ಪಾದಯಾತ್ರೆಗೆ ಅನುಮತಿ ನಿರಾಕರಣೆ ಸ್ವಲ್ಪವೂ ಸಮರ್ಥನೀಯವಲ್ಲ: ಬರಗೂರು ರಾಮಚಂದ್ರಪ್ಪ

Update: 2019-12-10 13:09 GMT

ಬೆಂಗಳೂರು, ಡಿ.10: ಅಂಗನವಾಡಿ ನೌಕರರು ನಡೆಸಲು ಉದ್ದೇಶಿಸಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ರಾಜ್ಯ ಸರಕಾರ ಅನುಮತಿ ನೀಡದಿರುವುದು ಖಂಡನೀಯ. ಅಲ್ಲದೆ, ಇಂತಹ ಬೆಳವಣಿಗೆ ಸ್ವಲ್ಪವೂ ಸಮರ್ಥನೀಯವಲ್ಲ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಮಂಗಳವಾರ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅಂಗನವಾಡಿ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತುಮಕೂರಿನಿಂದ ಆರಂಭವಾಗಬೇಕಿದ್ದ ಪಾದಯಾತ್ರೆಗೆ ಪೊಲೀಸ್ ಇಲಾಖೆಯು ಕೊನೆಗಳಿಗೆಯಲ್ಲಿ ಅನುಮತಿ ನಿರಾಕರಿಸಿ ನಿಷೇಧ ಹೇರಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾಸತ್ತಾತ್ಮಕ ವಿಧಾನದಲ್ಲಿ ಆಯೋಜಿತಗೊಂಡಿದ್ದ ಪಾದಯಾತ್ರೆಗೆ ಅನುಮತಿ ನೀಡದಿರುವುದು ಅಚ್ಚರಿಯ ಆಘಾತಕಾರಿ ಬೆಳವಣಿಗೆಯಾಗಿದೆ. ಅಂಗನವಾಡಿ ನೌಕರರು ಇಲ್ಲಿಯವರೆಗೂ ಮಾಡಿದ ಯಾವ ಪ್ರತಿಭಟನೆಯಲ್ಲೂ ಹಿಂಸಾತ್ಮಕ ತಿರುವು ಪಡೆದಿಲ್ಲ ಎಂದು ಅವರು ಹೇಳಿದ್ದಾರೆ.

ಶಾಂತಿಯುತ ಹಾಗೂ ಸಂವಿಧಾನಾತ್ಮಕ ಪ್ರತಿಭಟನೆ ಮತ್ತು ಪಾದಯಾತ್ರೆಗಳನ್ನು ನಡೆಸುವುದು ಸಂವಿಧಾನಾತ್ಮಕ ಹಕ್ಕು, ಈ ಹಕ್ಕಿಗೆ ಧಕ್ಕೆ ತರುವ ಯಾವುದೇ ಸರಕಾರದ ಕ್ರಮವು ಪ್ರಜಾಪ್ರಭುತ್ವ ಮೌಲ್ಯಗಳ ವಿರೋಧಿಯಾಗುತ್ತದೆ. ಹಾಗಾಗಿ, ಪಾದಯಾತ್ರ್ರೆಗೆ ಅನುಮತಿ ನಿರಾಕರಿಸಿರುವುದು ಸ್ವಲ್ಪವೂ ಸಮರ್ಥನೀಯವಲ್ಲ ಖಂಡನೀಯ. ಈ ಕೂಡಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಧ್ಯಪ್ರವೇಶಿಸಿ, ನೌಕರರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News