ಪೌರತ್ವ ತಿದ್ದುಪಡಿ ಮಸೂದೆಯನ್ನು ಸಮರ್ಥಿಸಿಕೊಂಡ ಅಮಿತ್ ಶಾ

Update: 2019-12-19 06:47 GMT

ಹೊಸದಿಲ್ಲಿ,ಡಿ.9: ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಸೋಮವಾರ ಗೃಹಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಮಂಡಿಸಿದರು. ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಸೂದೆಯನ್ನು ಬಲವಾಗಿ ಸಮರ್ಥಿಸಿಕೊಂಡರು. ಮಸೂದೆಯು ಪಾಕಿಸ್ತಾನ,ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಭಾರತಕ್ಕೆ ಬಂದಿರುವ,ಆರು ಮುಸ್ಲಿಮೇತರ ಧಾರ್ಮಿಕ ಸಮುದಾಯಗಳಿಗೆ ಸೇರಿದ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ಒದಗಿಸುತ್ತದೆ. ಮಸೂದೆಯು ಕೋಮು ಸ್ವರೂಪದ್ದಾಗಿದೆ ಮತ್ತು ಮುಸ್ಲಿಂ ವಿರೋಧಿಯಾಗಿದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.

 ಈ ಮಸೂದೆಯು ಯಾರಿಗೂ ಅನ್ಯಾಯವನ್ನು ಮಾಡುವುದಿಲ್ಲ,ಅದು ಕಳೆದ 70 ವರ್ಷಗಳಿಂದಲೂ ಕಾಯುತ್ತಿದ್ದವರಿಗೆ ನ್ಯಾಯವನ್ನು ಒದಗಿಸುತ್ತದೆಯಷ್ಟೇ ಎಂದು ಹೇಳಿದ ಶಾ,ಪಾಕಿಸ್ತಾನ,ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನಗಳಲ್ಲಿ ಅಲ್ಪಸಂಖ್ಯಾತರು ನರಕಸದೃಶ ಸ್ಥಿತಿಯಲ್ಲಿದ್ದಾರೆ ಎಂದರು. ಅಲ್ಪಸಂಖ್ಯಾತರಿಗೆ ವಿಶೇಷ ರಕ್ಷಣೆಯನ್ನು ಒದಗಿಸಬೇಕು ಎಂದು ಪ್ರತಿಪಕ್ಷಗಳು ಸದಾ ಹೇಳುತ್ತಲೇ ಬಂದಿವೆ. ಹೀಗಿರುವಾಗ ಈ ಮೂರು ರಾಷ್ಟ್ರಗಳಿಂದ ಬಂದಿರುವ ಅಲ್ಪಸಂಖ್ಯಾತರಿಗೆ ರಕ್ಷಣೆಯನ್ನೇಕೆ ಒದಗಿಸಬಾರದು ಎಂದು ಪ್ರಶ್ನಿಸಿದರು.

ಇದು ನಮ್ಮ ರಾಜಕೀಯ ಅಜೆಂಡಾ ಅಲ್ಲ. ಇದು ನಮ್ಮ ಚುನಾವಣಾ ಭರವಸೆಯಾಗಿದೆ. ಇದು ಜನರ ಇಚ್ಛೆಯಾಗಿದೆ ಎಂದ ಶಾ,ಮಸೂದೆಯು ನ್ಯಾಯಸಮ್ಮತ ವರ್ಗೀಕರಣವನ್ನು ಮಾಡಿದೆ,ಹೀಗಾಗಿ ಅದು ಸಂವಿಧಾನವನ್ನು ಉಲ್ಲಂಘಿಸಿಲ್ಲ ಎಂದು ವಾದಿಸಿದರು.

ಈಶಾನ್ಯ ರಾಜ್ಯಗಳ ಕಳವಳಗಳನ್ನು ಮಸೂದೆಯಲ್ಲಿ ನಿವಾರಿಸಲಾಗಿದೆ. ದೀರ್ಘಕಾಲದ ಬೇಡಿಕೆಯಂತೆ ಮಣಿಪುರವನ್ನು ಇನ್ನರ್ ಲೈನ್ ಪರ್ಮಿಟ್ ಅಥವಾ ಆಂತರಿಕ ವೀಸಾ ವ್ಯವಸ್ಥೆಯಡಿ ತರಲಾಗುವುದು ಎಂದರು.

ಮಸೂದೆಯು ಅಸ್ಸಾಂ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಅದರ ವಿರುದ್ಧ ಈಶಾನ್ಯ ಭಾರತದಲ್ಲಿ, ನಿರ್ದಿಷ್ಟವಾಗಿ ಅಸ್ಸಾಮಿನಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ.

ಶಾ ಬಳಿಕ ಮಾತನಾಡಿದ ಕಾಂಗ್ರೆಸ್‌ನ ಮನೀಷ್ ತಿವಾರಿ ಅವರು ಮಸೂದೆಯು ಸಂವಿಧಾನ ವಿರೋಧಿಯಾಗಿದೆ. ಸಂವಿಧಾನದ ವಿಧಿ 14 ಮತ್ತು 15ರಂತೆ ಈ ಮಸೂದೆಯು ಭಾರತದ ಮತ್ತು ಅದರ ಸ್ಥಾಪಕರ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದರು. ಪ್ರಜೆಗಳ ನಡುವೆ ತಾರತಮ್ಯ ಮಾಡಲು ಸಾಧ್ಯವಿಲ್ಲವಾದರೆ ಪೌರತ್ವವನ್ನು ನೀಡುವಾಗ ತಾರತಮ್ಯ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು,ನ್ಯಾಯಸಮ್ಮತ ವರ್ಗೀಕರಣ ಎಂದರೆ ಸಮಾನರನ್ನು ಅಸಮಾನರೆಂದು ಪರಿಗಣಿಸುವಂತಿಲ್ಲ ಮತ್ತು ನಿರಾಶ್ರಿತರು ಭಾರತಕ್ಕೆ ಬಂದಾಗ ಅವರನ್ನು ಹೇಗೆ ನಡೆಸಿಕೊಳ್ಳಬೇಕು ಎನ್ನುವುದನ್ನು ನಾವು ಅವರ ಧರ್ಮದ ಆಧಾರದಲ್ಲಿ ನಿರ್ಧರಿಸುವಂತಿಲ್ಲ ಎಂದರು.

ಮಸೂದೆಯನ್ನು ವಿರೋಧಿಸಿದ ಡಿಎಂಕೆಯ ದಯಾನಿಧಿ ಮಾರನ್ ಅವರು,ಭಾರತದಲ್ಲಿರುವ ಮುಸ್ಲಿಮರನ್ನು ನೀವು ಬೆಂಬಲಿಸುತ್ತಿದ್ದೀರಿ ಎನ್ನುವುದನ್ನು ಸಾಬೀತುಗೊಳಿಸುವ ಏನನ್ನೂ ನೀವು ಮಾಡಿಲ್ಲ. ಇದು ಮುಸ್ಲಿಮರ ವಿರುದ್ಧ ಅಪರಾಧವಲ್ಲವೇ ಎಂದು ಪ್ರಶ್ನಿಸಿದರು. ಸರಕಾರದ ವಿಭಜನಕಾರಿ ನೀತಿಗಳಿಗಾಗಿ ಅದರ ವಿರುದ್ಧ ದಾಳಿ ನಡೆಸಿದ ಪಶ್ಚಿಮ ಬಂಗಾಳದ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು,ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರ ಬಗ್ಗೆ ಸರಕಾರಕ್ಕೆ ಅಷ್ಟೊಂದು ಚಿಂತೆಯಿದ್ದರೆ ಶ್ರೀಲಂಕಾದಲ್ಲಿನ ತಮಿಳು ಮತ್ತು ಮುಸ್ಲಿಂ ಅಲ್ಪಸಂಖ್ಯಾತರ ಬಗ್ಗೆ ನಿಲುವೇನು ಎಂದು ಪ್ರಶ್ನಿಸಿದರು.

ಬೆಳಿಗ್ಗೆ ಮಸೂದೆಯನ್ನು ಮಂಡಿಸುವುದನ್ನು ಸದನವು 293-82 ಮತಗಳಿಂದ ಅಂಗೀಕರಿಸಿತ್ತು.

ಮಸೂದೆಯನ್ನು ಮಂಡಿಸಿದ ಶಾ ಮಾತಿನ ನಡುವೆ ಪ್ರವೇಶಿಸಿದ ಕಾಂಗ್ರೆಸ್ ನಾಯಕ ಆಧಿರ್ ರಂಜನ್ ಚೌಧುರಿ ಅವರು ಮಸೂದೆಯನ್ನು ಮಂಡಿಸುವಂತಿಲ್ಲ ಎಂದು ಹೇಳಿದರು. ಸಂವಿಧಾನದ ಪೀಠಿಕೆಯನ್ನು ಓದಿದ ಅವರು ,ನೀವು ಇದನ್ನು ಇಷ್ಟಪಡುವುದಿಲ್ಲವೇ ಎಂದು ಶಾ ಅವರನ್ನು ಪ್ರಶ್ನಿಸಿದರು.

ಮಸೂದೆಯು ಬಹಿರಂಗವಾಗಿಯೇ ಮಸ್ಲಿಮರನ್ನು ಗುರಿಯಾಗಿಸಿಕೊಂಡಿದೆ ಎಂಬ ಚೌಧುರಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾ,ಇದು ಶೇ.001ರಷ್ಟೂ ನಿಜವಲ್ಲ ಎಂದರು.

ಪೌರತ್ವಕ್ಕೆ ಧರ್ಮವನ್ನು ಆಧಾರವನ್ನಾಗಿ ಮಾಡುವಂತಿಲ್ಲ ಎಂದು ಆರ್‌ಎಸ್‌ಪಿಯ ಎನ್.ಕೆ.ಪ್ರೇಮಚಂದ್ರನ್ ಹೇಳಿದರೆ, ಮಸೂದೆಯಲ್ಲಿ ಮುಸ್ಲಿಮರನ್ನು ಉಲ್ಲೇಖಿಸಿಲ್ಲ ಎಂಬ ಶಾ ಅವರ ಸಮರ್ಥನೆಯಲ್ಲಿ ಯಾವುದೇ ಹುರುಳು ಇಲ್ಲ ಎಂದರು. ಶಾ ಸದನಕ್ಕೆ ಹೊಸಬರಾಗಿದ್ದಾರೆ,ಬಹುಶಃ ಅವರಿಗೆ ನಿಯಮಾವಳಿಗಳು ಗೊತ್ತಿಲ್ಲ ಎಂದು ಅವರು ಹೇಳಿದಾಗ ಆಡಳಿತ ಬಿಜೆಪಿ ಸದಸ್ಯರು ಪ್ರತಿಭಟಿಸಿದರು.

ಐಯುಎಂಎಲ್‌ನ ಇ.ಟಿ.ಮುಹಮ್ಮದ್ ಬಷೀರ್,ಕಾಂಗ್ರೆಸ್‌ನ ಗೌರವ ಗೊಗೊಯಿ,ಕಾಂಗ್ರೆಸ್‌ನ ಶಶಿ ತರೂರ್ ಮತ್ತು ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿ ಅವರೂ ಮಸೂದೆಯ ಮಂಡನೆಯನ್ನು ವಿರೋಧಿಸಿ ಮಾತನಾಡಿದರು.

ಶಾ ಮಾತನಾಡಲು ಎದ್ದುನಿಂತಾಗ ಪ್ರತಿಪಕ್ಷ ನಾಯಕರಿಂದ ಪ್ರತಿಭಟನೆ ವ್ಯಕ್ತವಾಯಿತು. ಮಸೂದೆಯು ಸಂವಿಧಾನವನ್ನು ಉಲ್ಲಂಘಿಸುತ್ತಿದೆ ಎಂಬ ಎಲ್ಲ ಭೀತಿಗಳನ್ನೂ ದೂರ ಮಾಡುವುದಾಗಿ ಹೇಳಿದ ಶಾ,ನ್ಯಾಯಸಮ್ಮತ ವರ್ಗೀಕರಣದ ಆಧಾರದಲ್ಲಿ ಶಾಸನಗಳನ್ನು ಮಾಡಲು ವಿಧಿ 14 ಸರಕಾರಕ್ಕೆ ಅಡ್ಡಿಯಾಗುವುದಿಲ್ಲ ಎಂದರು.

ಬಾಂಗ್ಲಾದೇಶದಿಂದ ಬಂದವರಿಗೆ ಪೌರತ್ವವನ್ನು ನೀಡುವುದಾಗಿ ಇಂದಿರಾ ಗಾಂಧಿಯವರು 1974ರಲ್ಲಿ ಹೇಳಿದ್ದರು. ಆಗ ಅವರೇಕೆ ಪಾಕಿಸ್ತಾನವನ್ನು ಉಲ್ಲೇಖಿಸಿರಲಿಲ್ಲ ಎಂದು ಪ್ರಶ್ನಿಸಿದ ಶಾ,ಅಲ್ಪಸಂಖ್ಯಾತರಿಗೆ ಒದಗಿಸಲಾಗಿರುವ ಹಲವಾರು ವಿಶೇಷ ಹಕ್ಕುಗಳನ್ನು ಉಲ್ಲೇಖಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News