ಶ್ರದ್ಧೆ, ಕಾಳಜಿಯಿಂದ ಚಿಕಿತ್ಸೆ ನೀಡಿ: ಸರಕಾರಿ ಆಸ್ಪತ್ರೆ ಸಿಬ್ಬಂದಿಗಳಿಗೆ ಯಡಿಯೂರಪ್ಪ ಮನವಿ

Update: 2019-12-11 16:08 GMT

ಬೆಂಗಳೂರು, ಡಿ.11: ಸರಕಾರಿ ಆಸ್ಪತ್ರೆ ಸಿಬ್ಬಂದಿ ವರ್ಗವು ಚಿಕಿತ್ಸೆಗಾಗಿ ಬರುವವರಿಗೆ ಕಿರುಕುಳ ಕೊಡದೇ ಸೂಕ್ತ ಚಿಕಿತ್ಸೆ ಸೌಲಭ್ಯ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಹೇಳಿದರು.

ಬುಧವಾರ ಇಲ್ಲಿನ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ವಿಕ್ಟೋರಿಯ ಆಸ್ಪತ್ರೆಯ ಆವರಣದಲ್ಲಿ ಒಂದು ಸಾವಿರ ಹಾಸಿಗೆ ಸಾಮರ್ಥ್ಯದ ಒಳರೋಗಿ ಕಟ್ಟಡದ ಶಂಕು ಸ್ಥಾಪನೆ ಹಾಗೂ ವಿವಿಧ ನೂತನ ಘಟಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರಕಾರಿ ಆಸ್ಪತ್ರೆಗಳಿಗೆ ಬರುವ ಅರ್ಧದಷ್ಟು ಮಂದಿಗೆ ಸೂಕ್ತ ಚಿಕಿತ್ಸೆ ಸೌಲಭ್ಯಗಳನ್ನು ನೀಡದೇ ಅಲೆದಾಡಿಸುತ್ತಾರೆ ಎಂಬ ಆರೋಪವಿದ್ದು, ಇನ್ನು ಮುಂದಾದರೂ ಸರಕಾರಿ ಆಸ್ಪತ್ರೆ ಸಿಬ್ಬಂದಿಗಳು ಶ್ರದ್ಧೆ ಹಾಗೂ ಕಾಳಜಿಯಿಂದ ಚಿಕಿತ್ಸೆ ನೀಡಬೇಕು ಎಂದರು. ಬಹುತೇಕ ಬಡ ಮತ್ತು ಮಧ್ಯಮ ವರ್ಗವು ಸರಕಾರಿ ಆಸ್ಪತ್ರೆಗಳನ್ನು ಅವಲಂಬಿಸಿದ್ದು, ಅವರಿಗೆ ಗುಣಮಟ್ಟದ ಚಿಕಿತ್ಸೆ ಅವಶ್ಯಕತೆ ಇದೆ. ಆದರೆ, ಸರಕಾರಿ ಆಸ್ಪತ್ರೆಗೆ ಬಂದು ಹೋಗುವವರಿಗೆ ಪ್ರಶ್ನೆ ಮಾಡಿದಾಗ ನೂರಕ್ಕೆ ಐವತ್ತು ಮಂದಿ ಒಂದಲ್ಲ ಒಂದು ರೀತಿ ಕಿರುಕುಳ ಅನುಭವಿಸಿ, ಸೌಲಭ್ಯ ಸಿಗದಿರುವ ಕುರಿತು ದೂರುತ್ತಾರೆ. ಒಟ್ಟಾರೆ ಸರಕಾರಿ ಆಸ್ಪತ್ರೆಯಲ್ಲಿ ಹಣ ಇಲ್ಲದೇ ಏನು ಮಾಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿಗೆ ಬಂದಿದ್ದು, ಈ ವಿದ್ಯಮಾನ ಯಾರಿಗೂ ಶೋಭೆ ತರುವುದಿಲ್ಲ ಎಂದು ಯಡಿಯೂರಪ್ಪ ನುಡಿದರು.

ಬೆಂಗಳೂರಿನ ವಿಕ್ಟೋರಿಯಾ ರಾಜ್ಯದ ಹಳೆ ಆಸ್ಪತ್ರೆ ಎಂಬ ಖ್ಯಾತಿ ಪಡೆದಿದ್ದು, ಜತೆಗೆ ಆಧುನಿಕ ಕ್ಯಾನ್ಸರ್ ಚಿಕಿತ್ಸಾ ಘಟಕ, ಚರ್ಮ ಕಸಿ ಬ್ಯಾಂಕ್ ಸ್ಥಾಪಿಸಲಾಗಿದೆ. ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಲ್ಯಾಸಿಕ್ ಸರ್ಜರಿಯಂತಹ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯ ಲಭ್ಯವಿದೆ. ಇನ್ನಷ್ಟು ರೋಗಿಗಳಿಗೆ ಅನುಕೂಲವಾಗಲಿ ಎಂದು 68.53 ಕೋಟಿ ರೂ.ವೆಚ್ಚದಲ್ಲಿ ಒಂದು ಸಾವಿರ ಹಾಸಿಗೆಯುಳ್ಳ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದ್ದು, 2021ಕ್ಕೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ಅವರು ಭರವಸೆ ನೀಡಿದರು.

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮಾತನಾಡಿ, ನಗರದಲ್ಲಿ ಒಂದು ಕೋಟಿಗೂ ಹೆಚ್ಚು ಮಂದಿ ವಾಸಿಸುತ್ತಿದ್ದು, ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಮೂತಭೂತ ಸೌಕರ್ಯದ ಅಗತ್ಯತೆ ಇದೆ. ಹೀಗಾಗಿಯೇ ವಿಕ್ಟೋರಿಯಾ ಆವರಣದಲ್ಲಿ ಒಂದು ಸಾವಿರ ಹಾಸಿಗೆಗಳನ್ನು ಕಟ್ಟಡದ ಶಂಕುಸ್ಥಾಪನೆ ಮಾಡಲಾಗಿದೆ. ಕ್ರೀಡಾ ವೈದ್ಯಕೀಯ ವಿಧಾನ ವಿಭಾಗ ಸೇರಿದಂತೆ ವಿವಿಧ ರೀತಿಯ ಹೊಸ ವಿಭಾಗಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ಪ್ರಮುಖ ಮೂಲಭೂತ ಸೌಕರ್ಯಗಳಲ್ಲಿ ಆರೋಗ್ಯ ಕ್ಷೇತ್ರವೂ ಒಂದಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಕೂಡಲೇ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಎರಡೂವರೆ ಸಾವಿರ ಕೋಟಿ ಮಂಜೂರು ಮಾಡಿದ್ದಾರೆ. ರಾಜ್ಯದಲ್ಲಿ ನಾಲ್ಕು ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡಿದ್ದಾರೆ. ಜತೆಗೆ ಕಾರವಾರ, ಮೈಸೂರು, ಕೊಡಗು, ತುಮಕೂರು, ರಾಯಚೂರು ಜಿಲ್ಲಾಸ್ಪತ್ರೆಗಳಿಗೆ ಸಾಕಷ್ಟು ಅನುದಾನ ನೀಡುವ ಮೂಲಕ ಉನ್ನತೀಕರಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಝಮೀರ್ ಅಹ್ಮದ್ ಖಾನ್, ಉದಯ್ ಗರುಡಾಚಾರ್, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ವಿಧಾನಪರಿಷತ್ ಸದಸ್ಯ ಲೇಹರ್ ಸಿಂಗ್ ಸಿರೋಯಾ, ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಝಾವೇದ್ ಅಖ್ತರ್, ರಾಜೀವ್ ಗಾಂಧಿ ವಿವಿ ಕುಲಪತಿ ಡಾ.ಸಚ್ಚಿದಾನಂದ ಸೇರಿದಂತೆ ಪ್ರಮುಖರಿದ್ದರು.

ಕಾರ್ಯಕ್ರಮ ಬಹಿಷ್ಕರಿಸಿದ ಝಮೀರ್?

ವಿಕ್ಟೋರಿಯ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ, ಸರಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಚಾಮರಾಜಪೇಟೆ ಶಾಸಕ ಝಮೀರ್ ಅಹ್ಮದ್ ಖಾನ್ ಕಾರ್ಯಕ್ರಮ ಬಹಿಷ್ಕರಿಸಿದರು ಎನ್ನಲಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದರು. ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ಆದರೆ, ಝಮೀರ್ ಅಹ್ಮದ್ ಖಾನ್ ಅವರಿಗೆ ವೇದಿಕೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಮಾಡಿಲ್ಲ, ಯಾವುದೇ ಜಾಹೀರಾತು ಫಲಕಗಳಲ್ಲಿ ತಮ್ಮ ಭಾವಚಿತ್ರ ಹಾಕಿರಲಿಲ್ಲ ಎಂದು ಸಿಟ್ಟಾಗಿ, ಝಮೀರ್ ಅಹ್ಮದ್ ಖಾನ್ ಹೊರ ನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News