ಬೆಂಗಳೂರು: ಮದುವೆ ನಿಲ್ಲಿಸಲು ‘ಏಡ್ಸ್’ ಇದೆ ಎಂದ ವರನ ಬಂಧನ

Update: 2019-12-11 14:20 GMT

ಬೆಂಗಳೂರು, ಡಿ.11: ಒಪ್ಪಿಗೆ ಇಲ್ಲದ ಮದುವೆಯನ್ನು ನಿಲ್ಲಿಸಲು ಏಡ್ಸ್(ಎಚ್‌ಐವಿ) ಸೋಂಕಿದೆ ಎಂದಿದ್ದ ವರನನ್ನು ಇಲ್ಲಿನ ವಿಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಗರದ ಕಿರಣ್ ಕುಮಾರ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.

ಡಿ.1 ರಂದು ಯುವತಿಯೊಂದಿಗೆ ಆರೋಪಿ ಕಿರಣ್ ಕುಮಾರ್ ಮದುವೆ ನಿರ್ಧರಿಸಲಾಗಿತ್ತು. ಆದರೆ, ಮದುವೆಗೆ 4 ದಿನ ಇರುವಾಗ ಕಿರಣ್ ಕುಮಾರ್, ನಾಟಕೀಯವಾಗಿ ತನಗೆ ಎಚ್‌ಐವಿ ಸೋಂಕಿದೆ ಎಂದು ಸುಳ್ಳು ಹೇಳಿ ಮದುವೆ ನಿಲ್ಲಿಸುವಂತೆ ಹೇಳಿದ್ದ ಎನ್ನಲಾಗಿದೆ.

ಯುವತಿಯ ಮನೆಯವರು ಮದುವೆಗೆ 15 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ದೂರಿನನ್ವಯ, ವಿಜಯನಗರ ಪೊಲೀಸರು, ಆಸ್ಪತ್ರೆ ವೈದ್ಯರಿಂದ ಕಿರಣ್‌ನನ್ನು ಪರೀಕ್ಷೆಗೆ ಒಳಪಡಿಸಿದಾಗ ಎಚ್‌ಐವಿ ಸೋಂಕು ಇಲ್ಲ ಎಂದು ವರದಿ ಬಂದಿದೆ. ಈ ಹಿನ್ನೆಲೆ ಯುವತಿಗೆ ಮೋಸ ಮಾಡಿದ ಆರೋಪದ ಮೇಲೆ ವಿಜಯನಗರ ಠಾಣಾ ಪೊಲೀಸರು ಆರೋಪಿ ಕಿರಣ್ ಕುಮಾರ್‌ನನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News