ಹಿಂದಿಯನ್ನು ಜ್ಞಾನದ ಭಾಷೆಯಾಗಿ ಕಲಿಯೋಣ: ಸಚಿವ ಸುರೇಶ್‌ ಕುಮಾರ್

Update: 2019-12-07 12:37 GMT

ಬೆಂಗಳೂರು, ಡಿ.7: ಮೈಸೂರು ಹಿಂದಿ ಪ್ರಚಾರ ಪರಿಷದ್ ಯಾರ ಮೇಲೆಯೂ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುತ್ತಿಲ್ಲ. ಕೇವಲ ಜ್ಞಾನದ ಭಾಷೆಯಾಗಿ ಕಲಿಸುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್ ತಿಳಿಸಿದ್ದಾರೆ.

ಶನಿವರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಹಿಂದಿ ಪ್ರಚಾರ ಪರಿಷದ್‌ನ 44ನೇ ದೀಕ್ಷಾಂತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿ ಭಾಷೆಯೂ ಸೇರಿದಂತೆ ಇತರೆ ಭಾಷೆಯನ್ನು ಕರಗತ ಮಾಡಿಕೊಂಡರೆ ಕನ್ನಡೇತರ ಜನರೊಂದಿಗೆ ವ್ಯವಹರಿಸಲು ಸಾಧ್ಯವಾಗುತ್ತದೆ. ಯಾವುದೇ ಭಾಷಾ ಕಲಿಕೆ, ಭಾಷಾ ಸಾಹಿತ್ಯ ಆಸ್ವಾದಿಸಿದಾಗ ಪರಿಪೂರ್ಣ ಮಾನವರಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಹೈದರಾಬಾದ್‌ನ ಪಶುವೈದ್ಯೆ ಅತ್ಯಾಚಾರದ ನಂತರ ಕೊಲೆ ಆರೋಪಿಗಳ ಹತ್ಯೆ ವಿಷಯವನ್ನು ಪ್ರಸ್ತಾಪಿಸಿದ ಅವರು, ಇಂತಹ ಘಟನೆಗಳು ಮರುಕಳಿಸದಂತೆ ನೈತಿಕ ಶಿಕ್ಷಣದ ಅಗತ್ಯವಿದೆ. ಪೋಷಕರು ಗಂಡು ಮಕ್ಕಳ ಮೇಲೆ ನಿಗಾವಹಿಸಿ, ಉತ್ತಮ ವೌಲ್ಯಗಳನ್ನು ಅವಳಡಿಸಿಕೊಳ್ಳುವಂತೆ ಪ್ರೇರಣೆ ನೀಡಬೇಕೆಂದು ಅವರು ಹೇಳಿದರು.

ಕೇಂದ್ರ ಮಾನವ ಸಂಪನ್ಮೂಲ ವಿಕಾಸ ಮಂತ್ರಾಲಯ ಕೇಂದ್ರೀಯ ಹಿಂದಿ ನಿರ್ದೇಶನಾಲಯ ಉನ್ನತ ಶಿಕ್ಷಣ ವಿಭಾಗದ ಉಪನಿರ್ದೇಶಕ ಡಾ.ರಾಕೇಶ್ ಕುಮಾರ್ ಶರ್ಮಾ ಮಾತನಾಡಿದರು. ಮೈಸೂರು ಹಿಂದಿ ಪ್ರಚಾರ ಪರಿಷದ್‌ನ ಅಧ್ಯಕ್ಷ ಡಾ.ಜಿ.ಪಿ.ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಚಿವ ಆರ್.ಚಂದ್ರಶೇಖರ್, ಸದಸ್ಯ ಆರ್.ಮನೋಹರ ಭಾರತಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News