ರೊನಾಲ್ಡೊ ದಾಖಲೆ ಮುರಿದ ಲಿಯೊನೆಲ್ ಮೆಸ್ಸಿ

Update: 2019-12-08 18:39 GMT

ಬಾರ್ಸಿಲೋನ, ಡಿ.8: ಇತ್ತೀಚೆಗೆ ದಾಖಲೆಯ ಆರನೇ ಬಾರಿ ಬ್ಯಾಲನ್ ಡಿ’ಒರ್ ಪ್ರಶಸ್ತಿಯನ್ನು ಬಾಚಿಕೊಂಡ ಅರ್ಜೆಂಟೀನದ ಸ್ಟ್ರೈಕರ್ ಹಾಗೂ ಬಾರ್ಸಿಲೋನದ ಫುಟ್ಬಾಲ್ ಸ್ಟಾರ್ ಲಿಯೊನೆಲ್ ಮೆಸ್ಸಿ ಅವರು ಲಾ ಲಿಗಾದಲ್ಲಿ ಗರಿಷ್ಠ ಹ್ಯಾಟ್ರಿಕ್ ಗೋಲು ಗಳಿಸಿದ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆಯನ್ನು ಮುರಿದಿದ್ದಾರೆ.

ಐದನೇ ಬಾರಿ ಬ್ಯಾಲನ್ ಡಿ’ಒರ್ ಪ್ರಶಸ್ತಿಯನ್ನು ಪಡೆದಿದ್ದ ರೊನಾಲ್ಡೊ ದಾಖಲೆಯನ್ನು ಮೆಸ್ಸಿ ಇತ್ತೀಚೆಗೆ ಮುರಿದಿದ್ದರು. ಇದೀಗ ರೊನಾಲ್ಡೊ ಅವರ ಇನ್ನೊಂದು ದಾಖಲೆಯನ್ನು ಮೆಸ್ಸಿ ಮುರಿದಿದ್ದಾರೆ.

 ಶನಿವಾರ ನಡೆದ ಲಾ ಲಿಗಾ ಪಂದ್ಯದಲ್ಲಿ ಬಾರ್ಸಿಲೋನ ತಂಡದ ಮೆಸ್ಸಿ ಅವರು ಹ್ಯಾಟ್ರಿಕ್ ಗೋಲು ದಾಖಲಿಸಿ ಮಲ್ಲೋರ್ಕಾ ವಿರುದ್ಧ 5-2 ಗೋಲುಗಳಿಂದ ಜಯ ಗಳಿಸಲು ನೆರವಾದರು. ಇದು ಮೆಸ್ಸಿ ಅವರ 35ನೇ ಹ್ಯಾಟ್ರಿಕ್ ಗೋಲುಗಳ ದಾಖಲೆಯಾಗಿದೆ. ರೊನಾಲ್ಡೊ 34 ಗೋಲುಗಳನ್ನು ದಾಖಲಿಸಿದ್ದರು.

ಪಂದ್ಯದ ಮೊದಲು ಮೆಸ್ಸಿಗೆ 6ನೇ ಬ್ಯಾಲನ್ ಡಿ’ಒರ್ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಆಂಟೊಯಿನ್ ಗ್ರಿಝ್ಮನ್ ಏಳನೇ ನಿಮಿಷದಲ್ಲಿ ಗೋಲು ಬಾರಿಸಿ ಬಾರ್ಸಿಲೋನಾಗೆ 1-0 ಮುನ್ನಡೆ ಗಳಿಸಲು ನೆರವಾದರು. ವರ್ಷದ ಅತ್ಯುತ್ತಮ ಆಟಗಾರ ಎನಿಸಿಕೊಂಡಿರುವ ಮೆಸ್ಸಿ 17ನೇ ನಿಮಿಷದಲ್ಲಿ ಗೋಲು ಜಮೆ ಮಾಡಿ 2-0 ಮುನ್ನಡೆಗೆ ನೆರವಾದರು.

35ನೇ ನಿಮಿಷದಲ್ಲಿ ಎದುರಾಳಿ ಮಲ್ಲೋರ್ಕಾ ತಂಡದ ಆ್ಯಂಟೆ ಬುಡಿಮಿರ್ ಗೋಲು ಕಬಳಿಸಿದರು. 41ನೇ ನಿಮಿಷದಲ್ಲಿ ಮೆಸ್ಸಿ ಇನ್ನೊಂದು ಗೋಲು ಜಮೆ ಮಾಡಿದರು. ಮತ್ತೆ 2 ನಿಮಿಷ ಉರುಳುವಷ್ಟರಲ್ಲಿ ಲೂಯಿಸ್ ಸುವರೆಝ್ ಗೋಲು ಗಳಿಸಿದರು. ಇದರಿಂದಾಗಿ ಬಾರ್ಸಿಲೋನ ಮೊದಲಾರ್ಧದಲ್ಲಿ 4-1 ಮುನ್ನಡೆ ಸಾಧಿಸಿತು.

64ನೇ ನಿಮಿಷದಲ್ಲಿ ಆ್ಯಂಟೆ ಬುಡಿಮಿರ್ 2ನೇ ಗೋಲು ಗಳಿಸಿದರು. 83ನೇ ನಿಮಿಷದಲ್ಲಿ 3ನೇ ಗೋಲು ಗಳಿಸಿದ ಮೆಸ್ಸಿ ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಬಾರ್ಸಿಲೋನ 5-2 ಅಂತರದಲ್ಲಿ ಜಯ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News