ಉದ್ಯೋಗ ನಷ್ಟವಾಗಿದೆ ಎನ್ನಲು ಯಾವುದೇ ಕಾರಣಗಳಿಲ್ಲ:ಕೇಂದ್ರ ಸಚಿವ

Update: 2019-12-09 12:48 GMT

ಹೊಸದಿಲ್ಲಿ,ಡಿ.9: ಉದ್ಯೋಗ ನಷ್ಟವುಂಟಾಗಿದೆ ಎನ್ನುವುದನ್ನು ತೋರಿಸುವ ಯಾವುದೇ ಕಾರಣಗಳಿಲ್ಲ ಎಂದು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅವರು ಸೋಮವಾರ ಲೋಕಸಭೆಯಲ್ಲಿ ತಿಳಿಸಿದರು.

ಟಿಎಂಸಿ ಸಚಿವ ಕಲ್ಯಾಣ ಬ್ಯಾನರ್ಜಿಯವರ ಪೂರಕ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು,ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು ಸರಕಾರವು ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ತಿಳಿಸಿದರು.

ನೋಟು ನಿಷೇಧದಿಂದಾಗಿ ತನ್ನ ಮತಕ್ಷೇತ್ರದಲ್ಲಿ ಸಾವಿರಾರು ಕಾರ್ಮಿಕರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದ ಬ್ಯಾನರ್ಜಿ,ಈ ಸಂಬಂಧ ಸರಕಾರವು ಕ್ರಮಗಳನ್ನು ತೆಗೆದುಕೊಳ್ಳಲಿದೆಯೇ ಎಂದು ಪ್ರಶ್ನಿಸಿದ್ದರು. ಅವರು ಪಶ್ಚಿಮ ಬಂಗಾಳದ ಶ್ರೀರಾಮಪುರ ಸಂಸದರಾಗಿದ್ದಾರೆ.

ಭಾರತದ ಪ್ರತಿಯೊಬ್ಬ ಪ್ರಜೆಯೂ ಉತ್ತಮ ಉದ್ಯೋಗಾವಕಾಶ ಮತ್ತು ಭವಿಷ್ಯವನ್ನು ಅರಸಿಕೊಂಡು ದೇಶದ ಯಾವುದೇ ಭಾಗಕ್ಕೆ ವಲಸೆ ಹೋಗುವ ಹಕ್ಕು ಹೊಂದಿದ್ದಾನೆ ಎಂದು ಇದೇ ವೇಳೆ ತಿಳಿಸಿದ ಗಂಗ್ವಾರ್,ವಲಸಿಗರು ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ಅಂತರರಾಜ್ಯ ವಲಸಿಗ ಕಾರ್ಮಿಕರ (ಉದ್ಯೋಗ ಮತ್ತು ಸೇವಾ ಸ್ಥಿತಿಗಳ ನಿಯಂತ್ರಣ) ಕಾಯ್ದೆ 1979ನ್ನೂ ಸರಕಾರವು ಅನುಷ್ಠಾನಿಸುತ್ತಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News