ಮಕ್ಕಳಿಗೆ ಪೋಷಕರು ಪರಿಸರವನ್ನು ಪರಿಚಯಿಸಬೇಕು: ಪರಿಸರ ತಜ್ಞ ಡಾ.ಯಲ್ಲಪ್ಪರೆಡ್ಡಿ

Update: 2019-12-08 15:07 GMT

ಬೆಂಗಳೂರು, ಡಿ.8: ಪೋಷಕರು ಮಕ್ಕಳಿಗೆ ಪರಿಸರವನ್ನು ಪರಿಚಯಿಸುವ ಕೆಲಸ ಮಾಡಬೇಕು ಎಂದು ಪರಿಸರ ತಜ್ಞ ಡಾ.ಎ.ಎನ್.ಯಲ್ಲಪ್ಪರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಅಂಕಿತ ಪುಸ್ತಕ ಪ್ರಕಾಶನದಿಂದ ಆಯೋಜಿಸಿದ್ದ ಲೇಖಕ ಡಾ. ಕೆ.ಎನ್.ಗಣೇಶಯ್ಯ ಅವರ ‘ಸಸ್ಯಸಗ್ಗ’ ಮತ್ತು ‘ಹೊರನೋಟ’ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ವಿಜ್ಞಾನಿಗಳು ನೋಡಲಾಗದ ಎಷ್ಟೋ ಪರಿಸರ ವೈಶಿಷ್ಟಗಳನ್ನು ಐದು ವರ್ಷ ಮಗು ನೋಡುತ್ತದೆ. ಆದರೆ, ಪೋಷಕರು ತಮ್ಮ ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆಗೆ ಸೀಮಿತಗೊಳಿಸುತ್ತಿರುವುದರಿಂದ ಆ ಮಕ್ಕಳಿಗೆ ಪರಿಸರದ ಪರಿಚಯವೇ ಸಿಗುತ್ತಿಲ್ಲ. ಆದುದರಿಂದಾಗಿ, ಮಕ್ಕಳಿಗೆ ಪರಿಸರ ಅರಿವು ಮೂಡಿಸಬೇಕಿದೆ ಎಂದರು.

ಮಕ್ಕಳಲ್ಲಿ ಪರಿಸರದ ಕುರಿತು ತಿಳಿಯುವ ಕುತೂಹಲ ಸಾಕಷ್ಟಿರುತ್ತದೆ. ಆದರೆ, ಅವರಲ್ಲಿ ಮೂಡುವ ಪ್ರಶ್ನೆಗಳಿಗೆ ವಿಜ್ಞಾನಿಗಳ ಬಳಿಯೂ ಉತ್ತರವಿರಲ್ಲ. ಈ ಕುತೂಹಲ ಪೋಷಿಸಿ ಬೆಳೆಸಿದರೆ ಮಕ್ಕಳು ಭವಿಷ್ಯದಲ್ಲಿ ಪರಿಸರ ವಿಜ್ಞಾನಿಗಳಾಗುತ್ತಾರೆ. ಲೇಖಕ ಗಣೇಶಯ್ಯ ತಮ್ಮ ಸಾಹಿತ್ಯದ ಮೂಲಕ ನಿಸರ್ಗದ ಮೂಲದ ಬಗ್ಗೆ ಬರೆದಿದ್ದಾರೆ ಎಂದರು.

ಇಂದಿನ ಮನುಷ್ಯನ ಸಂಶೋಧನೆಗಳು ಬಾಂಬ್, ಕ್ಷಿಪಣಿಗಳವರೆಗೆ ಸಾಗಿದೆ. ಅದಕ್ಕೆ ಕೋಟ್ಯಾಂತರ ರೂ.ಗಳು ಖರ್ಚು ಮಾಡುತ್ತಾರೆ, ವಿಜ್ಞಾನಿಗಳು ದಿನದ 24 ಗಂಟೆ ಕೆಲಸ ಮಾಡುತ್ತಾರೆ. ಆದರೆ, ಅವುಗಳನ್ನು ಯಾರ ಮೇಲೆ ಪ್ರಯೋಗ ಮಾಡುತ್ತಿದ್ದಾರ ಎಂದ ಅವರು, ಭೂಮಿ, ಪರಿಸರದ ನಾಶಕ್ಕಾಗಿ ಇವುಗಳನ್ನು ಬಳಕೆ ಮಾಡಬೇಕಾ ಎಂದು ಹೇಳಿದರು.

ವಿಜ್ಞಾನಿ ಡಾ.ಆರ್.ಉಮಾಶಂಕರ್ ಮಾತನಾಡಿ, ಲೇಖಕ ಗಣೇಶಯ್ಯ ಸಸ್ಯ ಜಗತ್ತಿನ ಹಲವು ವೈಶಿಷ್ಟಗಳನ್ನು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅವರು ನಾಲ್ಕು ದಶಕಗಳಲ್ಲಿ ಸಸ್ಯ ಸಂಶೋಧನೆಯಲ್ಲಿ ಕಂಡ ಸೋಜಿಗಳನ್ನು ದಾಖಲಿಸಿದ್ದಾರೆ. ಈ ಕೃತಿಯ ಓದು ಸಸ್ಯಗಳ ಕುರಿತ ಸಂಶೋಧನೆಗೆ ಪ್ರೇರೇಪಿಸುತ್ತದೆ. ಆಸಕ್ತಿದಾಯಕ ವೈಜ್ಞಾನಿಕ ಅಂಶಗಳನ್ನು ಒಳಗೊಂಡಿರುವ ಈ ಕೃತಿಯಲ್ಲಿ ಲೇಖಕರ ಅನುಭವದ ದೊಡ್ಡ ಪ್ರಯಾಣವಿದೆ ಎಂದು ಹೇಳಿದರು.

ಲೇಖಕ ಡಾ.ಕೆ.ಎನ್.ಗಣೇಶಯ್ಯ ಮಾತನಾಡಿ, ಸಸ್ಯ ಸಗ್ಗ ಕೃತಿಯು ವಿಜ್ಞಾನ, ಆತ್ಮಕಥೆ, ಅನುಭವ ಸೇರಿದಂತೆ ಎಲ್ಲದರ ಕಲಸುಮೇಲೊಗರವಾಗಿದೆ. ಸಸ್ಯಗಳ ಪ್ರೇಮ, ಸ್ವಯಂವರ, ಕಲಹ ಸೇರಿದಂತೆ ಹಲವು ಕುತೂಹಲಕರ ಅಂಶಗಳನ್ನು ಒಳಗೊಂಡಿದೆ. ಎಲ್ಲರೂ ಪುಸ್ತಕಕೊಂಡು ಓದುವಂತೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News