ನ್ಯೂಝಿಲ್ಯಾಂಡ್: ವೈಟ್ ಐಲ್ಯಾಂಡ್ ಜ್ವಾಲಾಮುಖಿ ಸ್ಫೋಟ; 5 ಸಾವು

Update: 2019-12-09 15:28 GMT

ವೆಲಿಂಗ್ಟನ್ (ನ್ಯೂಝಿಲ್ಯಾಂಡ್), ಡಿ. 9: ನ್ಯೂಝಿಲ್ಯಾಂಡ್‌ನ ಪ್ರಸಿದ್ಧ ವೈಟ್ ಐಲ್ಯಾಂಡ್ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಐವರು ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ.

''ಸೋಮವಾರ ಬೆಳಗ್ಗೆ ದ್ವೀಪದಿಂದ ಪ್ರವಾಸಿಗರನ್ನು ರಕ್ಷಿಸಲಾಗಿದ್ದು, ಐವರು ಪ್ರಾಣ ಕಳೆದುಕೊಂಡಿದ್ದಾರೆ'' ಎಂದು ಡೆಪ್ಯುಟಿ ಕಮಿಶನರ್ ಜಾನ್ ಟಿಮ್ಸ್ ಸುದ್ದಿಗಾರರಿಗೆ ತಿಳಿಸಿದರು. 18 ಮಂದಿ ಗಾಯಗೊಂಡಿದ್ದು, ಅವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. ಗಾಯಗೊಂಡವರ ಪೈಕಿ ಕೆಲವರು ತೀವ್ರ ಸುಟ್ಟ ಗಾಯಗಳಿಗೊಳಗಾಗಿದ್ದಾರೆ.

ಜ್ವಾಲಾಮುಖಿ ಸ್ಫೋಟಗೊಳ್ಳುವಾಗ ಕನಿಷ್ಠ 10 ಮಂದಿಯ ಇನ್ನೊಂದು ಗುಂಪು ದ್ವೀಪದಲ್ಲಿತ್ತು, ಆದರೆ, ಅವರೊಂದಿಗೆ ಈಗ ಯಾವುದೇ ಸಂಪರ್ಕವಿಲ್ಲ ಎಂದು ಅವರು ತಿಳಿಸಿದರು. ''ಅವರ ಪರಿಸ್ಥಿತಿಯ ಬಗ್ಗೆ ನಮಗೇನೂ ತಿಳಿದಿಲ್ಲ'' ಎಂದರು.

ಜ್ವಾಲಾಮುಖಿಯಲ್ಲಿ ಸಿಕ್ಕಿ ಹಾಕಿಕೊಂಡವರ ಪೈಕಿ ವಿದೇಶಿಯರಿದ್ದಾರೆ ಎನ್ನುವುದನ್ನು ಪ್ರಧಾನಿ ಜಸಿಂಡ ಆರ್ಡರ್ನ್ ಖಚಿತಪಡಿಸಿದ್ದಾರೆ. ''ಜ್ವಾಲಾಮುಖಿ ಸ್ಫೋಟದ ಸಂದರ್ಭದಲ್ಲಿ ದ್ವೀಪದಲ್ಲಿ ಮತ್ತು ಅದರ ಸುತ್ತಮುತ್ತ ನ್ಯೂಝಿಲ್ಯಾಂಡ್ ಮತ್ತು ವಿದೇಶಗಳ ಪ್ರವಾಸಿಗರಿದ್ದರು ಎನ್ನುವುದು ನಮಗೆ ತಿಳಿದಿದೆ'' ಎಂದರು.

ಜ್ವಾಲಾಮುಖಿ ಸ್ಫೋಟಗೊಂಡ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸುವುದು ತೀರಾ ಅಪಾಯಕಾರಿ ಎಂದು ನ್ಯೂಝಿಲ್ಯಾಂಡ್ ಪೊಲೀಸರು ಹೇಳಿದ್ದಾರೆ.

ಸ್ಥಳೀಯ ಸಮಯ ಸೋಮವಾರ ಅಪರಾಹ್ನ 2:11ಕ್ಕೆ ಜ್ವಾಲಾಮುಖಿ ಸ್ಫೋಟಿಸಿದೆ ಹಾಗೂ ಆಗ ಆ ಸ್ಥಳದಲ್ಲಿ ಸುಮಾರು 50 ಜನರಿದ್ದರು ಎಂದು ಪೊಲೀಸರು ತಿಳಿಸಿದರು.

ಸಾಹಸಿ ಪ್ರವಾಸಿಗರ ನೆಚ್ಚಿನ ತಾಣ: ತೀರದಿಂದ 50 ಕಿ.ಮೀ. ದೂರದಲ್ಲಿರುವ ಪರ್ವತ

ವೈಟ್ ಐಲ್ಯಾಂಡ್ ಪ್ಲೆಂಟಿ ಕೊಲ್ಲಿಯಲ್ಲಿ ತೀರದಿಂದ ಸುಮಾರು 50 ಕಿ.ಮೀ. ದೂರದಲ್ಲಿದೆ. ಗಟ್ಟಿ ಟೊಪ್ಪಿಗಳನ್ನು ಮತ್ತು ಅನಿಲ ಮುಖವಾಡಗಳನ್ನು ಧರಿಸಲು ಮುಂದಾಗುವ ಸಾಹಸಿ ಪ್ರವಾಸಿಗರಿಗೆ ಇದು ಪ್ರಿಯ ತಾಣವಾಗಿದೆ.

ಅದು ನ್ಯೂಝಿಲ್ಯಾಂಡ್‌ನ ಅತ್ಯಂತ ಸಕ್ರಿಯ ಜ್ವಾಲಾಮುಖಿ ಪರ್ವತವಾಗಿದೆ. ಅದರ ಸುಮಾರು 70 ಶೇಕಡ ಭಾಗ ನೀರಿನಿಂದಾವೃತವಾಗಿದೆ.

ಅಲ್ಲಿಗೆ ಪ್ರತಿ ವರ್ಷ ಸುಮಾರು 10,000 ಜನರು ಭೇಟಿ ನೀಡುತ್ತಾರೆ. ಅದು ಕಳೆದ ಅರ್ಧ ಶತಮಾನದಲ್ಲಿ ಆಗಾಗ ಸ್ಫೋಟಿಸಿದೆ. ಅದು ಕೊನೆಯ ಬಾರಿ ಸ್ಫೋಟಿಸಿದ್ದು 2016ರ ಆಗಸ್ಟ್‌ನಲ್ಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News