'ಎನ್‌ಕೌಂಟರ್' ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಕ್ರಿಯೆ

Update: 2019-12-06 14:28 GMT

ಬೆಂಗಳೂರು, ಡಿ.6: ತೆಲಂಗಾಣ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪಿಗಳ ಮೇಲೆ ಎನ್‌ಕೌಂಟರ್ ಮಾಡಿರುವ ಪೊಲೀಸರ ಕ್ರಮ ಸರಿಯಾಗಿದ್ದು, ಈ ಸಂದರ್ಭದಲ್ಲಿ ಪೊಲೀಸರನ್ನು ಬೆಂಬಲಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮುಂಜಾನೆ ಆರೋಪಿಗಳನ್ನು ಮಹಜರು ಮಾಡಲು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದ ವೇಳೆ, ಪೊಲೀಸರ ಮೇಲೆ ದಾಳಿಗೆ ಯತ್ನವಾಗಿದೆ. ಇಂತಹ ವೇಳೆ ಪೊಲೀಸರು ಕೈಗೊಳ್ಳುವ ಕ್ರಮ ಸರಿಯಾಗಿದೆ ಎಂದರು.

ಆರೋಪಿಗಳು ತಪ್ಪಿಸಿಕೊಂಡಿದ್ದರೆ ಪರಿಸ್ಥಿತಿ ಬೇರೆ ರೀತಿ ತಿರುಗುತ್ತಿತ್ತು. ಹಾಗಾಗಿ ಅಲ್ಲಿನ ಪೊಲೀಸರು ಗಂಭೀರ ಕ್ರಮ ಕೈಗೊಂಡಿರುವುದ ಸಮರ್ಥನೀಯ, ಸರಿಯಾದ ನಿರ್ಧಾರ ಕೂಡ ಎಂದ ಅವರು, ಘಟನೆಯಲ್ಲಿ ಒಬ್ಬ ಆರೋಪಿಯಷ್ಟೇ ಭಾಗಿಯಾಗಿಲ್ಲ. ನಾಲ್ಕು ಮಂದಿ ಇದ್ದಾರೆ. ಹಾಗಾಗಿ ಅತ್ಯಾಚಾರ ಮತ್ತು ಕೊಲೆ ವ್ಯವಸ್ಥಿತವಾದ ಅಪರಾಧವಾಗಿದೆ ಎಂದು ವಿವರಿಸಿದರು.

ಅಪರಾಧ ಕೃತ್ಯಗಳನ್ನು ಕಡಿಮೆ ಮಾಡಲು ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದ್ದು, ಬೆಂಗಳೂರಿನ ಬಹಳಷ್ಟು ಅಪಾರ್ಟ್‌ಮೆಂಟ್‌ಗಳಲ್ಲಿ ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂಬುದೇ ತಿಳಿಯುವುದಿಲ್ಲ. ಹೀಗಾಗಿ, ಪೊಲೀಸರು ಹಲೋ ನೈಬರ್ ಎಂಬ ಹೊಸ ಕಾರ್ಯಕ್ರಮವನ್ನು ರೂಪಿಸಿದ್ದಾರೆ. ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ನೆರೆ-ಹೊರೆಯವರನ್ನು ಪರಸ್ಪರ ಪರಿಚಯಿಸಲಾಗುತ್ತದೆ ಎಂದು ಭಾಸ್ಕರ್ ರಾವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News