ಸಾಮಾಜಿಕ-ಶೈಕ್ಷಣಿಕ ಬೆಳವಣಿಗೆಯಲ್ಲಿ ಮಠಗಳ ಕೊಡುಗೆ ಅಪಾರ: ದಿನೇಶ್ ಗುಂಡೂರಾವ್

Update: 2019-12-08 14:30 GMT

ಬೆಂಗಳೂರು, ಡಿ.8: ಕರ್ನಾಟಕದಲ್ಲಿರುವ ಮಠಗಳು ಕೇವಲ ಧರ್ಮ ಚಿಂತನೆಗಷ್ಟೇ ಸೀಮಿತವಾಗದೆ, ಸಾಮಾಜಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿವೆಯೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯಿಸಿದ್ದಾರೆ.

ರವಿವಾರ ಗುರುವಣ್ಣದೇವರ ಮಠದಲ್ಲಿ ಏರ್ಪಡಿಸಿದ್ದ ಮಲ್ಲಿಕಾರ್ಜುನಸ್ವಾಮಿಗಳ ಸಂಸ್ಮರಣೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶೈಕ್ಷಣಿಕ, ಆರೋಗ್ಯ, ಸಮಾಜ ಸೇವೆ ಮೊದಲಾದವುಗಳಲ್ಲಿ ಪ್ರತಿಫಲಾಕ್ಷೆಯಿಲ್ಲದೆ ಶ್ರಮಿಸುತ್ತಿವೆ. ಹೀಗೆ ರಾಜಕೀಯ ಶುದ್ಧೀಕರಣಕ್ಕೆ ರಚನಾತ್ಮಕವಾದ ಸಲಹೆಯನ್ನು ಕೊಡಬೇಕೆಂದು ಕೋರಿದರು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಕರ್ನಾಟಕದಲ್ಲಿ ಸಾಮರಸ್ಯ, ಭಾವೈಕ್ಯ, ಶಾಂತಿ ನೆಲಸಲು ಮಠಗಳ ಕೊಡುಗೆ ಅನನ್ಯವಾದುದು. ಇಲ್ಲಿಯ ಮಠಗಳು ಜಾತಿ ಭೇದಲ್ಲದೆ ಅನಾಥರು, ಬಡವರಿಗೆ ಆಶ್ರಯವನ್ನು ನೀಡಿದ್ದಲ್ಲದೆ ಶಿಕ್ಷಣವನ್ನು ನೀಡಿವೆ. ಬೆಂಗಳೂರಿನ ಗುರುವಣ್ಣದೇವರ ಮಠದ ಮಲ್ಲಿಕಾರ್ಜುನ ಸ್ವಾಮಿಗಳು ಮಾತೃ ಹೃದಯವುಳ್ಳವರಾಗಿದ್ದು, ಭಕ್ತರ ಶ್ರೇಯೋಭಿಲಾಷೆಯುಳ್ಳವರಾಗಿದ್ದರು ಎಂದರು.

ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಭಾರತವು ಸಂತರ ನೆಲೆ ಬೀಡಾಗಿದೆ. ಜೈನ, ಬೌದ್ಧ, ವೈದಿಕ ಮೊದಲಾದ ಧರ್ಮಗಳು ಉದಯವಾಗಿರುವುದು ಭಾರತದಲ್ಲಿ. ಈ ದೇಶವು ತನ್ನ ಆರ್ಥಿಕ ಶ್ರೀಮಂತಿಕೆಗಿಂತಲೂ ಅಧ್ಯಾತ್ಮಿಕವಾಗಿ ಉತ್ತುಂಗವಾಗಿದ್ದು, ನಾವು ಇತರರಿಗೆ ಆದರ್ಶ ಮತ್ತು ಅನುಕರಣೀಯರಾಗಿದ್ದೇವೆ ಎಂದರು. ಜನರು ಧರ್ಮವನ್ನು ಬಿಡದೆ ಜನೋಪಯೋಗಿಯಾದ ಕಾರ್ಯವನ್ನು ಮಾಡಬೇಕೆಂಬುದನ್ನು ಮಲ್ಲಿಕಾರ್ಜುನ ಸ್ವಾಮಿಗಳ ಬದುಕು ಹಾಗೂ ಸಾಧನೆಯಿಂದ ತಿಳಿಯಬಹುದಾಗಿದೆ ಎಂದರು.

ಗುರುವಣ್ಣದೇವರ ಮಠದ ನಂಜುಂಡಸ್ವಾಮಿ ಪ್ರಾಸ್ತಾಕವಾಗಿ ಮಾತನಾಡಿದರು. ಬೇಲಿಮಠದ ಶಿವರುದ್ರ ಸ್ವಾಮಿ, ಕನಕಪುರ ದೇಗುಲಮಠದ ಮುಮ್ಮಡಿ ನಿರ್ವಾಣ ಸ್ವಾಮಿ, ಕಂಚುಗಲ್ ಬಂಡೇಮಠದ ಚರಮೂರ್ತಿ ಬಸವಲಿಂಗ ಸ್ವಾಮಿ ಕುಂದೂರು ಮಠದ ಡಾ. ಶರತ್‌ಚಂದ್ರ ಸ್ವಾಮಿ, ಬಿ.ಎಸ್.ಪರಮಶಿವಯ್ಯ, ನಿವೃತ್ತ ಅಧಿಕಾರಿ ಡಾ.ಸಿ.ಸೋಮಶೇಖರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News