ಇರಾಕ್ ಸೇನಾ ಆವರಣದ ಮೇಲೆ ರಾಕೆಟ್ ದಾಳಿ

Update: 2019-12-09 17:33 GMT

ಬಗ್ದಾದ್, ಡಿ. 9: ಇರಾಕ್ ರಾಜಧಾನಿ ಬಗ್ದಾದ್‌ನ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಹಾಗೂ ಅಮೆರಿಕ ಸೈನಿಕರು ನೆಲೆಸಿರುವ ಇರಾಕಿ ಸೇನಾ ಆವರಣವೊಂದರ ಮೇಲೆ ಸೋಮವಾರ ಹಲವಾರು ರಾಕೆಟ್‌ಗಳು ಅಪ್ಪಳಿಸಿದ್ದು, ಆರು ಮಂದಿ ಇರಾಕ್ ಸೈನಿಕರು ಗಾಯಗೊಂಡಿದ್ದಾರೆ ಎಂದು ಇರಾಕ್ ಸೇನೆ ತಿಳಿಸಿದೆ.

ಹಾರದೆ ಉಳಿದಿರುವ ರಾಕೆಟ್‌ಗಳು ಮತ್ತು ಅವುಗಳ ಉಡಾವಕಗಳನ್ನು ಭದ್ರತಾ ಪಡೆಗಳು ಪತ್ತೆಹಚ್ಚಿವೆ. ಇದು ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಲು ಉದ್ದೇಶಿಸಲಾಗಿತ್ತು ಎನ್ನುವುದನ್ನು ಸೂಚಿಸಿದೆ ಸೇನೆ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಅಮೆರಿಕದ ಸೈನಿಕರಿರುವ ಇರಾಕಿ ನೆಲೆಗಳು ಅಥವಾ ಅಮೆರಿಕ ರಾಯಭಾರ ಕಚೇರಿಯನ್ನು ಗುರಿಯಾಗಿಸಿ ಪದೇ ಪದೇ ದಾಳಿಗಳು ನಡೆಯುತ್ತಿವೆ. ಆರು ವಾರಗಳ ಅವಧಿಯಲ್ಲಿ, ಇರಾಕ್‌ನಲ್ಲಿರುವ ಅಮೆರಿಕ ಸೈನಿಕರ ನೆಲೆಗಳನ್ನು ಗುರಿಯಾಗಿಸಿ ಕನಿಷ್ಠ 9 ದಾಳಿಗಳನ್ನು ನಡೆಸಲಾಗಿದೆ.

ಇರಾಕ್‌ನಲ್ಲಿರುವ ಹಲವಾರು ಇರಾನ್ ಬೆಂಬಲಿತ ಬಣಗಳು ಈ ದಾಳಿಗಳ ಹಿಂದಿವೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿಗಳು ಆರೋಪಿಸಿದ್ದಾರೆ.

ಸೋಮವಾರದ ದಾಳಿಯಲ್ಲಿ ಗಾಯಗೊಂಡವರು ಇರಾಕ್‌ನ ಭಯೋತ್ಪಾದನೆ ನಿಗ್ರಹ ದಳದವರು. ಈ ಉನ್ನತ ದರ್ಜೆಯ ಪಡೆಯನ್ನು ಆರಂಭಿಸಿ ತರಬೇತಿ ನೀಡಿದವರು ಅಮೆರಿಕದ ಸೈನಿಕರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News