ಮಹಾಪುರುಷರ ಜಯಂತಿಗಳ ಅರ್ಥಪೂರ್ಣ ಆಚರಣೆಗೆ ಹೊಸ ಸ್ವರೂಪ: ಸಚಿವ ಸಿ.ಟಿ.ರವಿ

Update: 2019-12-07 12:44 GMT

ಬೆಂಗಳೂರು, ಡಿ. 7: ಸಮಾಜ ಸುಧಾರಕರಾದ ಬಸವಣ್ಣ, ಕನಕದಾಸ ಸೇರಿದಂತೆ ಮಹಾಪುರುಷರ ಜಯಂತಿಗಳನ್ನು ಜಾತಿಗೆ ಕೇಂದ್ರಿತಗೊಳಿಸದೆ, ಅರ್ಥಪೂರ್ಣ ಆಚರಣೆಗೆ ಹೊಸ ಸ್ವರೂಪ ನೀಡಲಾಗುವುದು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ‘ಹೆಜ್ಜೆ ಗುರುತು ನೂರು ದಿನಗಳು-ನೂರಾರು ಹೆಜ್ಜೆಗಳು’ ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಹಾಪುರುಷರ ಜಯಂತಿ ಜಾತ್ಯತೀತವಾಗಿರಬೇಕೇ ಹೊರತು ಜಾತಿ ಆಧಾರಿತ ಆಗಬಾರದು ಎಂದು ಪ್ರತಿಪಾದಿಸಿದರು.

ಜಯಂತಿಗಳ ಬಗ್ಗೆ ಚಿಂತಕರು, ಪ್ರಗತಿಪರರು ಮತ್ತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡಲು ಎಲ್ಲ ಡಿಸಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ವಿಪಕ್ಷ ನಾಯಕರು, ಸಂಪುಟ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಜಯಂತಿಗಳ ಆಚರಣೆಗೆ ಸಹಮತದ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಯಾವುದೇ ಕಾರಣಕ್ಕೂ ಯಾವುದೇ ಮಹಾಪುರುಷರ ಜಯಂತಿಯನ್ನು ರದ್ದು ಮಾಡುವುದಿಲ್ಲ. ಅಲ್ಲದೆ, ರಾಜಕೀಯಕ್ಕೆ ಅವಕಾಶವಿಲ್ಲದಂತೆ ಮಹಾಪುರುಷರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಹೊಸ ಯೋಜನೆ: ಪಾರಂಪರಿಕ ತಾಣಗಳನ್ನು ಸಂರಕ್ಷಿಸಲು ಖಾಸಗಿ ಸಹಭಾಗಿತ್ವದಲ್ಲಿ ಮುಂದಿನ ವರ್ಷದಿಂದ ‘ಸಂರಕ್ಷಣಾ’ ಹೆಸರಿನ ಹೊಸ ಯೋಜನೆ ಜಾರಿಗೊಳಿಸಲಾಗುವುದು. ಪುರಾತತ್ವ ಇಲಾಖೆಗೆ ಒಳಪಡದ 25 ಸಾವಿರಕ್ಕೂ ಹೆಚ್ಚು ದೇವಾಲಯ, ಕಟ್ಟಡಗಳು, ಮಂಟಪಗಳು, ಮಸೀದಿ, ಚರ್ಚ್‌ಗಳಿದ್ದು, ಅವುಗಳ ಸಂರಕ್ಷಣೆಗೆ ಯೋಜನೆ ರೂಪಿಸಲಾಗುವುದು ಎಂದರು.

ಚಾರಿಯೇಟ್‌ಗೆ ಮತ್ತೆ ಚಾಲನೆ: ಪಾರಂಪರಿಕ ತಾಣಗಳನ್ನು ಪರಿಚಯಿಸುವ ಗೋಲ್ಡನ್ ಚಾರಿಯೇಟ್ ರೈಲನ್ನು ಪುನರಾರಂಭಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಕೇಂದ್ರದ ರೈಲ್ವೆ ಸಚಿವರ ಜತೆ ಚರ್ಚಿಸಿ ಐಆರ್‌ಸಿಟಿಸಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

ಪ್ರವಾಸೋದ್ಯಮ ನೀತಿ: ಪಶ್ಚಿಮಘಟ್ಟ ಮತ್ತು ಪಾರಂಪರಿಕ ಕಟ್ಟಗಳ ಸಂರಕ್ಷಣೆಗೆ 2020-2025ನೆ ಸಾಲಿಗೆ ಹೊಸ ಪ್ರವಾಸೋದ್ಯಮ ನೀತಿ ಜಾರಿಗೆ ತರಲಾಗುವುದು ಎಂದ ಅವರು, ರಾಜ್ಯದ ಜಿಎಸ್‌ಡಿಪಿಗೆ ಪ್ರವಾಸೋದ್ಯಮದ ಕೊಡುಗೆ ಶೇ.14.8 ರಷ್ಟಿದ್ದು, ಇದನ್ನು ಶೇ.20ಕ್ಕೆ ಏರಿಸಲು ಉದ್ದೇಶಿಸಲಾಗಿದೆ ಎಂದರು.

ಬಾದಾಮಿ, ಬೇಲೂರು, ಹಂಪಿ, ವಿಜಯಪುರದಲ್ಲಿ 4 ಸ್ಟಾರ್ ಹೊಟೇಲ್‌ಗಳನ್ನು ನಿರ್ಮಿಸಲಾಗುವುದು ಎಂದ ಅವರು, ಇಲಾಖೆ ಜಾಗದಲ್ಲಿ ಸ್ಟಾರ್ ಹೊಟೇಲ್ ನಿರ್ಮಿಸಲಾಗುವುದು. ಸಿದ್ದರಾಮಯ್ಯ ಅವಧಿಯಲ್ಲಿ ರೂಪಿಸಿದ್ದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

20 ನಿಮಿಷ ತಗೋತಾರೆ: ಸಾಹಿತಿಗಳು ಐದು ನಿಮಿಷದಲ್ಲಿ ಹೇಳುವ ವಿಷಯಕ್ಕೆ 20 ನಿಮಿಷ ತೆಗೆದುಕೊಳ್ಳುತ್ತಾರೆ. ಹೀಗಾಗಿ ನಾನೂ ಸಂಸ್ಕೃತಿ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಬಳಿಕ ತಾಳ್ಮೆ, ಸಮಾಧಾನ ಬೆಳೆಸಿಕೊಂಡಿದ್ದೇನೆ ಎಂದು ಪರೋಕ್ಷವಾಗಿ ಸಾಹಿತಿಗಳನ್ನು ಲೇವಡಿ ಮಾಡಿದರು.

ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರವನ್ನು ಮೈಸೂರಿನಲ್ಲೆ ಸ್ಥಾಪಿಸಲು ತೀರ್ಮಾನಿಸಿದ್ದು, ಮೈಸೂರು ವಿವಿ ಆವರಣದಲ್ಲಿ ಮೂರು ಎಕರೆ ಜಾಗ ನೀಡಲು ವಿವಿ ಸಮ್ಮತಿಸಿದ್ದು, ಶೀಘ್ರದಲ್ಲೆ ಈ ಸಂಬಂಧದ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.

ಬಾಕಿ ಪಾವತಿ: ಕಬ್ಬು ಬೆಳೆಗಾರರಿಗೆ ಬಾಕಿಯಿದ್ದ ಹಣದಲ್ಲಿ ಶೇ.99.9ರಷ್ಟು ಬಾಕಿ ಹಣವನ್ನು ಪಾವತಿಸಲಾಗಿದೆ. ಉಳಿದ 37ಕೋಟಿ ರೂ.ಗಳನ್ನು ತಿಂಗಳ ಅಂತ್ಯದೊಳಗೆ ಪಾವತಿಸಲಾಗುವುದು ಎಂದ ಅವರು, ಕಬ್ಬಿನ ಇಳುವರಿ ನಿಖರತೆ ಪತ್ತೆಗೆ ಆಧುನಿಕ ಯಂತ್ರವನ್ನು ಅಳವಡಿಸಲು ಉದ್ದೇಶಿಸಲಾಗಿದೆ ಎಂದರು.

ತಾರತಮ್ಯ ಸಲ್ಲ

‘ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್ಸಿ-ಎಸ್ಟಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಿಮೀತವಾಗಿದ್ದ ‘ಕರ್ನಾಟಕ ದರ್ಶನ ಪ್ರವಾಸ’ ಯೋಜನೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಆಯೋಜಿಸಲಾಗುವುದು’

-ಸಿ.ಟಿ.ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News