ನನ್ನ ಹೋರಾಟ ಹೇಗಿರುತ್ತೆ ಎಂದು ಹೇಳುವುದಿಲ್ಲ, ನೀವೇ ನೋಡಿ: ಡಿ.ಕೆ.ಶಿವಕುಮಾರ್

Update: 2019-12-08 14:27 GMT

ಬೆಂಗಳೂರು, ಡಿ.8: ಕನಕಪುರ ಮೆಡಿಕಲ್ ಕಾಲೇಜು ಯೋಜನೆಗೆ ಸರಕಾರ ಮರು ಆದೇಶ ನೀಡುವ ವಿಶ್ವಾಸವಿದೆ. ಒಂದು ವೇಳೆ ಆದೇಶ ನೀಡದಿದ್ದರೆ ನಾನು ನನ್ನ ಹೋರಾಟ ಮಾಡುತ್ತೇನೆ. ಹೋರಾಟ ಹೇಗಿರುತ್ತದೆ ಎಂದು ಹೇಳುವುದಿಲ್ಲ, ನೀವೇ ನೋಡುತ್ತೀರಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನಕಪುರಕ್ಕೆ ನೀಡಲಾಗಿದ್ದ ಮೆಡಿಕಲ್ ಕಾಲೇಜನ್ನು ಅವರು ಹಿಂಪಡೆದದ್ದು ಸರಿಯಲ್ಲ. ಅವರಿಗೆ ತಾವು ಮಾಡಿದ್ದು ತಪ್ಪು ಅಂತಾ ಜ್ಞಾನೋದಯವಾಗಿ ಮತ್ತೇ ಕನಕಪುರ ಮೆಡಿಕಲ್ ಕಾಲೇಜು ಯೋಜನೆಗೆ ಮರು ಆದೇಶ ಮಾಡುವ ವಿಶ್ವಾಸವಿದೆ. ಇಲ್ಲದಿದ್ದರೆ ಬೇರೆ ವಿಧಿ ಇಲ್ಲದೆ ನಮ್ಮ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ನಮ್ಮ ಹೋರಾಟ ಯಾವ ರೀತಿ ಇರುತ್ತೆ ಅಂತಾ ಹೇಳುವುದಿಲ್ಲ. ಯಡಿಯೂರಪ್ಪ ಹೋರಾಟ ಮಾಡಿಕೊಂಡೆ ರಾಜಕೀಯದಲ್ಲಿ ಬೆಳೆದವರು. ನಾವು ಅದನ್ನೇ ಮಾಡುತ್ತೇವೆ. ನಮಗೆ ಹೋರಾಟ ಮಾಡಲು ಸಾವಿರಾರು ಜನರನ್ನು ಕರೆದುಕೊಂಡು ಬರಬೇಕಿಲ್ಲ. ನಮ್ಮ ಭಾಗದ ಶಾಸಕರು, ಪರಿಷತ್ ಸದಸ್ಯರು ಸೇರಿ ಹೇಗೆ ಹೋರಾಟ ಮಾಡಬೇಕು ಅಂತಾ ಗೊತ್ತಿದೆ. ಅದು ಹೇಗಿರಲಿದೆ ಎಂದು ನೀವೇ ನೋಡಿ ಎಂದು ತಿಳಿಸಿದರು.

ಆಲ್ ದಿ ಬೆಸ್ಟ್: ಉಪಚುನಾವಣೆ ಫಲಿತಾಂಶ ಬಂದ ನಂತರ ರಾಮನಗರದ ಕ್ಲೀನಿಂಗ್ ಕೆಲಸ ಶುರು ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹೇಳಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದರು.

ರಾಮನಗರದಿಂದ ದೇವೇಗೌಡರು ಮುಖ್ಯಮಂತ್ರಿ ಹಾಗೂ ಪ್ರಧಾನಿ ಆಗಿದ್ದಾರೆ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ನಾನು ಮಂತ್ರಿ ಆಗಿದ್ದವನು. ನಮ್ಮಿಂದ ಮಾಡಲು ಸಾಧ್ಯವಾಗದನ್ನು ಅವರು ಮಾಡುತ್ತೇನೆ ಅಂತಿದ್ದಾರೆ. ಖಂಡಿತಾ ಮಾಡಲಿ. ಅದನ್ನು ನಾವು ಸ್ವಾಗತಿಸಬೇಕು ಹಾಗೂ ಪ್ರೋತ್ಸಾಹ ನೀಡಬೇಕು. ಒಳ್ಳೆ ಕೆಲಸಕ್ಕೆ ನಾವು ವಿರೋಧ ಮಾಡುವುದಿಲ್ಲ. ಅವರಿಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ ಎಂದರು.

ಚಿದಂಬರಂ ಭೇಟಿ: ದೆಹಲಿಯಲ್ಲಿ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ನಾವಿಬ್ಬರು ಏನೇನು ಅನುಭವಿಸಿದ್ದೇವೆ ಅಂತಾ ನಮ್ಮಿಬ್ಬರಿಗೆ ಮಾತ್ರ ಗೊತ್ತು. ಮುಂದೆ ಸಮಯ ಬಂದಾಗ ಅವುಗಳ ಬಗ್ಗೆ ದಾಖಲೆಯೊಂದಿಗೆ ಮಾತಾಡುತ್ತೇನೆ. ನಮ್ಮ ಮುಂದಿನ ಹೋರಾಟ, ನಡೆಗಳ ಬಗ್ಗೆ ಚರ್ಚಿಸಿದೆವು. ಈ ವಿಚಾರದಲ್ಲಿ ನಾನು ಅಷ್ಟು ಪಂಡಿತನಲ್ಲ ಹೀಗಾಗಿ ಅವರಿಂದ ಕೆಲವು ಸಲಹೆ ಪಡೆದೆ ಎಂದು ಹೇಳಿದರು.

ಮಹಿಳೆ ಸುರಕ್ಷತೆಗೆ ಆಂದೋಲನ ಅಗತ್ಯ: ಉನ್ನಾವೋ ಅತ್ಯಾಚಾರ ವಿಚಾರದಲ್ಲಿ ಉತ್ತರ ಪ್ರದೇಶದ ಸರಕಾರ ಎಡವಿರುವ ಬಗ್ಗೆ ಪ್ರಿಯಾಂಕ ಗಾಂಧಿ ಪ್ರಸ್ತಾಪಿಸಿದ್ದಾರೆ. ಅತ್ಯಾಚಾರಗಳನ್ನು ನಿಯಂತ್ರಿಸುವಲ್ಲಿ ಬಿಜೆಪಿ ಸರಕಾರ ವಿಫಲವಾಗಿದೆ. ನಾವು ಈ ವಿಚಾರವಾಗಿ ದೊಡ್ಡ ಆಂದೋಲನ ಮಾಡಬೇಕು. ಇದು ಕೇವಲ ಪಕ್ಷಕ್ಕೆ ಅಥವಾ ಸರಕಾರಕ್ಕೆ ಸಂಬಂಧಿಸಿದ್ದಲ್ಲ. ಇಂತಹ ಪ್ರಕರಣಗಳನ್ನು ಖಂಡಿಸುತ್ತೇನೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News