ಜಿಎಸ್‌ಟಿ ಪಾಲು 5600 ಕೋಟಿ ರೂ. ರಾಜ್ಯಕ್ಕೆ ಇನ್ನೂ ಬಂದಿಲ್ಲ: ದಿನೇಶ್ ಗುಂಡೂರಾವ್

Update: 2019-12-07 15:03 GMT

ಬೆಂಗಳೂರು, ಡಿ.7: ಕೇಂದ್ರದಿಂದ ರಾಜ್ಯಕ್ಕೆ ಜಿಎಸ್‌ಟಿ ಪಾಲಿನಲ್ಲಿ ಅನ್ಯಾಯವಾಗುತ್ತಿದೆ. ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಬರಬೇಕಿದ್ದ ಜಿಎಸ್‌ಟಿ ವರಮಾನವನ್ನು ತಡೆಯಲಾಗಿದೆ. ಅಕ್ಟೋಬರ್, ನವೆಂಬರ್ ಹಣವೂ ವಿಳಂಬವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.

ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾಲ್ಕು ತಿಂಗಳಿಂದ ಒಟ್ಟು 5,600 ಕೋಟಿ ರೂ.ರಾಜ್ಯಕ್ಕೆ ಇನ್ನೂ ಬಂದಿಲ್ಲ. ತೆರಿಗೆ ಪಾಲು ಕೊಡದಿದ್ದರೆ ಅಭಿವೃದ್ಧಿ ಕೆಲಸ ನಡೆಯುವುದು ಹೇಗೆ? ಎಂದು ಪ್ರಶ್ನಿಸಿದರು.

ಈಗಾಗಲೇ ಪ್ರವಾಹ ಪರಿಸ್ಥಿತಿ, ಬರ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಕೇಂದ್ರ ಸರಕಾರ ತನ್ನ ಘೋಷಿತ ಮೊತ್ತವನ್ನು ಸಂದಾಯ ಮಾಡದಿದ್ದಲ್ಲಿ ರಾಜ್ಯ ಸರಕಾರ ಏನು ಮಾಡಬೇಕು? ನಮ್ಮ ರಾಜ್ಯದಿಂದಲೇ ಸಂಗ್ರಹಿಸಿದ ತೆರಿಗೆ ಮೊತ್ತವದು. ನಮಗೆ ಕೊಡಲೆಬೇಕಾದ ಹಣ. ಅದನ್ನು ಕೇಂದ್ರ ತಡೆ ಹಿಡಿದಿದ್ದು ಏಕೆ? ಎಂದು ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

‘ಹಣದ ಕೊರತೆ ಆಗುತ್ತಿದೆ, ನಿಮಗೆ ಹಣ ಕೊಡಲು ಆಗುತ್ತಿಲ್ಲ’ ಎಂದು ಕೇಂದ್ರ ಸರಕಾರ ಎಲ್ಲ ರಾಜ್ಯ ಸರಕಾರಗಳಿಗೆ ಪತ್ರ ಬರೆದಿದೆ. ಪಂಜಾಬ್ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಈ ಸಂಬಂಧ ಕಾನೂನು ಹೋರಾಟ ಮಾಡಲು ನಿರ್ಧರಿಸಿದೆ. ರಾಜ್ಯ ಸರಕಾರವು ದೃಢ ನಿರ್ಧಾರ ಕೈಗೊಳ್ಳಬೇಕು. ಕೇಂದ್ರದ ಮೇಲಿನ ಭಯದಲ್ಲಿ ಸುಮ್ಮನೆ ಕೂರಬಾರದು ಎಂದು ಅವರು ಒತ್ತಾಯಿಸಿದರು.

ರಾಜ್ಯದಿಂದ ಸಂಗ್ರಹವಾಗಿರುವ ಜಿಎಸ್‌ಟಿ ಪಾಲನ್ನು ಪಡೆಯಲು ಹಿಂಜರಿಕೆ ಏಕೆ? ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಜಿಎಸ್‌ಟಿಯನ್ನು ಜಾರಿಗೆ ತರಲು ನಾವು ಮುಂದಾಗಿದ್ದೆವು. ಆದರೆ, ಬಿಜೆಪಿ ನಾಯಕರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಅವರು ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಕೇಂದ್ರ ಸರಕಾರದಿಂದ ಜಿಎಸ್‌ಟಿ ಪಾಲಿನ ಹಣ ಬರದೇ ಇದ್ದಲ್ಲಿ, ನಮ್ಮ ರಾಜ್ಯದ ಅಭಿವೃದ್ಧಿ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದರ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯದ ಜನತೆಯ ಮುಂದೆ ಮಾಹಿತಿ ಮುಂದಿಡಬೇಕು ಎಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News