ಸರಿಯಲ್ಲದ ನ್ಯಾಯಕ್ಕಾಗಿ ಆಗ್ರಹ?

Update: 2019-12-11 18:32 GMT

ಏನಾದರೂ ಒಂದು ಹೀನಾಯವಾದದ್ದು ಸಂಭವಿಸುವ ತನಕ ನಾವೆಲ್ಲರೂ ಪ್ರೇಕ್ಷಕರ ತರಹ ಬದಿಗೆ ನಿಂತು ನೋಡುತ್ತಿರುತ್ತೇವೆ. ಆದರೆ ಅಂಥದ್ದೇನಾದರೂ ಸಂಭವಿಸಿದ ಕೂಡಲೇ ರಾತ್ರೋರಾತ್ರಿ ನ್ಯಾಯವನ್ನು ಆಗ್ರಹಿಸುವ ಯೋಧರಾಗಿ ಬಿಡುತ್ತೇವೆ. ಇಂತಹ ಅನ್ಯಾಯಗಳ ವಿರುದ್ಧ ಇದ್ದೇವೆಂದು ನಮ್ಮ ಧ್ವನಿಯನ್ನು ಸಾಧ್ಯವಿರುವಷ್ಟು ಗಟ್ಟಿ ಧ್ವನಿಯಲ್ಲಿ ಅರಚುವ ತುರ್ತಿನಲ್ಲಿ ನಮ್ಮ ಈ ಸ್ವಪ್ರತಿಷ್ಠ ಆಕ್ರೋಶಗಳು ಹತ್ತಿಕ್ಕುವ ಇತರ ಧ್ವನಿಗಳ ಬಗ್ಗೆ ಎಚ್ಚರಗೇಡಿಗಳಾಗಿಬಿಡುತ್ತೇವೆ. ದಿಲ್ಲಿಯಲ್ಲಿ 2012ರಲ್ಲಿ ಸಂಭವಿಸಿದ ನಿರ್ಭಯಾ ಪ್ರಕರಣದ ನಂತರದಲ್ಲಿ ಅದರಷ್ಟೇ ಭೀಕರವಾಗಿ ನಡೆದ ಹೈದರಾಬಾದ್‌ನ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಇಡೀ ದೇಶವೇ ತಲ್ಲಣಿಸುವಂತೆ ಮಾಡಿದೆ. ಆ ಎಲ್ಲಾ ಆರೋಪಿಗಳನ್ನು ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಂದುಹಾಕಲಾಗಿದೆ. ಈ ಮಧ್ಯೆ 2013ರಲ್ಲಿ ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆ ಅರ್ಥಾತ್ ನಿರ್ಭಯಾ ಕಾಯ್ದೆಯನ್ನು ಜಾರಿ ಮಾಡಲಾಗಿದ್ದು ಪೊಲೀಸ್ ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ. ಲೈಂಗಿಕ ಕಿರುಕುಳಕ್ಕೆ ತುತ್ತಾದವರಿಗೆ ತ್ವರಿತವಾಗಿ ಕಾನೂನು ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಜಸ್ಟೀಸ್ ವರ್ಮಾ ಸಮಿತಿಯು ಹಲವಾರು ಶಿಫಾರಸುಗಳನ್ನು ಮಾಡಿತ್ತು. ಆದರೂ ನಂತರದಲ್ಲಿ ಇನ್ನೂ ಹೆಚ್ಚು ಅತ್ಯಾಚಾರಗಳು ನಡೆದಿವೆ. ಈ ಬೀಭತ್ಸಗಳು ನಡೆದ ಪ್ರದೇಶಗಳ ಹೆಸರುಗಳು ಮೈಲಿಗಲ್ಲುಗಳಂತೆ ನಮ್ಮ ನಾಗರಿಕ ಸಂವೇದನೆಗಳನ್ನು ಬಾಧಿಸುತ್ತವೆ: ದಿಲ್ಲಿ, ಉನ್ನಾವೊ, ಕಥುವಾ ಮತ್ತು ಇದೀಗ ಹೈದರಾಬಾದ್. ಆದರೆ ನಮ್ಮ ಸಂವೇದನೆಗಳು ಬಲಾತ್ಕಾರಕ್ಕೆ ಗುರಿಯಾಗಿ ಕ್ರೂರಾತಿಕ್ರೂರವಾಗಿ ಕೊಲೆಯಾದ ಪ್ರಕರಣಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಹೀಗಾಗಿ ಬಲಾತ್ಕಾರಿಗಳು ಒಂದು ಗಡಿಯನ್ನು ದಾಟದ ಹೊರತು ನಮ್ಮ ಸಾಮೂಹಿಕ ಮನಸ್ಸಾಕ್ಷಿ ಪ್ರಕರಣಗಳನ್ನು ಖಂಡನಾರ್ಹವೆಂದು ಭಾವಿಸುವುದಿಲ್ಲ. ಈ ಗಡಿಯನ್ನು ದಾಟದ ಅಪರಾಧಗಳ ಬಗ್ಗೆ ಬಹಳ ಬೇಗ ಹಲವು ಕುಂಟು ನೆಪಗಳನ್ನು ಹುಡುಕುತ್ತೇವೆ. ಈ ಸಾಮೂಹಿಕ ಮನಸ್ಸಾಕ್ಷಿ ವಿಧಿಸಿದ ಗಡಿಯನ್ನು ದಾಟಿದ ಹಾಗೂ ಇನ್ಯಾವುದೇ ನೆಪಗಳನ್ನು ಹೇಳಿಕೊಳ್ಳಲು ಸಾಧ್ಯವೇ ಇಲ್ಲದ ಸಂದರ್ಭದಲ್ಲಿ ಮಾತ್ರ ನಾವು ಅನ್ಯಾಯಗಳ ಬಗ್ಗೆ ಹುಯಿಲಿಡುತ್ತೇವೆ. ಆದ್ದರಿಂದಲೇ ಸಾಮಾಜಿಕ ಮಾಧ್ಯಮಗಳಲ್ಲಿ, ಪ್ರಧಾನ ಧಾರೆ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯಗಳಲ್ಲಿ ಈ ಪ್ರಕರಣಗಳು ಅಪರೂಪದ ವಿಕೃತಿಗಳೆಂಬ ಭಾಷೆಯಲ್ಲಿ ಚರ್ಚಿತವಾಗುವುದರಲ್ಲಿ ಆಶ್ಚರ್ಯವಿಲ್ಲ. ಮಾಧ್ಯಮಗಳು ಇಂತಹ ಪ್ರಕರಣಗಳನ್ನು ರೋಚಕಗೊಳಿಸುವುದರ ಮೂಲಕ ಸಾರ್ವಜನಿಕರ ಇಣುಕು ಧೋರಣೆಗಳು ಉತ್ತೇಜಿಸುತ್ತವೆ. ಮತ್ತವು ಇಂತಹ ವರದಿಗಳ ಮೂಲಕ ಟಿಆರ್‌ಪಿ ಮತ್ತು ನೋಡುಗರ ಸಂಖ್ಯೆಯ ಹೆಚ್ಚಳದಂತಹ ವ್ಯಾಪಾರಿ ವ್ಯವಸ್ಥೆಗೆ ಪೂರಕವಾಗಿ ಕೆಲಸ ಮಾಡುತ್ತವೆ. ಮತ್ತೊಂದು ರೀತಿಯಲ್ಲಿ ಇವು ಸಾರ್ವಜನಿಕರಲ್ಲಿ ಅಂತರ್ಗತವಾಗಿರುವ ಪುರುಷಾಧಿಪತ್ಯ ಧೋರಣೆಗಳಿಗೂ ಹಾಗೂ ಬಲಾತ್ಕಾರ ಸಂಸ್ಕೃತಿಗೂ ಉತ್ತೇಜನವನ್ನು ನೀಡುತ್ತವೆ. ಅದೇ ಮುಂದೆ ಇಂತಹ ಅಪರಾಧಗಳಿಗೆ ಪೂರಕವಾಗಿರುವ ಮನಸ್ಸತ್ವವನ್ನೂ ರೂಪಿಸುತ್ತದೆ. ಸಾರಾಂಶದಲ್ಲಿ ಇವೆಲ್ಲವೂ ಆಯಾ ವ್ಯಕ್ತಿಗಳನ್ನು ದೂಷಿಸುವುದರಲ್ಲಿ ಪರ್ಯಾವಸನಗೊಳ್ಳುತ್ತದೆಯೇ ವಿನಾ ಒಂದು ವ್ಯವಸ್ಥೆಯಾಗಿ ಸಮಾಜದ ಹೊಣೆಗಾರಿಕೆಯ ಬಗ್ಗೆ ಯಾವ ಚರ್ಚೆಯನ್ನೂ ಪ್ರೇರೇಪಿಸುವುದಿಲ್ಲ. ಹೈದರಾಬಾದ್‌ನ ಆ ಪಶುವೈದ್ಯೆಯ ಸುಟ್ಟ ದೇಹ ಪತ್ತೆಯಾಗಿದ್ದಂದಿನಿಂದ ರಾಜಕಾರಣಿಗಳಿಂದ ಹಿಡಿದು ಸಿನೆಮಾ ತಾರೆಯರವರೆಗೆ ಎಲ್ಲರೂ ದಿಗ್ಭ್ರಾಂತಿ ಮತ್ತು ದಿಗಿಲನ್ನು ತೋರುತ್ತಿದ್ದಾರೆ. ಎಲ್ಲಕ್ಕಿಂತ ಗಮನಾರ್ಹವಾಗಿ ತೆಲಂಗಾಣದ ಗೃಹಮಂತ್ರಿಗಳು ಆಕೆಯು ತನ್ನ ತಂಗಿಗೆ ಕರೆ ಮಾಡುವ ಬದಲು ಪೊಲೀಸರಿಗೆ ಕರೆ ಮಾಡಿದರೆ ಜೀವ ಉಳಿಯುತ್ತಿತ್ತು ಎಂದು ಹೇಳಿದ್ದಾರೆ. ಈ ಬಗೆಯ ಹೇಳಿಕೆಗಳು ಲೈಂಗಿಕ ಕಿರುಕುಳದ ಸಮಸ್ಯೆಯ ಸಾರವನ್ನು ಬದಿಗೆ ಸರಿಸಿ ‘‘ಹೆಣ್ಣು ಮಕ್ಕಳು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು’’ ಎಂದು ಹೇಳುತ್ತಾ ಮತ್ತೊಮ್ಮೆ ಸಂತ್ರಸ್ತರ ಮೇಲೆ ಹೊಣೆಗಾರಿಕೆಯನ್ನು ಜಾರಿಸುವ ಪ್ರಯತ್ನಗಳೇ ಆಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡ ನಂತರವೂ ಕೆಲವು ಬಲಪಂಥೀಯ ಶಕ್ತಿಗಳು ಆರೋಪಿಗಳಲ್ಲಿ ಒಬ್ಬನು ಮುಸ್ಲಿಮನಾಗಿದ್ದ ಸಂಗತಿಯ ಮೇಲೆ ಹೆಚ್ಚು ಒತ್ತುಕೊಡುತ್ತಾ ಇಡೀ ಸಮುದಾಯವನ್ನು ಹೀಗೆಳೆಯಲು ಪ್ರಯತ್ನಿಸಿದರು. ಇಡೀ ಪ್ರಕರಣವನ್ನು ಈ ಬಗೆಯ ಚರ್ಚೆಗಳು ಆಕ್ರಮಿಸಿಕೊಳ್ಳುವುದರಿಂದ ಹೆಣ್ಣಿನ ಧ್ವನಿ ಮೂಲೆಗುಂಪಾಗುತ್ತದೆ ಹಾಗೂ ಒಣ ಮಾತುಗಳ ಆಡಂಬರ ವಿಜೃಂಭಿಸುತ್ತವೆ. ನ್ಯಾಯ ಬೇಕೆಂದು ಅರಚುತ್ತಿರುವ ಧ್ವನಿಗಳಲ್ಲಿ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂಬ ಧ್ವನಿ ಎಲ್ಲಕ್ಕಿಂತ ದೊಡ್ಡದಾಗಿತ್ತು. ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಆಗ್ರಹಿಸುತ್ತಿದ್ದವರಲ್ಲಿ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆಯೂ ಸೇರಿದ್ದರು. ಈ ಬಗೆಯ ಪ್ರಕರಣಗಳು ಸಂಭವಿಸಿದಾಗಲೆಲ್ಲಾ ಮರಣದಂಡನೆಯು ಇಂತಹ ಅಪರಾಧಗಳನ್ನು ತಡೆಗಟ್ಟುವಲ್ಲಿ ಒಂದು ಪರಿಣಾಮಕಾರಿ ತಡೆಯಾಗಿ ಕೆಲಸ ಮಾಡುತ್ತದೆಂದು ವಾದಿಸಲಾಗುತ್ತದೆ. ಬಲಾತ್ಕಾರದ ಪ್ರಕರಣದಲ್ಲಿ ಮರಣದಂಡನೆ ವಿಧಿಸಬೇಕೆಂದು ವಾದಿಸುವುದೂ ನಮ್ಮನ್ನು ನಾವು ಹೊಣೆಗಾರಿಕೆಯಿಂದ ಮುಕ್ತಗೊಳಿಸಿಕೊಳ್ಳುವ ಪ್ರಯತ್ನವೇ ಆಗಿದೆ. ಏಕೆಂದರೆ ಕಾನೂನಾತ್ಮಕವಾಗಿ ನೋಡಿದರೆ ‘ಅಪರೂಪದಲ್ಲಿ ಅಪರೂಪ’ದ ಪ್ರಕರಣಗಳಲ್ಲಿ ಮಾತ್ರ ಮರಣದಂಡನೆಯನ್ನು ವಿಧಿಸಬಹುದಾಗಿದೆ.

ಯಾವ ಬಲಾತ್ಕಾರಗಳು ಮರಣದಂಡನೆಗೆ ಅರ್ಹ ಮತ್ತು ಯಾವುದು ಅಲ್ಲ ಎಂಬುದನ್ನು ಹೇಗೆ ವರ್ಗೀಕರಿಸಲು ಸಾಧ್ಯ? ಮತ್ತೊಮ್ಮೆ ನಾವು ಬಲಾತ್ಕಾರಿಗಳು ದಾಟಬಾರದ ಗಡಿಗಳನ್ನೇ ಅವಲಂಬಿಸುತ್ತಿದ್ದೇವೆ. ಹೀಗಾಗಿ ಸಾರಾಂಶದಲ್ಲಿ ಒಂದು ಗಡಿಯನ್ನು ದಾಟದಂತೆ ಬಲಾತ್ಕಾರ ಅಥವಾ ಲೈಂಗಿಕ ಹಿಂಸಾಚಾರಗಳು ನಡೆದಲ್ಲಿ ಒಂದು ಸಮಾಜವಾಗಿ ನಮಗೆ ಆಕ್ಷೇಪಣೆಯಿಲ್ಲ ಎಂದಷ್ಟೇ ಹೇಳುತ್ತಿದ್ದೇವೆ. ಮರಣದಂಡನೆಯ ಬಗ್ಗೆ ದೊಡ್ಡ ಧ್ವನಿಯಲ್ಲಿ ನಡೆಯುತ್ತಿರುವ ಅರಚಾಟವು ನಾವು ಎಷ್ಟು ಸುಲಭವಾಗಿ ಜನರನ್ನು ಅಮಾನವೀಕರಿಸಿಬಿಡುತ್ತೇವೆ ಎಂಬುದನ್ನೇ ಸೂಚಿಸುತ್ತದೆ. ಆರೋಪಿಗಳನ್ನು ರಕ್ಕಸರೆಂದು ಕರೆಯುತ್ತಾ ಹಾಗೂ ನಮ್ಮನ್ನು ಅವರಿಂದ ಬೇರ್ಪಡಿಸಿಕೊಳ್ಳುತ್ತಾ ಈ ವಿದ್ಯಮಾನದಲ್ಲಿ ನಮ್ಮ ತಪ್ಪುಗಳೇನೆಂಬುದನ್ನು ನೋಡಿಕೊಳ್ಳಲೂ ನಿರಾಕರಿಸುತ್ತಿದ್ದೇವೆ. ಈ ಸಮಸ್ಯೆಯ ಮೂಲ ಸಾಂಸ್ಕೃತಿಕವಾದದ್ದಾಗಿದೆ: ಅದು ನಮ್ಮ ಪಕ್ಷಪಾತಿ ಲಿಂಗ ಸಂಬಂಧಗಳಲ್ಲಿ ಮನೆಮಾಡಿದೆ. ಇದು ನಮಗೆ ಬಹಳ ಕಾಲದಿಂದಲೂ ಗೊತ್ತಿರುವ ಸಂಗತಿಯೇ ಆಗಿದೆ. ಸ್ತ್ರೀವಾದಿಗಳು ಈ ಬಗ್ಗೆ ದಶಕಗಳಿಂದ ಕೆಲಸ ಮಾಡುತ್ತಾ ಅದರ ಬಗ್ಗೆ ಅರಿವನ್ನು ಹೆಚ್ಚಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ ನಮ್ಮ ಆಕ್ರೋಶಗಳು ಈ ಸಂಗತಿಯನ್ನು ಅರ್ಥೈಸಿಕೊಳ್ಳಲು ಪದೇಪದೇ ವಿಫಲವಾಗುತ್ತಿದೆ. ಹಲವಾರು ಕಾನೂನುಗಳಿದ್ದರೂ, ಹಲವಾರು ಪ್ರತಿಭಟನೆಗಳು ನಡೆದರೂ, ನಮ್ಮ ದಿನನಿತ್ಯದ ಆಚರಣೆಗಳಲ್ಲಿ ಅಡಕವಾಗಿರುವ ಲಿಂಗ ತಾರತಮ್ಯ ಧೋರಣೆಗಳನ್ನು ಗುರುತಿಸಿ ತಿದ್ದುಕೊಳ್ಳುತ್ತಾ ಪುರುಷಾಧಿಪತ್ಯದ ರಚನೆಗಳನ್ನು ಕೆಡವಬೇಕಿದೆಯೆಂಬ ಧ್ವನಿಗಳು ಆರೋಪಿ ರಕ್ಕಸರಿಂದ ತಮ್ಮನ್ನು ಪ್ರತ್ಯೇಕಗೊಳಿಸಿಕೊಳ್ಳಲಿಚ್ಛಿಸುವ ಪುರುಷಾಭಿಪ್ರಾಯಗಳ ಮಹಾಪೂರದಡಿಯಲ್ಲಿ ಕೊಚ್ಚಿಹೋಗುತ್ತ್ತವೆ. ಪ್ರತಿ ಘಟನೆ ನಡೆದಾಗಲೂ ಆಕ್ರೋಶ ಮತ್ತು ಹಿಂಸೆಯ ಮೂಲಕ ಪ್ರತಿಕ್ರಿಯಿಸುವಾಗ ಒಂದು ಸಮಾಜವಾಗಿ ನಾವು ನಮ್ಮ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ವಿಫಲವಾಗುತ್ತಿರುತ್ತೇವೆ. ದಿನನಿತ್ಯ ನಡೆಯುವ ಸಣ್ಣ ಪ್ರಮಾಣದ ಅನ್ಯಾಯಗಳನ್ನು ಕಡೆಗಣಿಸುತ್ತಾ ಸಾಗುವುದರಿಂದ ಪುರುಷರಲ್ಲಿ ಅನ್ಯಾಯದ ಬಗ್ಗೆ ಶಿಕ್ಷಾ ಭೀತಿಯು ಇಲ್ಲದಂತಾಗುತ್ತದೆ ಮತ್ತು ಕ್ರಮೇಣವಾಗಿ ದೊಡ್ಡ ಹಾಗೂ ಹೀನಾಯವಾದ ಅಪರಾಧವನ್ನು ಎಸಗುವಂತೆ ಸಜ್ಜುಗೊಳಿಸುತ್ತದೆ. ಬಹಳ ಸುಲಭವಾಗಿ ನಾವು ‘ಮೀ ಟೂ’ ಚಳವಳಿಯನ್ನು ಅಪಮೌಲ್ಯೀಕರಿಸುತ್ತೇವೆ. ಏಕೆಂದರೆ ಎಲ್ಲಿಯತನಕ ಹೆಂಗಸು ಹೆಣವಾಗಿ ಕಾಣುವುದಿಲ್ಲವೋ ಅಲ್ಲಿಯವರೆಗೆ ಆಕೆಯನ್ನು ಸಮಾಜ ನಂಬಲು ಸಿದ್ಧವಿರುವುದಿಲ್ಲ. ಲೈಂಗಿಕ ಕಿರುಕುಳದ ವಿಷಯವನ್ನು ನಾವು ಸುರಕ್ಷೆಯ ವಿಷಯವೆಂದು ಪರಿಗಣಿಸುವುದರಿಂದಲೇ ಹೆಂಗಸು ತನ್ನನ್ನು ತಾನು ರಕ್ಷಿಸಿಕೊಳ್ಳಬೇಕೆಂಬ ಮಾತುಗಳು ಹುಟ್ಟಿಕೊಳ್ಳುತ್ತವೆ. ಈಗ ಹೇಳಲಾಗುತ್ತಿರುವ ಪ್ರತಿಯೊಂದು ವಿಷಯವನ್ನೂ ಈಗಾಗಲೇ ಹೇಳಿಯಾಗಿದೆ. ಹೊಸದಾಗಿ ಹೇಳಲು ನಿಜಕ್ಕೂ ಏನೂ ಇಲ್ಲ. ಹೀಗೆ ಸಮಸ್ಯೆ ಇರುವುದು ಯಾರು ಇದನ್ನು ಕೇಳಬೇಕಿತ್ತೋ ಅವರಲ್ಲಿ. ಅವರು ಇದನ್ನು ಎಷ್ಟು ನಿರ್ದಿಷ್ಟವಾಗಿ ಕೇಳಬೇಕಿತ್ತೋ ಅಷ್ಟು ಕೇಳಿಸಿಕೊಳ್ಳುತ್ತಿಲ್ಲ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News