ಬೆಂಗಳೂರು: ಪೌರತ್ವ ತಿದ್ದುಪಡಿ ವಿಧೇಯಕ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

Update: 2019-12-19 04:59 GMT

ಬೆಂಗಳೂರು, ಡಿ.11: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಲೋಕಸಭೆಯಲ್ಲಿ ಅಂಗೀಕರಿಸಿರುವ ‘ಭಾರತೀಯ ಪೌರತ್ವ ತಿದ್ದುಪಡಿ ವಿಧೇಯಕ’ವನ್ನು ವಿರೋಧಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪೌರತ್ವ ತಿದ್ದುಪಡಿ ಮಸೂದೆ ಕಾನೂನು ವಿರೋಧಿ, ಸಂವಿಧಾನ ವಿರೋಧಿಯಾಗಿದೆ. ಎಲ್ಲ ಜಾತಿ, ಧರ್ಮಿಯರಿಗೂ ಇದು ನ್ಯಾಯ ನೀಡುವುದಿಲ್ಲ. ಮತ ಧೃವೀಕರಣ ದುರುದ್ದೇಶದ ಈ ಮಸೂದೆ ಮುಸ್ಲಿಮರನ್ನು ದೇಶದಿಂದ ಹೊರ ಹಾಕುವ ಹುನ್ನಾರದಿಂದ ಕೂಡಿದೆ. ಸಂವಿಧಾನದ ಮೇಲೆ ಅಕ್ರಮಣ ಮಾಡುವಂತಹ ಕೆಲಸ ಇದಾಗಿದೆ ಎಂದು ಈಶ್ವರ್ ಖಂಡ್ರೆ ಕಿಡಿಕಾರಿದರು.

ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ‘ಜಾತ್ಯತೀತ ಪರಂಪರೆ’ಯ ಹೆಗ್ಗಳಿಕೆ ಇದೆ. ಇದನ್ನು ಈ ತಿದ್ದುಪಡಿ ಮಸೂದೆ ಹಾಳು ಮಾಡುತ್ತಿದೆ. ಇದರಿಂದ ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೂ ತೊಂದರೆಯಾಗಲಿದೆ. ಆದರೂ, ನರೇಂದ್ರ ಮೋದಿ ಸರಕಾರ ತಪ್ಪು ವಿಚಾರಗಳನ್ನು ಹೇಳುವ ಮೂಲಕ ಜನರ ದಾರಿ ತಪ್ಪಿಸುತ್ತಿದೆ ಎಂದು ಅವರು ಆರೋಪಿಸಿದರು.

ಸಂವಿಧಾನ ವಿರೋಧಿ ತಿದ್ದುಪಡಿಯನ್ನು ವಿರೋಧಿಸುತ್ತೇವೆ. ರಾಜ್ಯಸಭೆಯ ಜಾತ್ಯತೀತವಾದಿಗಳು ಈ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡಬಾರದು. ಸುಪ್ರೀಂಕೋರ್ಟ್‌ನಲ್ಲೂ ಇದನ್ನು ಪ್ರಶ್ನಿಸಲಾಗುವುದು. ಸಾಂಕೇತಿಕವಾಗಿ ಆರಂಭವಾಗಿರುವ ಈ ಹೋರಾಟವನ್ನು, ತಿದ್ದುಪಡಿ ಹಿಂಪಡೆಯುವವರೆಗೂ ಮುಂದುವರೆಸಲಾಗುವುದು ಎಂದು ಈಶ್ವರ್ ಖಂಡ್ರೆ ಎಚ್ಚರಿಕೆ ನೀಡಿದರು.

ಭಾರತೀಯ ಪೌರತ್ವ ಪಡೆಯಲು ಇರುವ ನಿಯಮಗಳ ಬಗ್ಗೆ ಸಂವಿಧಾನದಲ್ಲಿ ಹೇಳಲಾಗಿದೆ. ಇದನ್ನು ಮೀರಿ ನರೇಂದ್ರ ಮೋದಿ ಸರಕಾರ ಪೌರತ್ವ ತಿದ್ದುಪಡಿ ಮಸೂದೆ ಜಾರಿ ಮಾಡಲು ಹೊರಟಿದೆ. ಇಂತಹ ಸಂವಿಧಾನ ವಿರೋಧಿ ಮಸೂದೆಯನ್ನು ಜಾರಿ ಮಾಡಬಾರದು ಎಂದು ಕೆಪಿಸಿಸಿ ಉಪಾಧ್ಯಕ್ಷ ಡಾ.ಬಿ.ಎಲ್.ಶಂಕರ್ ಆಗ್ರಹಿಸಿದರು.

ನರೇಂದ್ರ ಮೋದಿ ಹಾಗೂ ಅಮಿತ್ ಶಾ ಆಧುನಿಕ ಭಸ್ಮಾಸುರರು. ಇವರು ಕೈ ಹಾಕಿದ್ದೆಲ್ಲವೂ ಹಾಳಾಗಿವೆ. ಆರ್.ಬಿ.ಐ, ಚುನಾವಣಾ ಆಯೋಗ, ಸ್ವಾಯತ್ತ ಸಂಸ್ಥೆಗಳು, ಸರಕಾರಿ ಸ್ವಾಮ್ಯದ ಸಂಸ್ಥೆಗಳು, ಈಗ ಭಾರತದ ಪೌರತ್ವ ಕಾಯ್ದೆ. ಈ ತಿದ್ದುಪಡಿ ಮಸೂದೆ ಜಾರಿಯ ಮೂಲಕ ದೇಶವನ್ನು ಒಡೆದು ಆಳಲು ಹೊರಟಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದರು.

ಭಾರತ ಸರ್ವ ಧರ್ಮಗಳ ಶಾಂತಿಯ ತೋಟ. ಆದರೆ, ನರೇಂದ್ರ ಮೋದಿ ಸರಕಾರ ನಡೆಸುತ್ತಿರುವ ಅನಾಚಾರಗಳಿಂದ ದೇಶದ ಜನರ ನೆಮ್ಮದಿ ಹಾಳಾಗಿದೆ. ಪೌರತ್ವ ತಿದ್ದುಪಡಿ ಮಸೂದೆ ಮೂಲಕ ದೇಶದಲ್ಲಿರುವ ಎಲ್ಲ ಜಾತಿ, ಧರ್ಮಗಳಲ್ಲಿನ ಸೌಹಾರ್ದತೆಯನ್ನು ಒಡೆಯಲಾಗುತ್ತಿದೆ. ಈ ತಿದ್ದುಪಡಿ ಸಂವಿಧಾನ ವಿರೋಧಿ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಪುಷ್ಪಾ ಅಮರ್‌ನಾಥ್ ದೂರಿದರು.

ಪ್ರತಿಭಟನೆಯಲ್ಲಿ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News