ವಿಶ್ವದ ಮೊಟ್ಟಮೊದಲ ಇಲೆಕ್ಟ್ರಿಕ್ ವಿಮಾನ ಹಾರಾಟ

Update: 2019-12-12 04:17 GMT

ವ್ಯಾಂಕೋವರ್: ವಿಶ್ವದ ಮೊಟ್ಟಮೊದಲ ಸಂಪೂರ್ಣ ವಿದ್ಯುತ್ ಚಾಲಿತ ವಾಣಿಜ್ಯ ವಿಮಾನದ ಉದ್ಘಾಟನಾ ಹಾರಾಟ ಕೆನಡಾದಲ್ಲಿ ನಡೆದಿದೆ. ಇದು ಮುಂದೊಂದು ದಿನ ಸಂಪೂರ್ಣ ಸ್ವಚ್ಛ ವಿಮಾನಯಾನದ ಕನಸು ಹುಟ್ಟುಹಾಕಿದೆ.

"ವಾಣಿಜ್ಯ ವಿಮಾನಯಾನ ಕ್ಷೇತ್ರ ಸಂಪೂರ್ಣ ವಿದ್ಯುತ್ ಚಾಲಿತವಾಗಲು ಸಾಧ್ಯ ಎನ್ನುವುದನ್ನು ಇದು ನಿರೂಪಿಸಿದೆ" ಎಂದು ಸಿಯಾಟೆಲ್ ಮೂಲದ ಇಂಜಿನಿಯರಿಂಗ್ ಘಟಕ ಮ್ಯಾಗ್ನಿಕ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಯಿ ಗ್ಯಾನ್‍ಝರಿಸ್ಕಿ ಹೇಳಿದ್ದಾರೆ.

ಈ ವಿಮಾನದ ಮೋಟರ್ ಅನ್ನು ಕಂಪನಿ ವಿನ್ಯಾಸಗೊಳಿಸಿದ್ದು, ಹಾರ್ಬರ್ ಏರ್ ಜತೆಗೆ ಸಹಯೋಗದಲ್ಲಿ ವಿಮಾನ ಅಭಿವೃದ್ಧಿಪಡಿಸಲಾಗಿದೆ. ಈ ವಿಮಾನಯಾನ ಸಂಸ್ಥೆ ವ್ಯಾಂಕೋವರ್ ಮತ್ತು ವಿಸ್ಲರ್ ಸ್ಕೈ ರೆಸಾರ್ಟ್ ಹಾಗೂ ಸುತ್ತಮುತ್ತಲ ದ್ವೀಪಗಳಿಗೆ 50 ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ವಿಮಾನಯಾನ ಸೇವೆ ಒದಗಿಸುತ್ತಿದೆ. ಈ ವಿನೂತನ ತಂತ್ರಜ್ಞಾನದಿಂದ ವಿಮಾನಯಾನ ಸಂಸ್ಥೆಗೆ ದೊಡ್ಡ ಪ್ರಮಾಣದ ವೆಚ್ಚ ಕಡಿತವಾಗಲಿದೆ ಎಂದು ಗ್ಯಾನ್‍ಝರಿಸ್ಕಿ ಹೇಳಿದ್ದಾರೆ. ಜತೆಗೆ ಇದು ಸಂಪೂರ್ಣ ಹೊಗೆಯುಗುಳುವಿಕೆ ರಹಿತ ವಿಮಾನವಾಗಿದೆ ಎಂದು ತಿಳಿಸಿದ್ದಾರೆ.

62 ವರ್ಷದ ಹಳೆಯ ವಿಮಾನ ಆರು ಮಂದಿ ಪ್ರಯಾಣಿಕರನ್ನು ಒಯ್ಯುವ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗಿದೆ. ಹಾರ್ಬರ್ ಏರ್ ನ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ರೆಗ್ ಮೆಕ್‍ಡಗಲ್ ಅವರು ಪೈಲಟ್ ಕಾರ್ಯ ನಿರ್ವಹಿಸುವ ಮೂಲಕ ಮೊದಲ ವಿದ್ಯುತ್ ವಿಮಾನಕ್ಕೆ ಚಾಲನೆ ನೀಡಿದರು.

ಯುರೋಪಿಯನ್ ಪರಿಸರ ಏಜೆನ್ಸಿ ಪ್ರಕಾರ, ವಿಮಾನಯಾನ ಕೈಗೊಳ್ಳುವ ಪ್ರತಿ ಪ್ರಯಾಣಿಕ ಒಂದು ಕಿಲೋಮೀಟರ್ ಸಂಚರಿಸುವಾಗ 285 ಗ್ರಾಂ ಇಂಗಾಲದ ಡೈ ಆಕ್ಸೈಡ್ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಇದು ಜಾಗತಿಕ ತಾಪಮಾನ ಹೆಚ್ಚಳ, ಹವಾಮಾನ ಬದಲಾವಣೆಗೆ ಕಾರಣವಾಗಿ ಭೀಕರ ಬರಗಾಲ, ಬಿರುಗಾಳಿ ಹಾಗೂ ಸಮುದ್ರಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. "ಇದು ಇಲೆಕ್ಟ್ರಿಕ್ ವಿಮಾನಯಾನ ಯುಗಾರಂಭಕ್ಕೆ ನಾಂದಿ ಹಾಡಿದೆ" ಎಂದು ಅವರು ಬಣ್ಣಿಸಿದ್ದಾರೆ.

ನಾಗರಿಕ ವಿಮಾನಯಾನವು ಇಂಗಾಲ ಬಿಡುಗಡೆಯ ಮೂಲವಾಗಿದ್ದು, ಜನ ಹೆಚ್ಚು ಹೆಚ್ಚು ವಿಮಾನಯಾನ ಕೈಗೊಳ್ಳುತ್ತಿರುವುದರಿಂದ ಮಾಲಿನ್ಯ ಕೂಡಾ ಹೆಚ್ಚುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ವಿದ್ಯುತ್ ಚಾಲಿತ ವಿಮಾನ ಸ್ವಚ್ಛ ಯಾನಕ್ಕೆ ಅನುವು ಮಾಡಿಕೊಡಲಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News