ಮಸೀದಿಗಳು ಸಮುದಾಯದ ಅಭಿವೃದ್ಧಿ ಕೇಂದ್ರಗಳಾಗಿ ಬಳಕೆಯಾಗಬೇಕು: ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್

Update: 2019-12-07 13:08 GMT

ಬೆಂಗಳೂರು, ಡಿ.7: ಮಸೀದಿಗಳನ್ನು ಕೇವಲ ಪ್ರಾರ್ಥನೆ ನಿರ್ವಹಣೆಗಷ್ಟೇ ಸೀಮಿತಗೊಳಿಸುವ ಬದಲಾಗಿ, ಸಮುದಾಯದ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಪೂರಕವಾಗಿ ಕೆಲಸ ನಿರ್ವಹಿಸುವ ಬಹುಪಯೋಗಿ ಕೇಂದ್ರವಾಗಿ ಬಳಕೆಯಾಗಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ಹೇಳಿದರು.

ಶನಿವಾರ ನಗರದ ವಿಶ್ವೇಶ್ವರಯ್ಯ ಗೋಪುರದಲ್ಲಿರುವ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಆಯೋಗವು ರಾಜ್ಯ ವಕ್ಫ್ ಬೋರ್ಡ್‌ನ ಸಹಯೋಗದೊಂದಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ಇತರ ಇಲಾಖೆಗಳಲ್ಲಿನ ಯೋಜನೆಗಳನ್ನು ಅನುಷ್ಠಾನಗೊಳಿಸುವ ಹಾಗೂ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೇಂದ್ರಗಳನ್ನಾಗಿ ಮಸೀದಿಯನ್ನು ಬಳಸಿಕೊಳ್ಳಲು ಯೋಜನೆ ರೂಪಿಸಿದೆ ಎಂದರು.

ಮೊಟ್ಟ ಮೊದಲು ಮಸೀದಿಯ ಕಾರ್ಯವ್ಯಾಪ್ತಿಯನ್ನು ನಿಗದಿಗೊಳಿಸಬೇಕು. ಮಸೀದಿಯ ಕಾರ್ಯವ್ಯಾಪ್ತಿಗೆ ಒಳಪಡುವಂತಹ ಬಡಾವಣೆಗಳು, ಗ್ರಾಮಗಳಲ್ಲಿರುವ ನಿವಾಸಿಗಳ ರಿಜಿಸ್ಟರ್ ನಿರ್ವಹಣೆ ಮಾಡುವುದು. ಅಲ್ಲದೇ, ಪೊಲೀಸ್ ಅಧಿಕಾರಿಗಳು, ವೈದ್ಯರು, ವಕೀಲರು, ಶಿಕ್ಷಕರು, ಸರಕಾರಿ ಅಧಿಕಾರಿಗಳು ಸೇರಿದಂತೆ ಇನ್ನಿತರ ವೃತ್ತಿಪರರ ಬಗ್ಗೆ ಪ್ರತ್ಯೇಕ ರಿಜಿಸ್ಟರ್ ನಿರ್ವಹಣೆ ಮಾಡುವುದು ಅಗತ್ಯವಾಗಿದೆ ಎಂದು ಅಬ್ದುಲ್ ಅಝೀಮ್ ಹೇಳಿದರು.

ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷ ಅಥವಾ ಕಾರ್ಯದರ್ಶಿಗಳು ನಿಗದಿತ ಅವಧಿಯಲ್ಲಿ ಮಸೀದಿಯ ಕಚೇರಿಯಲ್ಲಿದ್ದು, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕು. ಮಸೀದಿಯ ಕಚೇರಿಯಲ್ಲಿ ಕಂಪ್ಯೂಟರ್ ಸೇರಿದಂತೆ ಇನ್ನಿತರ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕಿದೆ ಎಂದು ಅವರು ತಿಳಿಸಿದರು.

ಮಸೀದಿಯಲ್ಲಿರುವ ನೋಟಿಸ್ ಬೋರ್ಡ್‌ಗಳಲ್ಲಿ ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಯಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ಸರಕಾರದ ಎಲ್ಲ ಇಲಾಖೆಗಳ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕಾಲಕಾಲಕ್ಕೆ ಒದಗಿಸಬೇಕು ಎಂದು ಅಬ್ದುಲ್ ಅಝೀಮ್ ಮನವಿ ಮಾಡಿದರು.

ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳಿಂದ ಉದ್ಯೋಗಾವಕಾಶಗಳ ಕುರಿತು ಹೊರಡಿಸಲಾಗುವ ಅಧಿಸೂಚನೆಗಳನ್ನು ನಿರ್ವಹಿಸುವ ಮೂಲಕ ಅಗತ್ಯವಿರುವವರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ವೈವಾಹಿಕ ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಎದುರಾಗುವಂತಹ ಸಮಸ್ಯೆಗಳನ್ನು ಬಗೆಹರಿಸಿ, ಮಾರ್ಗದರ್ಶನ ಮಾಡುವ ನಿಟ್ಟಿನಲ್ಲಿ ಶರೀಅತ್ ಕಾನೂನು ಬಗ್ಗೆ ಅರಿವು ಇರುವಂತಹ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಬೇಕು ಎಂದು ಅಬ್ದುಲ್ ಅಝೀಮ್ ತಿಳಿಸಿದರು.

ಮಸೀದಿಯಲ್ಲಿನ ಕೇಂದ್ರದಲ್ಲಿ ನಿವಾಸಿಗಳಿಗೆ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್‌ಪೋರ್ಟ್, ರೇಷನ್ ಕಾರ್ಡ್, ಆರೋಗ್ಯ ಕಾರ್ಡ್, ಚಾಲನ ಪರವಾನಿಗೆ ಸೇರಿದಂತೆ ಇನ್ನಿತರ ದಾಖಲೆಗಳನ್ನು ಒದಗಿಸಿಕೊಡುವ ಕೆಲಸವಾಗಬೇಕು. ಜೊತೆಗೆ ವಿದ್ಯಾರ್ಥಿವೇತನ ಸೇರಿದಂತೆ ಇನ್ನಿತರ ಯೋಜನೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಕೆಲಸ ಆಗಬೇಕು ಎಂದು ಅವರು ಹೇಳಿದರು.

ಆರ್ಥಿಕವಾಗಿ ಹಿಂದುಳಿದಿರುವವರಿಗೆ ಹಣಕಾಸಿನ ನೆರವು ಒದಗಿಸಲು ‘ಬೈತುಲ್ ಮಾಲ್’ ಆರಂಭಿಸಬೇಕು. ಇದರಿಂದ, ಬಡವರು ಫೈನಾನ್ಸ್‌ನವರು ಹಾಗೂ ಇತರರಿಂದ ಬಡ್ಡಿಗೆ ಸಾಲ ಪಡೆಯವುದನ್ನು ತಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಮಸೀದಿಗಳು ಪ್ರಾರ್ಥನೆ, ಶಾಂತಿ ಹಾಗೂ ಸಹೋದರತೆಯ ಸಂದೇಶ ಹರಡಲು ಹಾಗೂ ಸಮುದಾಯವನ್ನು ಒಟ್ಟುಗೂಡಿಸಲು ನಿರ್ಮಿಸಲ್ಪಡುತ್ತವೆಯೇ ಹೊರತು, ವಿಭಜಿಸಲು ಅಲ್ಲ ಎಂಬುದನ್ನು ನಾವು ಮರೆಯಬಾರದು ಎಂದು ಅಬ್ದುಲ್ ಅಝೀಮ್ ಹೇಳಿದರು.

ಡಿ.8ರಂದು ಮುತವಲ್ಲಿಗಳ ಸಮಾವೇಶ

ಮಸೀದಿಗಳನ್ನು ಬಹುಪಯೋಗಿ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಬೆಂಗಳೂರು ವಿಭಾಗದ ವಕ್ಫ್ ಸಂಸ್ಥೆಗಳ ಮುತವಲ್ಲಿಗಳ ಒಂದು ದಿನದ ಸಮಾವೇಶವನ್ನು ಡಿ.8ರಂದು ಬೆಳಗ್ಗೆ 10 ಗಂಟೆಯಿಂದ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಮಸೀದಿಗಳನ್ನು ಕೇಂದ್ರವನ್ನಾಗಿಟ್ಟುಕೊಂಡು ಯಾವ ರೀತಿಯ ಕೆಲಸಗಳನ್ನು ಮಾಡಬಹುದು ಎಂಬುದರ ಕುರಿತು ವಿಷಯ ಮಂಡನೆ ಮಾಡಲಾಗುವುದು.

-ಅಬ್ದುಲ್ ಅಝೀಮ್, ಅಧ್ಯಕ್ಷ, ರಾಜ್ಯ ಅಲ್ಪಸಂಖ್ಯಾತರ ಆಯೋಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News