ಉಪಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಬಿಎಸ್‌ವೈ ಸ್ಪಷ್ಟನೆ

Update: 2019-12-10 12:39 GMT

ಬೆಂಗಳೂರು, ಡಿ.10: ಉಪ ಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಸಚಿವ ಸ್ಥಾನ ನೀಡುತ್ತೇವೆ. ಅವರಿಂದಲೇ ಈ ಸರಕಾರ ಮುಂದುವರೆಯಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮಂಗಳವಾರ ವಿಧಾನಸೌಧದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ 117ನೇ ಜನ್ಮದಿನದ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೂರ್ನಾಲ್ಕು ದಿನಗಳಲ್ಲಿ ನಾನು ಹೊಸದಿಲ್ಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದ ಬಳಿಕ ಸಚಿವ ಸಂಪುಟವನ್ನು ವಿಸ್ತರಣೆ ಮಾಡುತ್ತೇನೆ ಎಂದು ಅವರು ಹೇಳಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೆ ಚುನಾವಣೆಯಲ್ಲಿ ಗೆದ್ದು ಬಂದಿರುವವರಿಗೆಲ್ಲ ನಾನು ಭರವಸೆ ನೀಡಿದಂತೆ ಸಚಿವ ಸ್ಥಾನವನ್ನು ನೀಡುತ್ತೇನೆ. ಆ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದು ಅವರು, ಚುನಾವಣೆಯಲ್ಲಿ ಪರಾಭವಗೊಂಡಿರುವವರ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರ ಮಾಡಿಲ್ಲ ಎಂದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರನ್ನು ಸ್ಮರಿಸಿಕೊಂಡ ಯಡಿಯೂರಪ್ಪ, ಸ್ವಾತಂತ್ರ ಚಳವಳಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ನಿಜಲಿಂಗಪ್ಪ, ಸರಳ, ಸಜ್ಜನಿಕೆಯ ಪ್ರಾಮಾಣಿಕ ವ್ಯಕ್ತಿ ಎಂದರು.

ಒಬ್ಬ ಯಶಸ್ವಿ ವಕೀಲರಾಗಿದ್ದ ನಿಜಲಿಂಗಪ್ಪ, ಭಾರತೀಯ ಸಂವಿಧಾನ ರಚನಾ ಸಮಿತಿಯಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ. ಮಹಾತ್ಮಗಾಂಧಿ ಹಾಗೂ ವಿನೋಬಾ ಭಾವೆ ಅವರ ಕಟ್ಟಾ ಅಭಿಮಾನಿ ಹಾಗೂ ಅನುಯಾಯಿಯಾಗಿದ್ದರು. ಅಲ್ಲದೇ, ಅವರಿಬ್ಬರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು ಎಂದು ಯಡಿಯೂರಪ್ಪ ಹೇಳಿದರು.

ಕರ್ನಾಟಕ ಏಕೀಕರಣ ಆಂದೋಲನದಲ್ಲಿಯೂ ಮುಂಚೂಣಿಯಲ್ಲಿದ್ದ ನಿಜಲಿಂಗಪ್ಪ, ಆನಂತರ ಮೂರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಲ್ಲದೇ, ಹೊಸದಾಗಿ ರಚನೆಯಾದ ಏಕೀಕೃತ ಕರ್ನಾಟಕವನ್ನು ಸಮರ್ಥಕವಾಗಿ ಮುನ್ನಡೆಸಿದರು. ರಾಜ್ಯದ ಅಭಿವೃದ್ಧಿಗೆ ಸಮರ್ಥವಾದ ಬುನಾದಿಯನ್ನು ಹಾಕಿದರು ಎಂದು ಅವರು ಹೇಳಿದರು.

ನಿಜಲಿಂಗಪ್ಪ ಪ್ರತಿಪಾದಿಸಿದ ಸಮಾಜಮುಖಿ ಮೌಲ್ಯಗಳು ಇಂದಿಗೂ ಪ್ರಸ್ತುತ. ಅದನ್ನು ಅನುಸರಿಸುವ ಮೂಲಕ ನಾವು ಅವರನ್ನು ಗೌರವಿಸಬೇಕು. ಚಿತ್ರದುರ್ಗದಲ್ಲಿರುವ ಅವರ ಮನೆಯನ್ನು ಸ್ಮಾರಕವಾಗಿ ಮಾಡಬೇಕು ಎಂಬುದು ಬಹಳ ದಿನಗಳ ಆಪೇಕ್ಷೆ. ಆದಷ್ಟು ಶೀಘ್ರದಲ್ಲಿ ಆ ಮನೆಯನ್ನು ಖರೀದಿಸಿ ಸ್ಮಾರಕವನ್ನಾಗಿ ಮಾಡುತ್ತೇವೆ ಎಂದು ಯಡಿಯೂರಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಿಧಾನಪರಿಷತ್ ಸದಸ್ಯ ಲೆಹರ್‌ಸಿಂಗ್, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News