ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕು: ಅಣ್ಣಾಮಲೈ

Update: 2019-12-07 12:36 GMT

ಬೆಂಗಳೂರು, ಡಿ.7: ವಿದ್ಯಾರ್ಥಿಗಳು ಕೀಳರಿಮೆ ತೊರೆದು ಅಚಲ ಆತ್ಮವಿಶ್ವಾಸ ಬೆಳೆಸಿಕೊಂಡು ಅಧ್ಯಯನದಲ್ಲಿ ತೊಡಗಿದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ಶಿಕ್ಷಕರು, ಪೋಷಕರು ತಮ್ಮ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವಂತಹ ಕೆಲಸ ಮಾಡಲಿ ಎಂದು ಮಾಜಿ ಡಿಸಿಪಿ ಅಣ್ಣಾಮಲೈ ಅಭಿಪ್ರಾಯಪಟ್ಟರು.

ಶನಿವಾರ ಶಿಕ್ಷಣ ಸಂಸ್ಥೆ ವತಿಯಿಂದ ಬಾಲಭವನದಲ್ಲಿ ಆಯೋಜಿಸಿದ್ದ ಶಿಕ್ಷಣ ಹಬ್ಬ ಉದ್ಘಾಟಿಸಿ ಮಾತನಾಡಿದರು. ಹಿಂದೆ ಸರಕಾರಿ ಶಾಲೆಗಳನ್ನು ಹೊರತುಪಡಿಸಿ ಯಾವುದೇ ಅಂತರ್‌ರಾಷ್ಟ್ರೀಯ ಶಾಲೆ, ಕಾನ್ವೆಂಟ್, ಪಬ್ಲಿಕ್ ಶಾಲೆಗಳಾಗಲಿ ಇರಲಿಲ್ಲ. ನಾನು ಸೇರಿದಂತೆ ಅನೇಕ ಮಂದಿ ಸರಕಾರಿ ಶಾಲೆಗಳಲ್ಲಿಯೇ ವ್ಯಾಸಂಗ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದೇವೆ ಎಂದರು.

ಸರಕಾರಿ ಶಾಲೆಗಳಲ್ಲಿಯೇ ಅತ್ಯುತ್ತಮವಾದ ಪಾಠ, ಪ್ರವಚನಗಳು, ನಡೆಯುತ್ತಿರುವುದನ್ನು ಇಂದಿಗೂ ಕಾಣಬಹುದಾಗಿದೆ. ಆದರೆ, ಪೋಷಕರು ತಮ್ಮ ಮಕ್ಕಳು ಬೇರೆ ಭಾಷೆಯ ಅಂತರ್‌ರಾಷ್ಟ್ರೀಯ ಶಾಲೆಗಳಲ್ಲಿ ಓದಿದರೆ ಮಾತ್ರ ಒಳ್ಳೆಯ ಹುದ್ದೆ, ಸ್ಥಾನ ಮಾನ ಪಡೆಯಬಹುದು ಎಂಬ ಪರಿಕಲ್ಪನೆಯಲ್ಲಿದ್ದಾರೆ. ಇಂತಹ ಭಾವನೆಯನ್ನು ಬದಲಿಸಿಕೊಳ್ಳಬೇಕೆಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ್ ಮಾತನಾಡಿ, ಜೀವನದಲ್ಲಿ ಸಾಧನೆಗೆ ಶಿಕ್ಷಣ, ಬುದ್ಧಿ ಅತ್ಯವಶ್ಯಕ. ಇದಕ್ಕೆ ಶಾಲೆಗಳೇ ದೇವಾಲಯಗಳು. ನಮ್ಮನ್ನು ಕಷ್ಟಕಾಲದಲ್ಲಿ ಪಾರು ಮಾಡುವುದೇ ವಿದ್ಯೆ. ವೈಜ್ಞಾನಿಕ ಆಲೋಚನೆಗಳನ್ನು ಬೆಳೆಸಿಕೊಂಡು ಶ್ರದ್ಧೆ, ನಿಷ್ಠೆಯಿಂದ ತಮ್ಮ ಕಾರ್ಯದಲ್ಲಿ ತೊಡಗಿಸಿಕೊಂಡರೆ ಸಾಧನೆ, ಸಮಾಜದಲ್ಲಿ ಉತ್ತಮ ಸ್ಥಾನ ಮಾನ ತಾನಾಗಿಯೇ ಲಭ್ಯವಾಗಲಿವೆ ಎಂದು ತಿಳಿಸಿದರು.

ಶಿಕ್ಷಕರು ಹೇಳುವ ಪಾಠ ಬೋಧನೆಯನ್ನು ಸಂಯಮಶೀಲತೆಯಿಂದ ಆಲಿಸಿಕೊಂಡು ಅದನ್ನು ಅಧ್ಯಯನದಲ್ಲಿ ರೂಢಿಸಿಕೊಂಡರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ಕೇವಲ ತಂತ್ರಜ್ಞಾನದ ಆವಿಷ್ಕಾರದಿಂದ ಒಳ್ಳೆಯ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಈ ದೇಶದ ಇತಿಹಾಸ, ವಿಜ್ಞಾನ, ಸಂಸ್ಕೃತಿಯಲ್ಲಿ ಸಾಧನೆಗೈದಿರುವ ಸಾಧಕರನ್ನು ನೆನೆಪಿಸಿಕೊಂಡು ಮುನ್ನಡೆಯಬೇಕೆಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತೆ ಜಯಲಕ್ಷ್ಮೀ ಶಿಬರೂರು, ಹಿರಿಯ ವಿಜ್ಞಾನಿ ಶ್ರೀನಿವಾಸನ್, ಫುಟ್ಬಾಲ್ ಕ್ರೀಡಾಪಟು ಸಂಪತ್ ಕುಮಾರ್ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News