ವಂಚನೆ ಆರೋಪ: ಟರ್ಫ್ ಕ್ಲಬ್ ಮೇಲೆ ಸಿಸಿಬಿ ದಾಳಿ, 96 ಲಕ್ಷ ರೂ. ಜಪ್ತಿ

Update: 2019-12-06 16:51 GMT

ಬೆಂಗಳೂರು, ಡಿ.6: ಅವ್ಯವಹಾರ ಆರೋಪ ಕೇಳಿ ಬಂದ ಬೆನ್ನಲ್ಲೇ ಬೆಂಗಳೂರು ಟರ್ಫ್ ಕ್ಲಬ್ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, 96 ಲಕ್ಷ ರೂ. ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಶುಕ್ರವಾರ ಇಲ್ಲಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಟರ್ಫ್ ಕ್ಲಬ್ ಮೇಲೆ ಸಿಸಿಬಿ ಡಿಸಿಪಿಗಳಾದ ಕುಲದೀಪ್ ಜೈನ್ ಹಾಗೂ ರವಿಕುಮಾರ್ ನೇತೃತ್ವದಲ್ಲಿ ನಾಲ್ವರು ಎಸಿಪಿ ಹಾಗೂ 20 ಪೊಲೀಸ್ ಇನ್ಸ್‌ಪೆಕ್ಟರ್ ತಂಡ ಈ ದಾಳಿ ನಡೆಸಿದೆ.

ಕೆಲ ಖಾಸಗಿ ಬುಕ್ಕಿಗಳು ಕುದುರೆ ಪಂದ್ಯಗಳಲ್ಲಿ ಸಾರ್ವಜನಿಕರಿಂದ ಸಂಗ್ರಹಣೆ ಮಾಡಿದ ಹಣಕ್ಕೆ ಸರಿಯಾದ ದಾಖಲೆಗಳನ್ನು ನಿರ್ವಹಿಸದೆ, ಸರಕಾರಕ್ಕೆ ಜಿಎಸ್ಟಿ(ತೆರಿಗೆ) ಸಲ್ಲಿಸದೆ, ಅವ್ಯವಹಾರಗಳ ಮೂಲಕ ವಂಚನೆ ಮಾಡುತ್ತಿದ್ದ ಬಗ್ಗೆ ದೂರು ಕೇಳಿಬಂದ ಹಿನ್ನೆಲೆ ಈ ದಾಳಿ ನಡೆಸಲಾಗಿದೆ ಎಂದು ಸಿಸಿಬಿ ತಿಳಿಸಿದೆ.

ದಾಳಿ ವೇಳೆ, 96 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದ್ದು, 40 ಜನ ಖಾಸಗಿ ಬುಕ್ಕಿಗಳನ್ನು ವಿಚಾರಣೆಗೊಳಪಡಿಸಲಾಗಿದೆ. ಅಲ್ಲದೆ, ಬುಕ್ಕಿಗಳು ಮತ್ತು ಕೌಂಟರ್ ಸಿಬ್ಬಂದಿ ನಡುವೆ ಒಳಒಪ್ಪಂದ ನಡೆಯುತಿತ್ತು ಎನ್ನಲಾಗಿದೆ.

ಬುಕ್ಕಿಯಿಂದ ಒಂದು ಕೋಟಿ ಬೆಟ್ಟಿಂಗ್ ನಡೆಸಿದರೆ ಹತ್ತು ಲಕ್ಷ ರೂಪಾಯಿ ಕೌಂಟರ್ ಸಿಬ್ಬಂದಿಗೆ ಹೋಗುತ್ತಿತ್ತು. ಹೀಗೆ, ಹೆಚ್ಚು ಬೆಟ್ಟಿಂಗ್ ಆದ ಕುದುರೆಯನ್ನು ಸೋಲಿಸಲು ಇವರೇ ಸಂಚು ರೂಪಿಸಿ, ಜಾಕಿಗೆ ಆಮಿಷವೊಡ್ಡುತ್ತಿದ್ದ ಆರೋಪ ಕೇಳಿ ಬಂದಿದೆ. ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಸಿಸಿಬಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News