ದೆಹಲಿ ಈಗ ಎಟಿಎಂ ವಂಚಕರ ರಾಜಧಾನಿ !

Update: 2019-12-11 04:16 GMT

ಹೊಸದಿಲ್ಲಿ: ದೇಶದಲ್ಲಿ ಇಂಟರ್‌ನೆಟ್ ಬ್ಯಾಂಕಿಂಗ್, ಎಟಿಎಂ ಹಾಗೂ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಂಚನೆ ಪ್ರಕರಣಗಳು ಕಳೆದ ಎರಡು ವರ್ಷಗಳಲ್ಲಿ ಶೇಕಡ 50ರಷ್ಟು ಹೆಚ್ಚಿದ್ದು, 52 ಸಾವಿರ ಪ್ರಕರಣಗಳು ವರದಿಯಾಗಿವೆ. ದೆಹಲಿಯಲ್ಲಿ ಗರಿಷ್ಠ ಎಟಿಎಂ ವಂಚನೆ ಪ್ರಕರಣಗಳು ಸಂಭವಿಸಿದ್ದು, ಒಟ್ಟು ಪ್ರಕರಣಗಳ ಪೈಕಿ ರಾಜಧಾನಿಯಲ್ಲೇ ಶೇಕಡ 27ರಷ್ಟು ಪ್ರಕರಣಗಳು ಸಂಭವಿಸಿವೆ.

ಆದರೆ ದೇಶದಲ್ಲಿ ಎಟಿಎಂ ವಂಚನೆ ಪ್ರಕರಣಗಳು ಕಡಿಮೆಯಾಗಿವೆ ಎಂದು ಸರ್ಕಾರ ಸಂಸತ್ತಿನಲ್ಲಿ ಉತ್ತರ ನೀಡಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಎಟಿಎಂ ವಂಚನೆ ಪ್ರಕರಣಗಳು ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ. ದೇಶಾದ್ಯಂತ 58 ಸಾವಿರ ಎಟಿಎಂಗಳನ್ನು ಹೊಂದಿರುವ ಭಾರತೀಯ ಸ್ಟೇಟ್‌ಬ್ಯಾಂಕ್‌ನಲ್ಲಿ, ಒಟ್ಟು ವಂಚನೆ ಪ್ರಕರಣಗಳ ಶೇಕಡ 25ರಷ್ಟು ಸಂಭವಿಸಿವೆ. ಪ್ರತಿ ಐದು ಇಂಥ ವಂಚನೆ ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ 2 ಲಕ್ಷಕ್ಕೂ ಅಧಿಕ ಮೊತ್ತ ಒಳಗೊಂಡಿದೆ.

ಎರಡನೇ ಸ್ಥಾನದಲ್ಲಿರುವ ಐಡಿಬಿಐ ಬ್ಯಾಂಕ್‌ನ 3700 ಎಟಿಎಂಗಳಲ್ಲಿ ಒಟ್ಟು 1800 ವಂಚನೆ ಪ್ರಕರಣಗಳು ವರದಿಯಾಗಿವೆ. ಶೇಕಡ 1.8ರಷ್ಟು ಎಟಿಎಂ ಸಂಖ್ಯೆಯನ್ನು ಹೊಂದಿರುವ ಬ್ಯಾಂಕಿನಲ್ಲಿ ಒಟ್ಟು ಶೇಕಡ 15ರಷ್ಟು ವಂಚನೆ ಪ್ರಕರಣಗಳು ವರದಿಯಾಗಿವೆ.

ಇಂಥ ವಂಚನೆಗೆ ಕಾರಣಗಳು ಏನು ಎನ್ನುವುದನ್ನು ಸರ್ಕಾರ ಬಹಿರಂಗಪಡಿಸಿಲ್ಲ. ಇಂಥ ವಂಚನೆ ತಡೆಯಲು ಇತರ ದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತಿರುವ ಹಿನ್ನೆಲೆಯಲ್ಲಿ ವಂಚನೆ ಪ್ರಯತ್ನಗಳು ಕೂಡಾ ಹೆಚ್ಚಿವೆ ಎಂದು ಬ್ಯಾಂಕ್‌ಗಳು ಹೇಳುತ್ತವೆ. ಯೂರೋಪ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಿದ ಹಿನ್ನೆಲೆಯಲ್ಲಿ ವಂಚಕರಿಗೆ ಅಲ್ಲಿ ವಂಚನೆ ಮಾಡುವುದು ಕಷ್ಟಸಾಧ್ಯವಾಗುತ್ತಿದೆ. ಆದ್ದರಿಂದ ವಿದೇಶಗಳಿಂದ ಇಂಥ ವಂಚಕರು ಭಾರತೀಯ ಎಟಿಎಂಗಳಲ್ಲಿ ವಂಚಿಸುತ್ತಿದ್ದಾರೆ ಎಂದು ಬ್ಯಾಂಕ್‌ಗಳು ಹೇಳಿವೆ.

ಇಂಥ ವಂಚನೆ ಪ್ರಕರಣಗಳನ್ನು ಪತ್ತೆ ಮಾಡಲು ಸಿಸಿ ಕ್ಯಾಮೆರಾ ಅಳವಡಿಸುವುದು ಸೇರಿದಂತೆ ಹಲವು ತಂತ್ರಗಳನ್ನು ನಡೆಸಲಾಗುತ್ತಿದೆ. ಸಾಮಾನ್ಯವಾಗಿ ಮೇಲ್‌ವೇರ್ ಬಳಕೆ ಮಾಡಿಕೊಂಡು ವಂಚಕರು ನೆಟ್ ಬ್ಯಾಂಕಿಂಗ್ ವ್ಯವಸ್ಥೆಯಡಿ ವಂಚಿಸುತ್ತಿದ್ದಾರೆ ಎಂದು ಬ್ಯಾಂಕಿಂಗ್ ತಜ್ಞರೊಬ್ಬರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News