ಅಪಾಯಕಾರಿ ಶೈಕ್ಷಣಿಕ ಸಾಲಗಳು

Update: 2019-12-07 18:35 GMT

ಇತ್ತೀಚೆಗೆ ದಿಲ್ಲಿಯ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ನಡೆದ ಪ್ರತಿಭಟನೆಗಳು ಅಂತಿಮವಾಗಿ ಭಾರತವು ಏರುತ್ತಿರುವ ಪದವಿ ವೆಚ್ಚ ಹಾಗೂ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕೈಗೆ ಎಟಕದಿರುವುದರ ಬಗ್ಗೆ ನಡೆಯುತ್ತಿರುವ ಜಾಗತಿಕ ಚರ್ಚೆಯನ್ನು ಕೈಗೆತ್ತಿಕೊಂಡಿರುವುದನ್ನು ಸೂಚಿಸುತ್ತದೆ. ವಿದ್ಯಾರ್ಥಿಗಳು ಶಿಕ್ಷಣ ಶುಲ್ಕ ಪಾವತಿಸಲು ಅಸಮರ್ಥರಾಗಿರುವಾಗ, ಸರಕಾರ ಕೂಡ ಅವರ ನೆರವಿಗೆ ಬರದಂತಹ ಆರ್ಥಿಕ ಪರಿಸ್ಥಿತಿಯಲ್ಲಿರುವಾಗ ಕೇಳಿಬರುವ ಪ್ರಶ್ನೆ: ವಿದ್ಯಾರ್ಥಿಗಳು ಯಾಕೆ ಒಂದು ಶೈಕ್ಷಣಿಕ ಸಾಲ ಪಡೆಯಬಾರದು?

ನಿಜ, ಶಿಕ್ಷಣರಂಗದ ಹಣಕಾಸು ಬಿಕ್ಕಟ್ಟಿಗೆ ಶಿಕ್ಷಣ ಸಾಲಗಳು ಒಂದು ಮಾಂತ್ರಿಕ ಪರಿಹಾರದಂತೆ ಕಾಣಿಸುತ್ತವೆ. ಆದರೆ ಈ ಸಾಲಗಳು ಗಾಯಕ್ಕೆ ಹಾಕಿದ ಒಂದು ಬ್ಯಾಂಡೇಜ್‌ನಂತೆ. ಸಾಲ ಆಧಾರಿತ ಶಿಕ್ಷಣ ವ್ಯವಸ್ಥೆ ಸರಿಯಾದ ಒಂದು ವ್ಯವಸ್ಥೆ ಅಲ್ಲ ಎಂದು ಹೇಳಲು ಜಾಗತಿಕ ಪುರಾವೆಗಳಿವೆ.

ಜಾಗತಿಕವಾಗಿ ಶಿಕ್ಷಣ ಸಾಲಗಳು ಒಂದಲ್ಲ ಒಂದು ರೂಪದಲ್ಲಿ ಬಹಳ ಸಮಯದಿಂದ ಚಾಲ್ತಿಯಲ್ಲಿವೆ. ಅಮೆರಿಕದಲ್ಲಿ 1972ರಲ್ಲೇ ಸ್ಟೂಡೆಂಟ್ ಲೋನ್ ಮಾರ್ಕೆಟಿಂಗ್ ಅಸೋಸಿಯೇಷನ್ ಮೂಲಕ ಈ ಸಾಲಗಳ ವ್ಯವಸ್ಥೆ ಅಸ್ತಿತ್ವದಲ್ಲಿತ್ತು. ಭಾರತದಲ್ಲಿ 1962ರಲ್ಲಿ ರಾಷ್ಟ್ರೀಯ ಸಾಲಗಳ ಶಿಷ್ಯವೇತನ ಯೋಜನೆ ಆರಂಭಗೊಂಡಿತ್ತು.

ಶಿಕ್ಷಣ ಸಾಲಗಳಲ್ಲಿ ಎರಡು ವಿಧಗಳಿವೆ. ಸಾಂಪ್ರದಾಯಿಕವಾದ, ಅಡಮಾನ ಶೈಲಿಯ ಸಾಲಗಳು ಮತ್ತು ಆದಾಯ ಆಧಾರಿತ ಸಾಲಗಳು. ಮೊದಲನೆಯದರಲ್ಲಿ ನಿಗದಿತ ಸಾಲದ ಅವಧಿ ಮತ್ತು ಬಡ್ಡಿ ದರವಿದ್ದು ಸಾಲ ಪಡೆದ ವಿದ್ಯಾರ್ಥಿಯ ನೌಕರಿಗೂ ಸಾಲ ಪಾವತಿಗೂ ಯಾವುದೇ ಸಂಬಂಧವಿರುವುದಿಲ್ಲ. ಎರಡನೇ ರೀತಿಯ ಸಾಲದಲ್ಲಿ ವಿದ್ಯಾರ್ಥಿ ಶಿಕ್ಷಣ ಮುಗಿಸಿ ನೌಕರಿಗೆ ಸೇರಿದ ಬಳಿಕ ಸಾಲ ಮರುಪಾವತಿ ಆರಂಭಿಸಬೇಕಾಗುತ್ತದೆ. ಇಲ್ಲಿ ಸಾಲ ತೀರಿಸುವ ಹೊರೆ ವಿದ್ಯಾರ್ಥಿಯ ಪೋಷಕರ ಮೇಲೆ ಬೀಳುವುದಿಲ್ಲ. ಇದೆಲ್ಲ ಕೇಳಲು ಚೆನ್ನಾಗಿರುತ್ತದೆ. ಆದರೆ ಸಾಲಗಳ ಉನ್ನತ ಶಿಕ್ಷಣದ ಹಣಕಾಸಿನ ಮೂಲವಾದಾಗ ಪರಿಸ್ಥಿತಿ ಬೇರೆಯೇ ಆಗಿಬಿಡುತ್ತದೆ.ಮೊದಲನೆಯದಾಗಿ, ವಿದ್ಯಾರ್ಥಿ ಸಾಲಗಳ ಅತ್ಯಂತ ಅವಶ್ಯಕತೆ ಇರುವ ಬಡ ಹಾಗೂ ಸಮಾಜದ ಅಂಚಿನಲ್ಲಿರುವ ವಿದ್ಯಾರ್ಥಿಗಳ ಮೇಲೆ ಈ ಸಾಲಗಳು ಬೀರುವ ಪರಿಣಾಮದ ಸಮಸ್ಯೆ ಇದೆ. ಸಾಲ ಪಡೆಯುವ ಪರದಾಟ ಒಂದೆಡೆಯಾದರೆ, ಸಾಲ ವ್ಯವಸ್ಥೆಗೆ ವಿದ್ಯಾರ್ಥಿಗಳು ಬಲಿಪಶುವಾಗುವುದು ಸಮಸ್ಯೆಯ ಇನ್ನೊಂದು ಮುಖ. ಕಡಿಮೆ ಆದಾಯ ವರ್ಗದ ವಿದ್ಯಾರ್ಥಿಗಳು ಸಹಜವಾಗಿಯೇ ಸಣ್ಣ ಮೊತ್ತದ ಸಾಲಗಳಿಗೆ ಶರಣಾಗಿ ಮುಂದೆ ಕಡಿಮೆ ಆದಾಯ ತರುವಂತಹ ಕೋರ್ಸ್‌ಗಳಿಗೆ ಸೇರಿಕೊಳ್ಳಬೇಕಾಗುತ್ತದೆ.

ಇನ್ನು ಸಾಲ ಪಡೆದವರಿಗೆ ಭವಿಷ್ಯದಲ್ಲಿ ಉತ್ತಮ ಆದಾಯ ತರುವ, ಭದ್ರತೆ ತರುವ ನೌಕರಿಗಳು ಸಿಗುತ್ತವೆಂಬ ಎಣಿಕೆಯನ್ನಾಧರಿಸಿ ಸಾಲದ ವ್ಯವಸ್ಥೆ ನಡೆಯುತ್ತದೆ. ಆದರೆ ನೌಕರಿಯಿಂದ ನಿರೀಕ್ಷಿತ ಆದಾಯ ಸಿಗದಾಗ ಸಾಲದ ಮರುಪಾವತಿ ಅಸಾಧ್ಯವಾಗುತ್ತದೆ. ಉತ್ತಮ ವೇತನ ನೀಡುವ ನೌಕರಿಗಳ ಕೊರತೆ ವ್ಯಾಪಕವಾದಾಗ, ಸಾಲ ಪಾವತಿಸದವರ ಸಂಖ್ಯೆ ವಿಪರೀತ ಏರಿ ದೇಶದ ಅರ್ಥವ್ಯವಸ್ಥೆ ಕುಸಿಯಬಹುದು.
2011ರಲ್ಲಿ ಇದೇ ಆರ್ಥಿಕ ಬಿಕ್ಕಟ್ಟು ಚೆಲಿ ದೇಶದ ಸರಕಾರವನ್ನು ಉರುಳಿಸುವ ಬೆದರಿಕೆಯೊಡ್ಡಿತ್ತು. ಈಗ ಪುನಃ ಅದೇ ಬೆದರಿಕೆ ಅಲ್ಲಿ ಎದುರಾಗಿದೆ.

ಕೊನೆಯದಾಗಿ ಪ್ರಾಥಮಿಕ ಹಾಗೂ ಪೌಢ ಪ್ರಾಥಮಿಕ ಶಿಕ್ಷಣಕ್ಕೆ ಸಂಪನ್ಮೂಲ ಒದಗಿಸುವುದಕ್ಕೆ ಸರಕಾರದ ಜವಾಬ್ದಾರಿ: ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ತಮ್ಮದೇ ಆದ ದಾರಿಯನ್ನು ಕಂಡುಕೊಳ್ಳಬೇಕೆಂದು ಹೇಳಲಾಗುತ್ತಿದೆ. ಆದರೆ ಈಗ ಕೌಶಲ್ಯಗಳೇ ಮುಖ್ಯವಾಗಿರುವ ಉನ್ನತ ಶಿಕ್ಷಣ ಪಡೆದವರನ್ನು ‘ಆಟೋಮೇಶನ್’ ಹಾಗೂ ತಾಂತ್ರಿಕ ಸುಧಾರಣೆಗಳು ನಿರುದ್ಯೋಗಿಗಳನ್ನಾಗಿಸುತ್ತಿವೆ. ಭಾರೀ ಪ್ರಮಾಣದ ಉದ್ಯೋಗ ನಷ್ಟ ಸಂಭವಿಸುತ್ತಿರುವಾಗ ಶಿಕ್ಷಣ ವೆಚ್ಚದ ಖಾಸಗೀಕರಣವೇ ಆಗಿರುವ ಸಾಲ ಆಧಾರಿತ ವ್ಯವಸ್ಥೆಯಿಂದ ಯಾರಿಗೆ ಉಪಯೋಗವಾದೀತು?

ಈ ಎಲ್ಲ ಸಮಸ್ಯೆಗಳು ಈಗ ಭಾರತವನ್ನು ಕಾಡುತ್ತಿವೆ. ತಜ್ಞರ ವರದಿಗಳ ಪ್ರಕಾರ ಒಟ್ಟು ವಿದ್ಯಾರ್ಥಿ ಸಾಲಗಳ ಸಂಖ್ಯೆಯೇ ಕಡಿಮೆಯಾಗುತ್ತಿದೆ. ಅದೇ ವೇಳೆ ಹಣದುಬ್ಬರದಿಂದಾಗಿ ಶಿಕ್ಷಣದ ವೆಚ್ಚಗಳು ಏರುತ್ತಿರುವುದರಿಂದ ಹೆಚ್ಚು ದುಬಾರಿಯಾದ ಕೋರ್ಸ್‌ಗಳು ಬಡ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿಲ್ಲ. ಐಟಿ ರಂಗದಲ್ಲಿ ಈಗಾಗಲೇ ನೌಕರಿಯಲ್ಲಿರುವವರನ್ನು ಕಂಪೆನಿಗಳು ಮನೆಗೆ ಕಳುಹಿಸುತ್ತಿರುವಾಗ ಶಿಕ್ಷಣ ಸಾಲವನ್ನು ಯಶಸ್ಸಿಗೆ ಒಂದು ಟಿಕೆಟ್ ಎಂದು ಹೇಳಿ ಮಾರುವುದು ಹೇಗೆ ಸಾಧ್ಯ?.

ಕೃಪೆ: thewire.in

Writer - ಕಾರ್ತಿಕ್ ಮಾಣಿಕಂ

contributor

Editor - ಕಾರ್ತಿಕ್ ಮಾಣಿಕಂ

contributor

Similar News