ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಬಂದ್‌ಗೆ ಕರೆ ನೀಡಿದ ಎನ್‌ಇಎಸ್‌ಒ

Update: 2019-12-19 06:51 GMT

ಇಟಾನಾಗರ್, ಡಿ. 8: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಬಿ) ವಿರುದ್ಧ ಡಿಸೆಂಬರ್ 10ರಂದು ಈಶಾನ್ಯ ರಾಜ್ಯಗಳಲ್ಲಿ ಬಂದ್ ನಡೆಸುವ ಈಶಾನ್ಯ ವಿದ್ಯಾರ್ಥಿಗಳ ಸಂಘಟನೆ (ಎನ್‌ಇಎಸ್‌ಒ) ನಿರ್ಧಾರಕ್ಕೆ ಅನುಮೋದನೆ ನೀಡಿರುವ ಅಖಿಲ ಅರುಣಾಚಲ ಪ್ರದೇಶ ವಿದ್ಯಾರ್ಥಿಗಳ ಒಕ್ಕೂಟ (ಎಎಪಿಎಸ್‌ಯು) ರವಿವಾರ, ಬಂದ್‌ಗೆ ಬೆಂಬಲ ನೀಡುವಂತೆ ರಾಜ್ಯದ ಜನರಿಗೆ ಕರೆ ನೀಡಿದೆ.

ಈಶಾನ್ಯದ ಎಲ್ಲಾ ವಿದ್ಯಾರ್ಥಿ ಸಂಘಟನೆಗಳ ಕೇಂದ್ರ ಸಂಘಟನೆ ಈಶಾನ್ಯ ವಿದ್ಯಾರ್ಥಿಗಳ ಸಂಘಟನೆ (ಎನ್‌ಇಎಸ್‌ಒ) ಮಂಗಳವಾರ ಬೆಳಗ್ಗೆ 5 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಬಂದ್‌ಗೆ ಕರೆ ನೀಡಿದೆ.

ಆದರೆ, ನಾಗಾಲ್ಯಾಂಡ್‌ನಲ್ಲಿ ‘ಹಾರ್ನ್‌ಬಿಲ್ ಉತ್ಸವ’ ನಡೆಯುತ್ತಿರುವುದರಿಂದ ಇಲ್ಲಿ ಬಂದ್‌ನಿಂದ ವಿನಾಯತಿ ನೀಡಲಾಗಿದೆ.

ಈ ವಲಯದ ವಿವಿಧ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರಕಾರ ಮಸೂದೆಯನ್ನು ಸೋಮವಾರ ಸಂಸತ್ತಿನಲ್ಲಿ ಮಂಡಿಸಲಿದೆ.

ಯಶಸ್ವಿಯಾಗಿ ಬಂದ್ ಆಚರಿಸಲು ರಾಜ್ಯದಲ್ಲಿ ಅಗತ್ಯ ಇರುವ ಮಾನವ ಸಂಪನ್ಮೂಲಗಳ ವ್ಯವಸ್ಥೆ ಮಾಡಲು ಎನ್‌ಇಎಸ್‌ಒದ ಘಟಕ ಎಎಪಿಎಸ್‌ಯು ತನ್ನೆಲ್ಲಾ ಒಕ್ಕೂಟಗಳಿಗೆ ಸೂಚಿಸಿದೆ. ಬಂದ್‌ಗೆ ಬೆಂಬಲ ಹಾಗೂ ಸ್ವಯಂಪ್ರೇರಿತವಾಗಿ ಸಹಕರಿಸುವಂತೆ ನಾವು ಜನರಲ್ಲಿ ಮನವಿ ಮಾಡಿದ್ದೇವೆ ಎಂದು ಎಎಪಿಎಸ್‌ಯು ಉಪಾಧ್ಯಕ್ಷ ಮಿಜೆ ಟಾಕು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News