ನಕಲಿ ಅಂಕಪಟ್ಟಿ ನೀಡಿ ವಂಚಿಸುತ್ತಿದ್ದ ವ್ಯಕ್ತಿಯ ಬಂಧನ

Update: 2019-12-11 12:40 GMT

ಬೆಂಗಳೂರು, ಡಿ.11: ಖಾಸಗಿ ಸಂಸ್ಥೆಗಳ ಪ್ರತಿಷ್ಠಿತ ಮುಕ್ತ ವಿಶ್ವವಿದ್ಯಾನಿಲಯಗಳಿಗೆ ಸಂಬಂಧಿಸಿದ ನಕಲಿ ಅಂಕಪಟ್ಟಿಗಳನ್ನು ಅಸಲಿ ಎಂದು ವಂಚಿಸುತ್ತಿದ್ದ ಆರೋಪ ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಿ, ಹಲವು ನಕಲಿ ಅಂಕಪಟ್ಟಿಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

ನಗರದ ರಾಜ್‌ಕುಮಾರ್ ರಸ್ತೆಯ ಬ್ರಿಗೇಡ್ ಗೇಟ್ ವೇ ನಿವಾಸಿ ಶ್ರೀನಿವಾಸ ರೆಡ್ಡಿ (42) ಬಂಧಿತ ಆರೋಪಿ ಎಂದು ಸಿಸಿಬಿ ತಿಳಿಸಿದೆ.

ಆರೋಪಿಯು ಮಹಾಲಕ್ಷ್ಮೀಪುರಂನ 5ನೆ ಮುಖ್ಯರಸ್ತೆಯಲ್ಲಿ ವಿಎಸ್‌ಎಸ್ ಇನ್ಸ್‌ಸ್ಟಿಟ್ಯೂಟ್ ಆಫ್ ಎಜುಕೇಷನಲ್ ರಿಸರ್ಚ್ ಮತ್ತು ಶ್ರೀ ವೆಂಕಟೇಶ್ವರ ಇಂಟರ್ ನ್ಯಾಷನಲ್ ಎಜುಕೇಷನಲ್ ಸೊಸೈಟಿ ತೆರೆದಿದ್ದನು. ಸೊಸೈಟಿಯಿಂದ ಪ್ರತಿಷ್ಠಿತ ಮುಕ್ತ ವಿಶ್ವವಿದ್ಯಾನಿಲಯಗಳಾದ ದೆಹಲಿ ಅಕಾಡೆಮಿ ಕೌನ್ಸಿಲ್ ಫಾರ್ ಹೈಯರ್ ಎಜುಕೇಷನ್, ಮಾನವ್ ಭಾರತಿ ಯುನಿವರ್ಸಿಟಿ, ಸೋಲನ್ ಹಿಮಾಚಲ ಪ್ರದೇಶ ಸೇರಿದಂತೆ ಅನೇಕ ವಿಶ್ವವಿದ್ಯಾನಿಲಯಗಳಿಂದ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್ಸಿ, ಎಂಎ, ಎಂಕಾಂ, ಎಂಟೆಕ್, ಡಿಫಾರ್ಮ, ಬಿಫಾರ್ಮ, ಸೇರಿ ಇತರೆ ದೂರಶಿಕ್ಷಣ ಮೂಲಕ ಪರೀಕ್ಷೆ ಕೊಡಿಸುವುದಾಗಿ ಆರೋಪಿಯು ನಂಬಿಸುತ್ತಿದ್ದ ಎನ್ನಲಾಗಿದ್ದು, ಕೋರ್ಸ್ ಪಡೆಯಲು ಬರುವ ಅಭ್ಯರ್ಥಿಗಳಿಗೆ ವಿವಿಧ ಕೋರ್ಸ್‌ಗಳಿಗೆ 40 ಸಾವಿರದಿಂದ 2 ಲಕ್ಷದವರೆಗೆ ಹಣ ಪಡೆದು ಪರೀಕ್ಷೆಯನ್ನು ತನ್ನ ಕಚೇರಿಯಲ್ಲಿ ಬರೆಸಿ ನಂತರ ಅವರಿಗೆ ಅಸಲಿ ಎಂದು ನಕಲಿ ಅಂಕಪಟ್ಟಿಗಳನ್ನು ನೀಡಿ ಮೋಸ ಮಾಡುತ್ತಿದ್ದ ಎಂದು ಆರೋಪಿಸಲಾಗಿದ್ದು, ಮೋಸ ಹೋದ ಅಭ್ಯರ್ಥಿಯೊಬ್ಬ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಈ ಸಂಬಂಧ ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಬಂಧಿತನಿಂದ ಮುಕ್ತ ವಿಶ್ವ ವಿದ್ಯಾನಿಲಯಗಳ ನಕಲಿ ಅಂಕಪಟ್ಟಿಗಳು ರಬ್ಬರ್ ಸ್ಟಾಂಪ್, ಕಂಪ್ಯೂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News