ನ್ಯೂಜೆರ್ಸಿ ಮಳಿಗೆಯಲ್ಲಿ ಶೂಟೌಟ್: ಪೊಲೀಸ್ ಅಧಿಕಾರಿ ಸೇರಿ ಆರು ಮಂದಿ ಮೃತ್ಯು

Update: 2019-12-11 03:39 GMT

ನ್ಯೂಯಾರ್ಕ್ : ಹಡ್ಸನ್ ನದಿ ತೀರದ ನ್ಯೂಜೆರ್ಸಿ ಮಳಿಗೆಯೊಂದರಲ್ಲಿ ಮಂಗಳವಾರ ಸಂಜೆ ನಡೆದ ಶೂಟೌಟ್‌ನಲ್ಲಿ ಕನಿಷ್ಠ ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ ಆರು ಮಂದಿ ಜೀವ ಕಳೆದುಕೊಂಡಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ನಗರದ ಶಾಲೆ ಹಾಗೂ ಕಚೇರಿಗಳನ್ನು ಭದ್ರತಾ ಕಾರಣಗಳಿಗಾಗಿ ಮುಚ್ಚಲಾಗಿದೆ.

ಮಳಿಗೆಯ ಒಳಗೆ ಹಲವು ಮಂದಿ ಶೂಟೌಟ್‌ ಗೆ ಬಲಿಯಾಗಿದ್ದಾರೆ. ಸುಮಾರು ಒಂದು ಗಂಟೆ ಕಾಲ ದಾಳಿಕೋರರು ಮತ್ತು ಕಾನೂನು ಜಾರಿ ಅಧಿಕಾರಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ನ್ಯೂಜೆರ್ಸಿ ಸಿಟಿ ಮೇಯರ್ ಸ್ಟೀವನ್ ಫುಲಪ್ ಹೇಳಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರು ಮತ್ತು ಒಬ್ಬ ನಾಗರಿಕ ಗಾಯಗೊಂಡಿದ್ದು, ಇವರ ಆರೋಗ್ಯಸ್ಥಿತಿ ಸ್ಥಿರವಾಗಿದೆ ಎಂದು ಹಡ್ಸನ್ ಕೌಂಟಿ ಪ್ರೊಸೆಕ್ಯೂಟರ್ ಕಚೇರಿ ಟ್ವೀಟ್ ಮಾಡಿದೆ.

ಘಟನೆಯಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿ ವಿವಾಹಿತರಾಗಿದ್ದು ಇವರಿಗೆ ಐವರು ಮಕ್ಕಳಿದ್ದಾರೆ ಎಂದು ಎನ್‌ಬಿಸಿ ವರದಿ ಮಾಡಿದೆ. ಘಟನೆ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ವ್ಯವಸ್ಥೆಗೊಳಿಸಲಾಗಿದ್ದು, ಹೆಚ್ಚುವರಿ ಭದ್ರತಾ ಸಿಬ್ಬಂದಿ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.

ಶಾಲೆಗಳನ್ನು ಭದ್ರತಾ ಕಾರಣಗಳಿಗಾಗಿ ಮುಚ್ಚಲಾಗಿದ್ದು, ಪರಿಸ್ಥಿತಿ ತಿಳಿಯಾದ ಬಳಿಕ ವಿದ್ಯಾರ್ಥಿಗಳನ್ನು ಶಾಲೆಗಳಿಂದ ವಾಪಾಸು ಕಳುಹಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಮೇಯರ್ ಟ್ವೀಟ್ ಮಾಡಿದ್ದಾರೆ. ಸಾವು ನೋವಿನ ಬಗ್ಗೆ ಅಧಿಕೃತ ವಿವರಗಳು ಲಭ್ಯವಾಗಬೇಕಿದೆ. ಹಿಂದಿನ ಗುಂಪುಹತ್ಯೆ ಪ್ರಕರಣವೊಂದರ ತನಿಖೆ ಸಂಬಂಧ ದಾಳಿಕೋರರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ಆರಂಭವಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News