ಇಂದು ಸರಣಿ ಗೆಲುವಿಗಾಗಿ ಭಾರತ-ವಿಂಡೀಸ್ ಹೋರಾಟ

Update: 2019-12-10 18:31 GMT

ಮುಂಬೈ, ಡಿ.10: ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ತಲಾ 1 ಪಂದ್ಯವನ್ನು ಗೆದ್ದುಕೊಂಡು ಸಮಬಲ ಸಾಧಿಸಿರುವ ಭಾರತ ಹಾಗೂ ವೆಸ್ಟ್‌ಇಂಡೀಸ್ ಇದೀಗ ಸರಣಿ ವಶಪಡಿಸಿಕೊಳ್ಳಲು ಹೋರಾಟ ನಡೆಸಲಿವೆ.

ಎರಡು ಬಾರಿಯ ಟ್ವೆಂಟಿ-20 ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಿರುವನಂತಪುರದಲ್ಲಿ ನಡೆದ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು 1-1ರಿಂದ ಸಮಬಲಗೊಳಿಸಿತ್ತು. ಹೈದರಾಬಾದ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಸಾಹಸದ ನೆರವಿನಿಂದ ಟ್ವೆಂಟಿ-20ಯಲ್ಲಿ ಗರಿಷ್ಠ ರನ್‌ನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಿದ ಭಾರತ ಕಠಿಣ ಸವಾಲನ್ನು ದಿಟ್ಟವಾಗಿ ಎದುರಿಸಿತ್ತು. ಆರು ವಿಕೆಟ್‌ಗಳಿಂದ ಗೆಲುವು ದಾಖಲಿಸಿತ್ತು. ಇದೀಗ ಭಾರತ ಮತ್ತೊಮ್ಮೆ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಹಾಗೂ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಮೇಲೆ ದೃಷ್ಟಿಹರಿಸಿದೆ. ಪಂತ್ ವಾಂಖೆಡೆ ಸ್ಟೇಡಿಯಂನಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇಡಲಾಗಿದೆ.

ಟೀಮ್ ಮ್ಯಾನೇಜ್‌ಮೆಂಟ್ ಸುಂದರ್ ಮೇಲೆ ವಿಶ್ವಾಸ ಇಡುತ್ತದೋ ಅಥವಾ ಚೈನಾಮನ್ ಬೌಲರ್ ಕುಲದೀಪ್ ಯಾದವ್‌ಗೆ ಆಡುವ ಬಳಗದಲ್ಲಿ ಅವಕಾಶ ನೀಡುತ್ತದೋ ಎಂದು ಕಾದುನೋಡಬೇಕಾಗಿದೆ.

ಸುಂದರ್ ಕಳೆದ 5 ಟ್ವೆಂಟಿ-20 ಪಂದ್ಯಗಳ ಪೈಕಿ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ. ವಿಂಡೀಸ್ ವಿರುದ್ಧ 2 ಹಾಗೂ ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳನ್ನು ಆಡಿದ್ದಾರೆ. 23 ಓವರ್‌ಗಳ ಬೌಲಿಂಗ್‌ನಲ್ಲಿ 144 ರನ್ ಬಿಟ್ಟುಕೊಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದರು. ಸುಂದರ್ ಫೀಲ್ಡಿಂಗ್ ಸಾಮರ್ಥ್ಯವು ಕೊಹ್ಲಿಗೆ ಚಿಂತೆಯಾಗಿ ಕಾಡುತ್ತಿದೆ. 2ನೇ ಪಂದ್ಯದಲ್ಲಿ ಸುಂದರ್ ಅವರು ಸಿಮೊನ್ಸ್ ಕ್ಯಾಚ್ ಕೈಬಿಟ್ಟಿದ್ದರು. 45 ಎಸೆತಗಳಲ್ಲಿ 67 ರನ್ ಗಳಿಸಿದ್ದ ಸಿಮೊನ್ಸ್ ವೆಸ್ಟ್‌ಇಂಡೀಸ್ 8 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಲು ನೆರವಾಗಿದ್ದರು.

 ಕುಲದೀಪ್ ಫೆಬ್ರವರಿಯಲ್ಲಿ ಹ್ಯಾಮಿಲ್ಟನ್‌ಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಕೊನೆಯ ಟಿ-20ಪಂದ್ಯ ಆಡಿದ್ದರು. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಕುಲದೀಪ್ ಆಡುವ ಅವಕಾಶ ಪಡೆದಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಪಂತ್ ಕಳೆದ 7 ಟ್ವೆಂಟಿ-20 ಪಂದ್ಯಗಳಲ್ಲಿ ಔಟಾಗದೆ 33, 18, 6, 27, 19 ಹಾಗೂ 4 ರನ್ ಗಳಿಸಿದ್ದಾರೆ. ಪ್ರೊವಿಡೆನ್ಸ್‌ನಲ್ಲಿ ಆಗಸ್ಟ್‌ನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ಕೊನೆಯ ಬಾರಿ ಅರ್ಧಶತಕ ಗಳಿಸಿದ್ದರು.

ಒಟ್ಟು ವಿಶ್ಲೇಷಣೆಯ ಪ್ರಕಾರ ಭಾರತದ ಬ್ಯಾಟಿಂಗ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ತವರು ಪ್ರೇಕ್ಷಕರ ಸಮ್ಮುಖದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

ಕೆಎಲ್ ರಾಹುಲ್ ಹಾಗೂ ನಾಯಕ ಕೊಹ್ಲಿ ಸರಣಿಯಲ್ಲಿ ರನ್ ಗಳಿಸಿದ್ದಾರೆ. ಆಲ್‌ರೌಂಡರ್ ಶಿವಂ ದುಬೆ ಕಳೆದ ಪಂದ್ಯದಲ್ಲಿ ಚೊಚ್ಚಲ ಟಿ-20 ಅರ್ಧಶತಕವನ್ನು ಸಿಡಿಸಿ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದರು. ಭಾರತದ ಬೌಲಿಂಗ್ ವಿಭಾಗದಲ್ಲಿ ದೀಪಕ್ ಚಹಾರ್ ಹಾಗೂ ಭುವನೇಶ್ವರ ಕುಮಾರ್ ಮೊದಲೆರಡು ಪಂದ್ಯಗಳಲ್ಲಿ ರನ್ ಬಿಟ್ಟುಕೊಟ್ಟಿದ್ದರು. ಚಹಾರ್ ಬಾಂಗ್ಲಾದೇಶ ವಿರುದ್ಧ ಸ್ಮರಣೀಯ ಸರಣಿಯನ್ನು ಆಡಿದ್ದರು. ಆದರೆ, ಈ ಬಾರಿ ವಿಂಡೀಸ್ ವಿರುದ್ಧ ತನ್ನ ಉತ್ತಮ ಪ್ರದರ್ಶನ ಪುನರಾವರ್ತಿಸಲು ವಿಫಲರಾಗಿದ್ದಾರೆ. ಭಾರತದ ಫೀಲ್ಡಿಂಗ್ ಕಳಪೆ ಮಟ್ಟದಲ್ಲಿದ್ದು ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದೆ. ಆತಿಥೇಯ ಭಾರತ ರನ್ ಚೇಸಿಂಗ್‌ನಲ್ಲಿ ಮಾಸ್ಟರ್ ಆಗಿದ್ದು, ರನ್ ಉಳಿಸಿಕೊಳ್ಳುವುದು ಹೇಗೆಂಬ ಬಗ್ಗೆ ಚಿಂತಿಸುವ ಅಗತ್ಯವಿದೆ. 2ನೇ ಪಂದ್ಯದಲ್ಲಿ ತಿರುಗೇಟು ನೀಡಿರುವ ವಿಂಡೀಸ್ ಸರಣಿ ಗೆಲ್ಲುವತ್ತ ಚಿತ್ತಹರಿಸಿದೆ.

ಅಗ್ರ ಸರದಿ ಬ್ಯಾಟ್ಸ್‌ಮನ್ ಅದರಲ್ಲೂ ಮುಖ್ಯವಾಗಿ ಸಿಮೊನ್ಸ್ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಎವಿನ್ ಲೆವಿಸ್, ನಿಕೊಲಸ್ ಪೂರನ್ ಹಾಗೂ ಶಿಮ್ರಾನ್ ಹೆಟ್ಮೆಯರ್ ರನ್ ಗಳಿಸುತ್ತಿದ್ದು, ಉತ್ತಮ ಫಾರ್ಮ್ ಮುಂದುವರಿಸಲು ಎದುರು ನೋಡುತ್ತಿದ್ದಾರೆ. ವಾಂಖೆಡೆ ಸ್ಟೇಡಿಯಂನಲ್ಲಿ 2016ರಲ್ಲಿ ನಡೆದ ಐಸಿಸಿ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ವಿಂಡೀಸ್ ತಂಡ ಭಾರತವನ್ನು ಸೋಲಿಸಿ ಫೈನಲ್‌ಗೆ ತಲುಪಿತ್ತು. ಫೈನಲ್‌ನಲ್ಲಿ ಜಯಶಾಲಿಯಾಗಿ ಪ್ರಶಸ್ತಿ ಜಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News