ಬೆಂಗಳೂರು: ಪೌರತ್ವ ತಿದ್ದುಪಡಿ ಮಸೂದೆ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ; ಮಸೂದೆ ಪ್ರತಿ ಸುಟ್ಟು ಆಕ್ರೋಶ

Update: 2019-12-19 07:12 GMT

ಬೆಂಗಳೂರು, ಡಿ.10: ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನ ವಿರೋಧಿಯಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಲು ಬಿಡುವುದಿಲ್ಲ ಎಂದು ಘೋಷಣೆ ಕೂಗಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಮಂಗಳವಾರ ನಗರದ ಪುರಭವನ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಪೌರತ್ವ ತಿದ್ದುಪಡಿ ಮಸೂದೆ ಪ್ರತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿ, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ಪೌರತ್ವ ತಿದ್ದುಪಡಿ ಮಸೂದೆ ತಾರತಮ್ಯದಿಂದ ಕೂಡಿದ್ದು, ಇದು ದೇಶದಲ್ಲಿ ಅಶಾಂತಿಗೆ ಕಾರಣವಾಗಲಿದೆ. ಇದರಿಂದ ರಕ್ತಪಾತವಾಗಿ ದೇಶ ವಿಭಜನೆಗೂ ಇದು ಕಾರಣವಾಗಲಿದೆ ಎಂದು ಹೇಳಿದರು.

ಈ ಮಸೂದೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದ ಹಿಂದೂಗಳು, ಸಿಖ್ಖರು, ಪಾರ್ಸಿಗಳು, ಕ್ರಿಶ್ಚಿಯನ್ನರು, ಬೌದ್ಧರು ಮತ್ತು ಜೈನರಿಗೆ ಭಾರತೀಯ ಪೌರತ್ವ ಕಲ್ಪಿಸಲಿದೆ. ಆದರೆ, ಮುಸ್ಲಿಮರನ್ನು ಹೊರಗಿಡಲಾಗಿದೆ. ಈ ಮೂಲಕ ಮುಸ್ಲಿಮರನ್ನು ದೇಶರಹಿತರನ್ನಾಗಿ ಮಾಡುವ ಹುನ್ನಾರ ಅಡಗಿದೆ ಎಂದು ದೂರಿದರು.

ಅಸ್ಸಾಂನಲ್ಲಿ ನಡೆಸಿದ ಎನ್‌ಆರ್‌ಸಿ ವಿಫಲವಾದ ಬಳಿಕ ಇದೀಗ ದೇಶಾದ್ಯಂತ ಅದನ್ನು ಜಾರಿ ಮಾಡುವುದಾಗಿ ಕೇಂದ್ರ ಗೃಹ ಸಚಿವರು ಹೇಳುತ್ತಿದ್ದಾರೆ. ಅಸ್ಸಾಂನಲ್ಲಿ 20 ಲಕ್ಷ ಮಂದಿಯನ್ನು ಎನ್‌ಆರ್‌ಸಿಯಿಂದ ಹೊರಗಿಡಲಾಗಿದೆ. ಇದರಲ್ಲಿ 16 ಲಕ್ಷ ಹಿಂದೂಗಳು ಮತ್ತು 4 ಲಕ್ಷ ಮುಸ್ಲಿಮರಿದ್ದಾರೆ. ಅಲ್ಲಿನ ಬಿಜೆಪಿ ಮತ್ತು ಸಂಘಪರಿವಾರ ಇದನ್ನು ವಿರೋಧಿಸುತ್ತಿದೆ ಎಂದು ಹೇಳಿದರು.

ದೇಶ ಆರ್ಥಿಕವಾಗಿ ಕುಸಿದಿದ್ದು, ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನರು ಸರಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಕೈಗಾರಿಕೆಗಳು, ಉತ್ಪಾದನಾ ವಲಯ, ಸೇವಾ ವಲಯ ಸೇರಿದಂತೆ ಎಲ್ಲ ವಲಯಗಳು ಕುಸಿತ ಕಾಣುತ್ತಿದೆ. ಇದರಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಎನ್‌ಆರ್‌ಸಿ ಅಸ್ತ್ರ ಪ್ರಯೋಜಿಸಲಾಗಿದೆ. ಆದರೆ, ಇದರಲ್ಲಿ ಬಿಜೆಪಿ ಸರಕಾರ ಯಶಸ್ವಿಯಾಗಲಾರದು ಎಂದು ಅವರು ತಿಳಿಸಿದರು.

ಪ್ರತಿಭಟನೆಯಲ್ಲಿ ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮುಜಾಹಿದ್ ಪಾಶಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News