT

  ಹೈದರಾಬಾದ್,ಡಿ.: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಹೈದರಾಬಾದ್‌ನ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಹೊಸ ತಿರುವು ಪಡೆದಿದ್ದು, ಈ ಘೋರ ಕೃತ್ಯದ ಎಲ್ಲಾ ನಾಲ್ವರು ಆರೋಪಿಗಳನ್ನು ಶುಕ್ರವಾರ ನಸುಕಿನಲ್ಲಿ ಪೊಲೀಸರು ಎನ್‌ಕೌಂಟರ್ ನಡೆಸಿ ಹತ್ಯೆಗೈದಿದ್ದಾರೆ. ಇಂದು ನಸುಕಿನಲ್ಲಿ 3:30ರ ವೇಳೆಗೆ ಯುವತಿ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಆರೋಪಿಗಳನ್ನು ತನಿಖೆಗಾಗಿ ಕೊಂಡೊಯ್ದಾಗ ಅವರು ಪರಾರಿಯಾಗಲು ಯತ್ನಿಸಿದ್ದು, ಆಗ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.

 ಪಶುವೈದ್ಯೆಯ ಅತ್ಯಾಚಾರ ಹತ್ಯೆ ನಡೆದ ನವೆಂಬರ್ 27ರ ರಾತ್ರಿಯಂದು ಏನೇನು ನಡಯಿತೆಂಬ ಬಗ್ಗೆ ವಿಚಾರಣೆ ನಡೆಸಲು ಪ್ರಕರಣದ ನಾಲ್ವರು ಆರೋಪಿಗಳಾದ ಮುಹಮ್ಮದ್ ಆರೀಫ್ (26), ಜೊಲ್ಲು ಶಿವ (20), ಜೊಲ್ಲು ನವೀನ್ (20) ಹಾಗೂ ಚಿಂತಾಕುಂಟ ಚೆನ್ನಕೇಶವಲು (20) ಇಂದು ಮುಂಜಾನೆ 3:00 ಗಂಟೆಯ ವೇಳೆಗೆ, ಹೈದರಾಬಾದ್‌ನಿಂದ 50 ಕಿ.ಮೀ. ದೂರದ ಚಟ್ಟಾಂಪಲ್ಲಿಗೆ ಕೊಂಡೊಯ್ಯಲಾಗಿತ್ತು. ಮಹಿಳೆಯ ಸುಟ್ಟು ಕರಕಲಾದ ಮೃತದೇಹ ಪತ್ತೆಯಾದ ಹೈದರಾಬಾದ್-ಬೆಂಗಳೂರು ಹೆದ್ದಾರಿ ಸೇತುವೆಯ ಸಮೀಪ ಅವರನ್ನು ಕರಕೊಂಡು ಬರಲಾಗಿತ್ತು. ಈ ಸಂದರ್ಭದಲ್ಲಿ ಆರೋಪಿಗಳಲ್ಲೊಬ್ಬಾತ ತಪ್ಪಿಸಿಕೊಳ್ಳುವಂತೆ ಇತರ ಮೂವರಿಗೆ ಸಂಜ್ಞೆ ಮಾಡಿದ್ದನೆಂದು ಪೊಲೀಸರು ತಿಳಿಸಿ ದ್ದಾರೆ.ಅವರಲ್ಲಿ ಇಬ್ಬರು ಪೊಲೀಸರ ಮೇಲೆ ದಾಳಿ ನಡೆಸಿ, ಅವರ ಬಂಧೂಕುಗಳನ್ನು ಕಸಿದುಕೊಂಡಿದ್ದರು. ಆಗ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ ಹತ್ಯೆಗೈದಿದ್ದಾರೆಂದು ಹೈದರಾಬಾದ್‌ನ ಪೊಲೀಸ್ ಉಪ ಆಯುಕ್ತ ಪ್ರಕಾಶ್ ರೆಡ್ಡಿ ತಿಳಿಸಿದ್ದಾರೆ. ನಾಲ್ವರು ಆರೋಪಿಗಳು ವೈದ್ಯಕೀಯ ನೆರವು ಆಗಮಿಸುವ ಮುನ್ನವೇ ಸಾವನ್ನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಈ ಮಧ್ಯೆ ಹೈದರಾಬಾದ್ ಪೊಲೀಸರ ಎನ್‌ ಕೌಂಟರ್‌ನ ಸಾಚಾತನದ ಬಗ್ಗೆ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಸಂದೇಹ ವ್ಯಕ್ತಪಡಿಸಿದೆ. ಪ್ರಕರಣದ ಬಗ್ಗೆ ತಾನು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸಲು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ನೇತೃತ್ವದ ತಂಡವನ್ನು ತೆಲಂಗಾಣಕ್ಕೆ ಕಳುಹಿಸುವುದಾಗಿ ಅದು ಹೇಳಿದೆ. ಈ ತಂಡವು ಶೀಘ್ರದಲ್ಲೇ ವರದಿಯೊಂದನ್ನು ಸಲ್ಲಿಸಲಿದೆ ಎಂದು ಎನ್‌ಎಚ್‌ಆರ್‌ಸಿ ತಿಳಿಸಿದೆ.

ನವೆಂಬರ್ 27ರ ರಾತ್ರಿಯಂದು 27 ವರ್ಷ ವಯಸ್ಸಿನ ಪಶುವೈದ್ಯೆ ದಿಶಾ (ಹೆಸರು ಬದಲಾಯಿಸಲಾಗಿದೆ), ವಾಹನದಟ್ಟಣೆಯ ಹೆದ್ದಾರಿಯ ಪಕ್ಕದಲ್ಲಿರುವ ಟೋಲ್‌ಬೂತ್‌ನ ಸಮೀಪ ತನ್ನ ಸ್ಕೂಟರನ್ನು ಪಾರ್ಕ್ ಮಾಡಿದ್ದರು. ಅವರು ಉದ್ದೇಶಪೂರ್ವಕವಾಗಿ ಸ್ಕೂಟರ್ ಟೈರನ್ನು ಗಾಳಿ ತೆಗೆದು ಪಂಕ್ಚರ್ ಮಾಡಿದ್ದರು. ಚರ್ಮರೋಗದ ಚಿಕಿತ್ಸೆಗಾಗಿ ಕ್ಲಿನಿಕ್‌ಗೆ ತೆರಳಿದ್ದ ಆಕೆ ವಾಪಸ್ ಬಂದಾಗ, ಆಕೆಯ ಸ್ಕೂಟರ್‌ನ್ನು ಸರಿಪಡಿಸುವ ಭರವಸೆ ನೀಡಿ ಅವರನ್ನು ನಿರ್ಜನವಾದ ಟ್ರಕ್‌ಯಾರ್ಡ್‌ಗೆ ಕರೆದೊಯ್ದಿದ್ದರು. ಅಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಬಳಿಕ ಕತ್ತುಹಿಸುಕಿ ಸಾಯಿಸಿದ್ದರು ಹಾಗೂ ಗುರುತುಸಿಗದಂತೆ ಮಾಡಲು ಆಕೆಯ ಮೃತದೇಹಕ್ಕೆ ಪೆಟ್ರೋಲ್ ಸುರಿದು ಸುಟ್ಟುಹಾಕಿದ್ದರು ಎಂದು ಪೊಲೀಸರು ಆರೋಪಿಸಿದ್ದರು.

ಸರಕಾರಿ ಆಸ್ಪತ್ರೆಯಲ್ಲಿ ಸಹಾಯಕ ಪಶುವೈದ್ಯೆಯಾಗಿದ್ದ ದಿಶಾ ಅವರ ಮೃತ ದೇಹವು ನವೆಂಬರ್ 28ರಂದು ಬೆಳಗ್ಗೆ ಸೈಬರಾಬಾದ್ ಪೊಲೀಸ್‌ಕಮೀಶನರೇಟ್ ವ್ಯಾಪ್ತಿಯ ಚಟ್ಟಾಂಪಲ್ಲಿ ಎಂಬಲ್ಲಿನ ಮೋರಿಯೊಂದರಲ್ಲಿ ಸುಟ್ಟುಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಪಶುವೈದ್ಯೆ ದಿಶಾ ಅತ್ಯಾಚಾರ, ಹತ್ಯೆ ಪ್ರಕರಣವು ತೆಲಂಗಾಣ ಸೇರಿದಂತೆ ದೇಶಾದ್ಯಂತ ಭಾರೀ ಜನಾಕ್ರೋಶವನ್ನು ಉಂಟು ಮಾಡಿತ್ತು.

ಎನ್‌ಕೌಂಟರ್‌ಗೆ ಸಜ್ಜನರ್ ನೇತೃತ್ವ

ಹೈದರಾಬಾದ್‌ನ ಪಶುವೈದ್ಯೆ ದಿಶಾ ಅವರ ಅತ್ಯಾಚಾರ ಹಾಗೂ ಹತ್ಯೆ ಆರೋಪಿಗಳ ಎನ್‌ಕೌಂಟರ್ ನಡೆಸಿದ ತಂಡದ ಪೊಲೀಸ್ ಅಧಿಕಾರಿಗಳಲ್ಲೊಬ್ಬರಾದ ವಿಶ್ವನಾಥ ಸಿ. ಸಜ್ಜನರ್ ಅವರು ಕರ್ನಾಟಕದ ಹುಬ್ಬಳ್ಳಿಯವರು. ಅವಿಭಜಿತ ಆಂಧ್ರಪ್ರದೇಶದ 1996ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಸೈಬರಾಬಾದ್ ಪೊಲೀಸ್ ಕಮೀಶರ್ ಆಗಿರುವ ಸಜ್ಜನರ್ ಅವರು ಶುಕ್ರವಾರ ನಸುಕಿನಲ್ಲಿ 3:00 ಗಂಟೆಯ ವೇಳೆಗೆ ಘಟನಾ ನಡೆದ ಸ್ಥಳಕ್ಕೆ ಮಹಜರು ನಡೆಸಲು ಆರೋಪಿಗಳನ್ನು ಕರೆದೊಯ್ದ ಪೊಲೀಸ್ ತಂಡದ ನೇತೃತ್ವ ವಹಿಸಿದ್ದರು.

ಸಜ್ಜನರ್ ಈ ಹಿಂದೆಯೂ ಎನ್‌ಕೌಂಟರ್ ಘಟನೆಗಳಲ್ಲಿ ಭಾಗಿಯಾಗಿದ್ದರು. 2008ರಲ್ಲಿ ಸಜ್ಜನರ್ ಅವರು ವಾರಂಗಲ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದಾಗ, ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿದ ಮೂವರು ಆರೋಪಿಗಳನ್ನು ಎನ್‌ಕೌಂಟರ್ ನಡೆಸಿ ಕೊಲ್ಲಲಾಗಿತ್ತು. ಆಗ ಸಜ್ಜನರ್ ಅವರು ವಾರಂಲ್‌ನಲ್ಲಿ ಪೊಲೀಸ್ ಅಧೀಕ್ಷಕರಾಗಿದ್ದರು.

 ಆ್ಯಸಿಡ್ ದಾಳಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರ ಮುಖ ವಿರೂಪಗೊಂಡಿದ್ದರೆ, ಇನ್ನೊಬ್ಬಾಕೆಯ ಸುಟ್ಟಗಾಯಗಳಿಂದಾಗಿ ಸಾವನ್ನಪ್ಪಿದ್ದಳು.

  ಆ್ಯಸಿಡ್ ದಾಳಿಗೆ ಬಳಸಲಾದ ಬೈಕನ್ನು ಪೊಲೀಸರು ವಶಪಡಿಸಿಕೊಳ್ಳಲು ಹೋದಾಗ, ಮೂವರು ಆರೋಪಿಗಳು ತಮ್ಮ ಮೇಲೆ ದಾಳಿ ನಡೆಸಿದ್ದರು. ಆಗ ಆತ್ಮರಕ್ಷಣೆಗಾಗಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತೆಂದು ಪೊಲೀಸರು ತಿಳಿಸಿದ್ದರು.

ಎನ್‌ಎಚ್‌ಆರ್‌ಸಿಯಿಂದ ತನಿಖೆಗೆ ಆದೇಶ

ಹೈದರಾಬಾದ್‌ನ ಪಶುವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆಗದ ಘಟನೆಯನ್ನು ತಾನು ಸ್ವಯಂಪ್ರೇರಿತವಾಗಿ ತನಿಖೆ ನಡೆಸುವುದಾಗಿ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗವು ಶುಕ್ರವಾರ ತಿಳಿಸಿದೆ.

ಹೈದರಾಬಾದ್ ಎನ್‌ಕೌಂಟರ್ ಘಟನೆಯನ್ನು ಅತ್ಯಂತ ಜಾಗರೂಕತೆಯಿಂದ ತನಿಖೆಗೊಳಪಡಿಸಬೇಕೆಂದು ಆಯೋಗವು ಅಭಿಪ್ರಾಯಪಡುತ್ತದೆ. ಆ ಪ್ರಕಾರ, ಈ ವಿಷಯದ ಬಗ್ಗೆ ತನಿಖೆಗಾಗಿ ಸತ್ಯಶೋಧನಾ ತಂಡವನ್ನು ತಕ್ಷಣವೇ ಕಳುಹಿಸುವಂತೆ ಅದು ತನ್ನ ಮಹಾನಿರ್ದೇಶಕರನ್ನು ಕೇಳಿಕೊಂಡಿದೆ’’ ಎಂದು ಎನ್‌ಎಚ್‌ಆರ್‌ಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಹಿರಿಯ ಪೊಲೀಸ್ ಅಧೀಕ್ಷಕ ನೇತೃತ್ವದ ಮಾನವಹಕ್ಕುಗಳ ತನಿಖಾ ವಿಭಾಗದ ತಂಡವು ತಕ್ಷಣವೇ ಹೈದರಾಬಾದ್‌ಗೆ ತೆರಳಲಿದ್ದು, ಸಾಧ್ಯವಾದಷ್ಟು ಬೇಗನೇ ಅದು ವರದಿಯನ್ನು ಸಲ್ಲಿಸಲಿದೆಯೆಂದು ಆಯೋಗವು ತಿಳಿಸಿದೆ.

ಘಟನಾ ಸ್ಥಳದ ಮಹಜರು ನಡೆಸಿದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗರೂಕತೆ ವಹಿಸಲು ಪೊಲೀಸರಿಗೆ ಮುನ್ನೆಚ್ಚರಿಕೆ ನೀಡಿರಲಿಲ್ಲ ಅಥವಾ ಅವರನ್ನು ಪೂರ್ವತಯಾರಿಗೊಳಿಸಿರಲಿಲ್ಲವೆಂಬುದು ಈ ಘಟನೆಯಿಂದ ಸ್ಪಷ್ಟವಾಗಿ ತಿಳಿಯುತ್ತದೆ.

  ಮೃತಪಟ್ಟವರು ತನಿಖೆಯ ಸಂದರ್ಭದಲ್ಲಿ ಪೊಲೀಸರಿಂದ ಬಂಧಿತರಾದವರು ಹಾಗೂ ಪ್ರಕರಣದ ಕುರಿತ ತೀರ್ಪನ್ನು ಸೂಕ್ತವಾದ ನ್ಯಾಯಾಲಯವು ಇನ್ನಷ್ಟೇ ನೀಡಬೇಕಾಗಿದೆ. ಒಂದು ವೇಳೆ ಬಂಧಿತ ಆರೋಪಿಗಳು ನಿಜಕ್ಕೂ ತಪ್ಪಿತಸ್ಥರೇ ಆಗಿದ್ದಲ್ಲಿ ಅವರನ್ನು ನ್ಯಾಯಾಲಯದ ನಿರ್ದೇಶನದಂತೆ ಕಾನೂನಿನಡಿ ಶಿಕ್ಷೆಗೊಳಪಡಿಸಬೇಕಾಗಿತ್ತು ಎಂದು ಅದು ಹೇಳಿದೆ.

ಎನ್‌ಕೌಂಟರ್‌ಗೆ ಪರ-ವಿರೋಧದ ಪ್ರತಿಕ್ರಿಯೆ

ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯ ಸೇತುವೆಯ ಬಳಿ ಶುಕ್ರವಾರ ಮುಂಜಾನೆ 3:30ರ ವೇಳೆಗೆ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಆರೋಪಿಗಳನ್ನು ಹತ್ಯೆಗೈದ ಘಟನೆಗೆ ದೇಶಾದ್ಯಂತ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಮಾಜದ ಕೆಲವು ಗಣ್ಯರು ಹಾಗೂ ರಾಜಕೀಯ ಮುಖಂಡರು ಪೊಲೀಸರ ಕ್ರಮವನ್ನು ಶ್ಲಾಘಿಸಿದ್ದರೆ, ಹಲವಾರು ಮಂದಿ ಎನ್‌ಕೌಂಟರ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್ ಯುವತಿಯ ಅತ್ಯಾಚಾರ ಹಾಗೂ ಹತ್ಯೆ ಆರೋಪಿಗಳ ಎನ್‌ಕೌಂಟರ್ ಬಗ್ಗೆ ವ್ಯಾಪಕ ಪ್ರಸಂಸೆ ವ್ಯಕ್ತವಾಗುತ್ತಿರುವ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೇಶದ ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯ ವಿಶ್ವಾಸ ನಷ್ಟವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

  ಬಿಜೆಪಿ ಸಂಸದೆ, ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಕೂಡಾ ಎನ್‌ಕೌಂಟರ್ ಘಟನೆಯನ್ನು ವಿರೋಧಿಸಿದ್ದಾರೆ. ‘‘ ನಡೆದಿದ್ದಂತಹ ಘಟನೆಯು (ಪಶುವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆಘಟನೆ) ನಿಜಕ್ಕೂ ದೇಶದ ಪಾಲಿಗೆ ಅತ್ಯಂತ ಕೆಟ್ಟ ವಿಷಯ. ಆದರೆ ಹಾಗೆಂದು ನಿಮಗೆ ಬೇಕಾದಂತೆ ನೀವು ಜನರನ್ನು ಕೊಲ್ಲುವಂತಿಲ್ಲ. ನೀವು ಕಾನೂಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಏನೇ ಇದ್ದರೂ ನ್ಯಾಯಾಲಯವು ಆರೋಪಿಗಳನ್ನು ಗಲ್ಲಿಗೇರಿಸುತ್ತದೆಯೆಂದು ಮೇನಕಾ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಅವರು ಈ ಎನ್‌ಕೌಂಟರ್ ಹತ್ಯೆಗಳು ನಮ್ಮ ವ್ಯವಸ್ಥೆಗೆ ಆಗಿರುವ ಕಪ್ಪುಚುಕ್ಕೆಯೆಂದು ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಕಳವಳ ವ್ಯಕ್ತಪಡಿಸಿದ್ದಾರೆ. ‘‘ ಅತ್ಯಾಚಾರವೆಂಬುದು ಅತ್ಯಂತ ಹೀನಾಯ ಕೃತ್ಯವಾಗಿದೆ. ಆ ಅಪರಾಧಕ್ಕೆ ಕಾನೂನಿನ ನಿಯಮಗಳಡಿ ಅತ್ಯಂತ ಕಟ್ಟುನಿಟ್ಟಾಗಿ ಶಿಕ್ಷೆ ನೀಡಬೇಕಾಗಿದೆ. ಅತ್ಯಾಚಾರ ಪ್ರಕರಣಕ್ಕೆ ತುರ್ತು ನ್ಯಾಯ ಒದಗಿಸಬೇಕೆಂಬ ತುಡಿತವಿರುವುದನ್ನು ನಾನು ಬಲ್ಲೆ. ಆದರೆ ಅದಕ್ಕೆ ಇದು ದಾರಿಯಲ್ಲವೆಂದು ಕಾರ್ತಿ ಟ್ವೀಟ್ ಮಾಡಿದ್ದಾರೆ.

ಪುತ್ರಿಯ ಆತ್ಮಕ್ಕೆ ಶಾಂತಿ ದೊರೆತಿದೆ

ತನ್ನ ಪುತ್ರಿಯ ಆತ್ಮಕ್ಕೆ ಈಗಾಲಾದರೂ ಶಾಂತಿ ದೊರೆತೀತು ಎಂದು ಹೈದರಾಬಾದ್ ಎನ್‌ಕೌಂಟರ್ ಘಟನೆ ಬಗ್ಗೆ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ಪಶುವೈದ್ಯೆ ದಿಶಾ ಅವರ ತಂದೆ ಹೇಳಿದ್ದಾರೆ.

 ‘‘ ನನ್ನ ಪುತ್ರಿ ಮೃತಪಟ್ಟು ಈಗಾಗಲೇ 10 ದಿನಗಳು ಕಳೆದಿವೆ. ಇಂದು ನಡೆದಂತಹ ಘಟನೆಗಾಗಿ ಪೊಲೀಸರು ಹಾಗೂ ಸರಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸುತ್ತೇವೆ. ಈಗಲಾದರೂ ನನ್ನ ಪುತ್ರಿಯ ಆತ್ಮಕ್ಕೆ ಶಾಂತಿ ದೊರೆತಿದೆ’’ಎಂದವರು ಹೇಳಿದ್ದಾರೆ.

 ಮೃತ ದಿಶಾಳ ಸಹೋದರಿ ಹೈದರಾಬಾದ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ‘‘ ಎನ್‌ಕೌಂಟರ್‌ನಲ್ಲಿ ನಾಲ್ವರು ಆರೋಪಿಗಳು ಹತ್ಯೆಯಾಗಿರುವುದು ನನಗೆ ಸಂತಸವನ್ನುಂಟುಮಾಡಿದೆ. ಈ ಘಟನೆಯೊಂದು ಮೇಲ್ಪಂಕ್ತಿಯೊಂದನ್ನು ಹಾಕಿಕೊಟ್ಟಿದೆ. ಪೊಲೀಸರು ಹಾಗೂ ಮಾಧ್ಯಮಗಳ ಬೆಂಬಲಕ್ಕೆ  ನಾನು ಕೃತಜ್ಞಳಾಗಿದ್ದೇನೆ’’ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News